Tuesday, July 21, 2026
spot_img

ಬ್ರಾಹ್ಮಣ ಸಭಾದಲ್ಲಿ ಅವ್ಯವಹಾರ:ಆಡಳಿತ ಮಂಡಳಿ ರಾಜೀನಾಮೆಗೆ ಆಗ್ರಹಿಸಿ ಧರಣಿ

*ಬ್ರಾಹ್ಮಣ ಸಭಾದಲ್ಲಿ 61 ಲಕ್ಷ ರೂ. ಅವ್ಯವಹಾರ ಆರೋಪ: ಆಡಳಿತ ಮಂಡಳಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ*

ಮಂಡ್ಯ : ನಗರದ ಬ್ರಾಹ್ಮಣ ಸಭಾ (ಗಾಯತ್ರಿ ಸಮುದಾಯ ಭವನ) ದಲ್ಲಿ 61 ಲಕ್ಷ ರೂ.ಗಳಿಗೂ ಅಧಿಕ ಹಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಬೆಳ್ಳೂರು ಶಿವರಾಮ್ ನೇತೃತ್ವದ ಆಡಳಿತ ಮಂಡಳಿಯ ರಾಜೀನಾಮೆಗೆ ಆಗ್ರಹಿಸಿ ಸಭಾದ ಸದಸ್ಯರು ಹಾಗೂ ನೂತನ ನಿರ್ದೇಶಕರು ಮಂಗಳವಾರ ಬ್ರಾಹ್ಮಣ ಸಭಾ ಮುಂಭಾಗದಲ್ಲಿ ಸಾಂಕೇತಿಕ ಶಾಂತಿಯುತ ಸತ್ಯಾಗ್ರಹ ನಡೆಸಿದರು.

ಬ್ರಾಹ್ಮಣ ಸಭಾ ಉಳಿಸಿ… ದುರುಪಯೋಗ ಹಣ ಕಟ್ಟಿ… ಇಲ್ಲ ಬೆಳ್ಳೂರ್ ಶಿವರಾಮ್ ತಂಡ ರಾಜೀನಾಮೆ ಕೊಡಿ… ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ ಸದಸ್ಯರು, ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಬ್ರಾಹ್ಮಣ ಸಭಾದ ಸದಸ್ಯರಾದ ಅರುಣ್ ಪ್ರಸಾದ್ ಮಾತನಾಡಿ, ಆಡಳಿತ ಮಂಡಳಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಲೆಕ್ಕಪರಿಶೋಧನೆ ನಡೆಸಲು ಹಿರಿಯರ ಸಮಿತಿ ರಚಿಸಲಾಗಿತ್ತು. ಸಮಿತಿಯು ಅಗತ್ಯ ದಾಖಲೆಗಳನ್ನು ಕೇಳಿದರೆ, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಿದ್ದಾರೆಯೇ ಹೊರತು ಸರಿಯಾದ ರೆಸಲ್ಯೂಷನ್ ಕಾಪಿ, ಬಿಲ್‌ಗಳು ದಾಖಲೆ ನೀಡುತ್ತಿಲ್ಲ. ಬದಲಾಗಿ ಅನಧಿಕೃತ ಬಿಲ್ ಬುಕ್‌ಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಕಳೆದ 10 ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗುತ್ತಾ ಬಂದಿರುವ ಬೆಳ್ಳೂರು ಶಿವರಾಮ್ ಹಾಗೂ ಶಂಕರ್ ನಾರಾಯಣ್ ಶಾಸ್ತ್ರಿ ಅವರ ತಂಡ 2024-25ನೇ ಸಾಲಿನಲ್ಲಿ ಬರೋಬ್ಬರಿ 61 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದೆ. ಜೊತೆಗೆ 1.20 ಕೋಟಿ ರೂ.ಗಳಷ್ಟು ತೆರಿಗೆ ಹಣವನ್ನು ಪಾವತಿಸದೆ ಉಳಿಸಿಕೊಂಡಿದ್ದಾರೆ. ಈ ಕೂಡಲೇ ಅವರು ದುರುಪಯೋಗಪಡಿಸಿಕೊಂಡಿರುವ ಹಣವನ್ನು ಕಟ್ಟಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಸಭಾದ ನಿರ್ದೇಶಕ ಹೊಳಲು ರಾಘವೇಂದ್ರ ಮಾತನಾಡಿ, ನಾವು ಅಧಿಕಾರಕ್ಕೆ ಬಂದಾಗ ಖಾತೆಯಲ್ಲಿ ಯಾವುದೇ ಹಣವಿರಲಿಲ್ಲ. ಆದರೆ ಕಳೆದ ಒಂದೂವರೆ ವರ್ಷದಲ್ಲಿ ನಾವು ಮೂವರು ಸ್ವತಂತ್ರ ನಿರ್ದೇಶಕರು ಪಾರದರ್ಶಕ ಆಡಳಿತ ನಡೆಸಿ 35 ರಿಂದ 40 ಲಕ್ಷ ರೂ. ಉಳಿತಾಯ ಮಾಡಿದ್ದೇವೆ. ಲೆಕ್ಕಪರಿಶೋಧನಾ ಸಮಿತಿಯ ವರದಿಯಲ್ಲಿ 61 ಲಕ್ಷ ರೂ. ಸೋರಿಕೆ ಹಾಗೂ ದುರುಪಯೋಗವಾಗಿರುವುದು ಸಾಬೀತಾಗಿದೆ ಎಂದು ಸ್ಪಷ್ಟಪಡಿಸಿದರು.

ಹಿಂದೆ ಡಾ. ನರಸಿಂಹಮೂರ್ತಿ, ಡಾ. ರಾಮರಾವ್, ಡಾ. ನಾರಾಯಣಸ್ವಾಮಿ ಅವರಂತಹ ಹಿರಿಯರು ಶ್ರಮಪಟ್ಟು ಈ ಸಭಾವನ್ನು ಕಟ್ಟಿದ್ದಾರೆ. ಆದರೆ ಇಂದಿನ ಆಡಳಿತ ಮಂಡಳಿಯವರು ಇಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇವರು ತಕ್ಷಣವೇ ಸಭಾದಿಂದ ತೊಲಗಬೇಕು. ಇದೇ 25ನೇ ತಾರೀಖು ಶನಿವಾರ ಸರ್ವಸದಸ್ಯರ ಸಭೆ ಕರೆಯಲಾಗಿದ್ದು, ಅಲ್ಲಿಯೂ ಅವರು ಗಲಾಟೆ ಎಬ್ಬಿಸಲು ಮುಂದಾದರೆ, ನಾವು ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!