Thursday, November 5, 2026
spot_img

ಭೂ ಕಬಳಿಕೆ: ಮಂಡ್ಯ ಜಿಲ್ಲೆಯ 6 ಸರ್ಕಾರಿ ಕಚೇರಿಗಳ ಶೋಧನೆಗೆ ಲೋಕಾ ವಾರಂಟ್

ಬೀಚನಕುಪ್ಪೆ ಸರ್ಕಾರಿ ಜಮೀನು ಕಬಳಿಕೆ ಆರೋಪ: ಆರು ಕಚೇರಿಗಳ ಮೇಲೆ ಲೋಕಾಯುಕ್ತ ಶೋಧನಾ ವಾರಂಟ್

ಬೆಂಗಳೂರು, ಅ.28:ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೀಚನಕುಪ್ಪೆಯ ಸರ್ವೆ ನಂ.76ರಲ್ಲಿನ ಸರ್ಕಾರಿ ಗೋಮಾಳ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ಆರೋಪದ ಮೇಲೆ, ಕರ್ನಾಟಕ ಲೋಕಾಯುಕ್ತ ಆರು ಸರ್ಕಾರಿ ಕಚೇರಿಗಳಲ್ಲಿ ಶೋಧ ನಡೆಸಲು ವಾರಂಟ್ ಹೊರಡಿಸಿದೆ. ಉಪಲೋಕಾಯುಕ್ತ-2 ನ್ಯಾ. ಬಿ.ವೀರಪ್ಪ ಅವರು ಲೋಕಾಯುಕ್ತ ಕಾಯ್ದೆ ಕಲಂ 10(1) ಅಡಿ ಈ ವಾರಂಟ್ ನೀಡಿದ್ದಾರೆ. ಮಂಡ್ಯ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಬ್ಯಾಟರಾಯಗೌಡ ಬಿ.ಪಿ. ಅವರಿಗೆ ಕಾರ್ಯಾಚರಣೆಯ ಹೊಣೆ ವಹಿಸಲಾಗಿದೆ.

**ದೂರು ಮತ್ತು ಆರೋಪ:** ಮೈಸೂರಿನ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸೆ.16ರಂದು ದೂರು ಸಲ್ಲಿಸಿದ್ದರು. ಚೇತನ್ ಪಿ. ತಯಾಲ್, ಅವರ ಪತ್ನಿ ಕುಸುಮಾ ತಯಾಲ್, ಧೀರಜ್ ಕುಮಾರ್ ಚುಬೆ ಹಾಗೂ ತಹಶೀಲ್ದಾರ್, ಭೂಮಾಪಕರು, ನೋಂದಣಾಧಿಕಾರಿಗಳು ಮತ್ತು ಕೆಐಎಡಿಬಿ ಅಧಿಕಾರಿಗಳು ಶಾಮೀಲಾಗಿ 128.33 ಎಕರೆ ಸರ್ಕಾರಿ ಜಮೀನಿನ ಹಕ್ಕುಗಳನ್ನು ಇತರರ ಹೆಸರಿನಲ್ಲಿ ನೋಂದಾಯಿಸಿ, ನಂತರ ತಯಾಲ್ ದಂಪತಿಗೆ ವರ್ಗಾಯಿಸಿದ್ದಾರೆ ಎಂಬುದು ದೂರು. ಮಂಡ್ಯ ಲೋಕಾಯುಕ್ತ ಎಸ್ಪಿ ಎಸ್. ಸುರೇಶ್‌ಬಾಬು ಅವರು ಸ್ಥಳ ಪರಿಶೀಲಿಸಿ ಪ್ರಾಥಮಿಕ ವರದಿ ಸಲ್ಲಿಸಿದ್ದರು.

