ಮಳೆ ಮಲ್ಲೇಶ್ವರ ಬೆಟ್ಟಕ್ಕೆ ವಾಹನ ಸಂಚಾರ ನಿಷೇಧ: ನ.11ರವರೆಗೆ
ಕಾಲ್ನಡಿಗೆಯಲ್ಲಿ ಮಾತ್ರ ಅವಕಾಶ
ಹಾಸನ: ಪ್ರೇಮದ ಊರಿನಲ್ಲಿ’ ಸಿನಿಮಾದಲ್ಲಿ ಅತ್ಯಂತ ಮನಮೋಹಕವಾಗಿ ಚಿತ್ರಿತಗೊಂಡಿರುವ ಮಳೆ ಮಲ್ಲೇಶ್ವರ ದೇವಾಲಯಕ್ಕೆ ಪ್ರವಾಸಿಗರ ಭೇಟಿ ದಿನೇ ದಿನೇ ಹೆಚ್ಷುತ್ತಿದ್ದು. ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ಇದರ ಪರಿಣಾಮವಾಗಿ ಮಳೆ ಮಲ್ಲೇಶ್ವರ ಗುಡಿಯ ಪ್ರಯಾಣಕ್ಕೆ ಕೆಲ ನಿರ್ಬಂಧಗಳನ್ನು ಹೇರಲಾಗಿದೆ.
ಇಲ್ಲಿಯ ಸೀಗೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿರುವ ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಗಳಲ್ಲಿ ಎಲ್ಲ ರೀತಿಯ ಖಾಸಗಿ ಹಾಗೂ ಪ್ರವಾಸಿ ವಾಹನಗಳ ಸಂಚಾರವನ್ನು ಅಕ್ಟೋಬರ್ 25ರಿಂದ ನವೆಂಬರ್ 11ರವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ತಾಯಿ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವ-2026 ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಿರ್ಬಂಧಿತ ಮಾರ್ಗಗಳು
ಬೇಲೂರು ಕಡೆಯಿಂದ ಕಲ್ಲೆರೆ ಗ್ರಾಮದ ಮೂಲಕ ವೀರಾಪುರ ಗ್ರಾಮದ ರಸ್ತೆ
ಹಳೇಬೀಡು ಕಡೆಯಿಂದ ಸೀಗೆ ಮತ್ತು ವೀರಾಪುರ ಗ್ರಾಮದ ರಸ್ತೆ
ಗೋಳೇನಹಳ್ಳಿ ಮಾರ್ಗವಾಗಿ ಸೀಗೆಗುಡ್ಡಕ್ಕೆ ಹೋಗುವ ರಸ್ತೆ
ನಿರ್ಬಂಧಕ್ಕೆ ಕಾರಣ
ಪ್ರೇಮದ ಊರಲ್ಲಿ ಕನ್ನಡ ಚಿತ್ರ ಬಿಡುಗಡೆಯಾದ ನಂತರ ಮಳೆ ಮಲ್ಲೇಶ್ವರ ದೇವಸ್ಥಾನ ಬಹಳ ಜನಪ್ರಿಯವಾಗಿದೆ. ಈ ಹಿಂದೆ ದಿನಕ್ಕೆ ಸುಮಾರು 50 ಜನ ಮಾತ್ರ ಭೇಟಿ ನೀಡುತ್ತಿದ್ದರೆ, ಈಗ ದಿನಕ್ಕೆ 5,000ಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ.
ಹಾಸನಾಂಬ ದೇವಿ ದರ್ಶನ ಮತ್ತು ಜಾತ್ರೆಯ ಸಮಯದಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ದೇವಸ್ಥಾನಕ್ಕೆ ಹೋಗುವ ದಾರಿ ಅತ್ಯಂತ ಕಿರಿದಾಗಿದ್ದು, ಕಡಿದಾದ ಇಳಿಜಾರಿನಿಂದ ಕೂಡಿದೆ. ತಡೆಕಂಬಗಳೂ ಇಲ್ಲದ ಕಾರಣ ವಾಹನ ಸಂಚಾರ ಅತ್ಯಂತ ಕಷ್ಟಕರವಾಗಿದೆ. ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ರಸ್ತೆ ಯೋಗ್ಯವಾಗಿಲ್ಲ ಎಂದು ಹಾಸನ ತಹಶೀಲ್ದಾರ್ ಮತ್ತು ಪೊಲೀಸ್ ಅಧೀಕ್ಷಕರು ತಿಳಿಸಿದ್ದರು. ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರೂ ವಾಹನ ದಟ್ಟಣೆಯನ್ನು ನಿಯಂತ್ರಿಸುವಂತೆ ಕೋರಿದ್ದರು.
ಪೊಲೀಸ್ ಉಪಾಧೀಕ್ಷಕರು ಅಕ್ಟೋಬರ್ 24ರಂದು ಸ್ಥಳ ಪರಿಶೀಲನೆ ನಡೆಸಿ ನಿರ್ಬಂಧ ಅಗತ್ಯವೆಂದು ಅಭಿಪ್ರಾಯ ನೀಡಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕ ಹಿತದೃಷ್ಟಿಯಿಂದ, ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 115 ಹಾಗೂ 1989ರ ನಿಯಮ 21ಎ(5)ರ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
ವಾಹನ ಸಂಚಾರ ನಿಷೇಧಿತ ಅವಧಿಯಲ್ಲಿ ಭಕ್ತರು ಹಾಗೂ ಪ್ರವಾಸಿಗರಿಗೆ ಕಾಲ್ನಡಿಗೆಯಲ್ಲಿ (By Walk) ಮಾತ್ರ ತೆರಳಲು ಅವಕಾಶ ಕಲ್ಪಿಸಲಾಗಿದೆ.