ವರದಿಯಲ್ಲಿರುವ ಅಂಶಗಳು:
– ಸರ್ವೆ ನಂ.76ರಲ್ಲಿ ಒಟ್ಟು 166-31 ಎಕರೆ ಸರ್ಕಾರಿ ಗೋಮಾಳವಿದೆ. ಸಾಗುವಳಿ ವಿತರಣಾ ವಹಿಯಂತೆ ಕೇವಲ 10 ಮಂದಿಗೆ ಒಟ್ಟು 16-24 ಎಕರೆ ಮಂಜೂರಾಗಿದೆ.
– ಈ ಪೈಕಿ ಇಬ್ಬರ ತಲಾ 3 ಎಕರೆ (ಒಟ್ಟು 6 ಎಕರೆ) ಮಂಜೂರಾತಿಯನ್ನು ನಂತರ ಅನಧಿಕೃತವಾಗಿ ತಿದ್ದುಪಡಿ ಮಾಡಿ ಸೇರಿಸಲಾಗಿದೆ.
– ಸಾಗುವಳಿ ಮಂಜೂರಾತಿ ಇಲ್ಲದಿದ್ದರೂ ಪಹಣಿ (ಆರ್‌ಟಿಸಿ)ಯಲ್ಲಿ 28 ಮಂದಿಯ ಹೆಸರಿದೆ.
– ಭೂಸ್ವಾಧೀನ ಅಧಿಸೂಚನೆಗೊಂಡ 238-08 ಎಕರೆಯಲ್ಲಿ ಸುಮಾರು 200 ಎಕರೆ ಚೇತನ್ ತಯಾಲ್ ಮತ್ತು ಕುಟುಂಬಸ್ಥರ ಸ್ವಾಧೀನದಲ್ಲಿದೆ. ಆರ್‌ಟಿಸಿಯಲ್ಲಿ ಅವರ ಹೆಸರಿನಲ್ಲಿ 26-19 ಎಕರೆ ಇದೆ.
– 2023ರ ಮಾ.29ರಂದು ಪಾಂಡವಪುರ ಉಪವಿಭಾಗಾಧಿಕಾರಿ, ದಾಖಲೆಗಳೇ ಇಲ್ಲದ 43-08 ಎಕರೆಯನ್ನು “ಗೈರು ವಿಲೆ ಕಡತ” ಮಾಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಿದ್ದರು. ಇದನ್ನು ವರದಿ ಸಂಶಯಾಸ್ಪದ ಎಂದಿದೆ.
– 2024ರ ಆ.6 ಮತ್ತು 9ರಂದು ಐವರು ವ್ಯಕ್ತಿಗಳು ತಲಾ 4 ಎಕರೆಯಂತೆ ಒಟ್ಟು 16 ಎಕರೆಗೆ ಕುಸುಮ್ ತಯಾಲ್ ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ ಮಾಡಿಕೊಟ್ಟಿದ್ದಾರೆ. ಆದರೆ ಆ ಜಮೀನಿನ ಸ್ವಾಧೀನದ ವಿವರ ಆರ್‌ಟಿಸಿಯಲ್ಲಿ ಇಲ್ಲ.
– ಸಾಗುವಳಿ 16-24, ಆರ್‌ಟಿಸಿ 26-19 ಹಾಗೂ ಗೈರು ವಿಲೆ ಪ್ರಸ್ತಾವನೆ 43-08 ಎಕರೆ ಸೇರಿ ಒಟ್ಟು ಸುಮಾರು 86 ಎಕರೆಯನ್ನು ವಿವಿಧ ಅಕ್ರಮ ಮಾರ್ಗಗಳಿಂದ ಕಬಳಿಸುವ ಷಡ್ಯಂತ್ರ ಕಂಡುಬಂದಿದೆ ಎಂದು ಲೋಕಾಯುಕ್ತ ಹೇಳಿದೆ.
– ಈ ಜಮೀನು ಕೆಐಎಡಿಬಿಯ ಭೂಸ್ವಾಧೀನ ವ್ಯಾಪ್ತಿಯಲ್ಲಿದ್ದು (2015ರ ಜ.22ರ ಪ್ರಾಥಮಿಕ ಅಧಿಸೂಚನೆ), ಪರಿಹಾರ ಪಡೆಯುವ ದುರುದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಅನುಮಾನಿಸಲಾಗಿದೆ.

ಶೋಧ ನಡೆಯಲಿರುವ ಕಚೇರಿಗಳು: ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿ, ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿ, ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಶಾಖೆ, ಶ್ರೀರಂಗಪಟ್ಟಣ ಮತ್ತು ಮೈಸೂರು ಉತ್ತರ ಉಪ ನೋಂದಣಾಧಿಕಾರಿ ಕಚೇರಿಗಳು, ಹಾಗೂ ಮೈಸೂರಿನ ಮೆಟಗಳ್ಳಿಯಲ್ಲಿರುವ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಪ್ರಾದೇಶಿಕ ಕಚೇರಿ.

ಸಂಬಂಧಿತ ದಾಖಲೆ, ಸಾಮಗ್ರಿ ಮತ್ತು ಕಾಗದಪತ್ರಗಳ ವಶ, ದಾಖಲೆ ಮರೆಮಾಚಿದ ಶಂಕಿತರ ಪತ್ತೆ, ಬೀಗದ ಕೀ ಇಲ್ಲದಿದ್ದರೆ ಬಾಗಿಲು, ಪೆಟ್ಟಿಗೆ, ಲಾಕರ್ ಒಡೆದು ತೆರೆಯುವುದು ಹಾಗೂ ವಶಪಡಿಸಿಕೊಂಡ ಸಾಮಗ್ರಿಗೆ ಗುರುತು ಹಾಕುವ ಅಧಿಕಾರವನ್ನು ವಾರಂಟ್ ನೀಡಿದೆ. ಶೋಧ ಮುಗಿದ ತಕ್ಷಣ ಕೈಗೊಂಡ ಕ್ರಮದ ಬಗ್ಗೆ ಅನುಮೋದನೆಯೊಂದಿಗೆ ವರದಿ ಸಲ್ಲಿಸಬೇಕು.

 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!