Sunday, May 19, 2024
spot_img

ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಮಂಡ್ಯದಲ್ಲಿ ಪ್ರತಿಭಟನೆ

ಮಂಡ್ಯ : ಹಾಸನ ಜಿಲ್ಲೆಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣರನ್ನ ಬಂಧಿಸುವಂತೆ ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಒಕ್ಕೂಟದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.

ಹಾಸನದಲ್ಲಿ ಪೆನ್ ಡ್ರೈವ್ ಮುಖಾಂತರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಹರಿಬಿಡಲಾಗಿದೆ. ಆ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇಂತಹ ಕೃತ್ಯದ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿಯ ಚಿತ್ರಗಳು ಮತ್ತು ದೃಶ್ಯಗಳ ಮೂಲಕ ಮಹಿಳೆಯರ ಘನತೆ ಮತ್ತು ಖಾಸಗಿ ಬದುಕಿನ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದರು.

ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್ ಡಿ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ನೋಡಿದರೆ ಜನಪ್ರತಿನಿಧಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಣುತ್ತಿದೆ. ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪರಾದವಾಗುತ್ತದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಲಾಭವನ್ನಷ್ಟೇ ಗುರಿಯಾಗಿಸಿಕೊಂಡು ವಾಹಿಳೆಯರ ಖಾಸಗಿ ಬದುಕಿನ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿರುವುದು ಅತ್ಯಂತ ಹೀನ ಕೃತ್ಯವಾಗಿದೆ. ಆದ್ದರಿಂದ ಕೃತ್ಯ ಎಸಗಿದವರಷ್ಟೇ ಅಲ್ಲದೆ ಬಹಿರಂಗ ಪಡಿಸಿದವರೂ ಶಿಕ್ಷಾರ್ಹವೇ ಆಗಿದ್ದು ಹಾಗಾಗಿ ಪತ್ತೆ ಹಚ್ಚಿ ಸತ್ಯವನ್ನು ಬಹಿರಂಗ ಪಡಿಸಬೇಕು ಮತ್ತು ಇಂತಹ ಹೀನ ಕೃತ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನ ಮಾಡಿದವರನ್ನೂ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ದೂರು ದಾಖಲಿಸಲು ಸಿದ್ಧವಿರುವ ಮಹಿಳೆಯರಿಗೆ ಮಾಜಿ ಶಾಸಕ ಸಾ.ರಾ.ಮಹೇಶ್ ಬೆದರಿಕೆ ಹಾಕುತಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದ್ದು ಇವರ ವಿರುದ್ಧವೂ ಸಹ ಕ್ರಮ ವಹಿಸಬೇಕು, ಪ್ರಕರಣ ಕುರಿತು ವಿಶೇಷ ತನಿಖಾ ತಂಡ ಸೂಕ್ತ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಮುಂದಾಗಬೇಕು,

ಪ್ರಕರಣದ ತನಿಖೆಗೆ ಜನಸ್ನೇಹಿ ಹಾಗೂ ಮಹಿಳಾ ಪರ ಸಂವೇದನೆ ಹೊಂದಿರುವ ಪೋಲೀಸ್ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು, ಪ್ರಕರಣಕ್ಕೆ ನೇಮಕವಾಗಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರನ್ನು ನೇಮಿಸಿ ತನಿಖೆ ಚುರುಕಾಗಿ ನಡೆದು ಆದಷ್ಟು ಬೇಗ ಸತ್ಯಾಂಶ ಬಯಲು ಗೊಳಿಸಿ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ಸಾಕ್ಷಿ ನಾಶವಾಗದಂತೆ ಎಚ್ಚರವಹಿಸಬೇಕು. ಧರ್ಮಸ್ಥಳದ ಸೌಜನ್ಯ ಪ್ರಸರಣದಲ್ಲಿ ಪ್ರಾಥಮಿಕ ತನಿಖೆಯಲ್ಲಿನ ಲೋಪದಿಂದ ನ್ಯಾಯ ನೀಡಲು ಸಾಧ್ಯವಾಗಿಲ್ಲ ಎಂಬುದನ್ನು ಸಿಬಿಐ ನ್ಯಾಯಾಲಯ ಹೇಳಿದೆ, ಹಾಗಾಗಿ ಪ್ರಾಥಮಿಕ ತನಿಖೆಯನ್ನು ಸಮರ್ಪಕವಾಗಿ ನಡೆಸಬೇಕು. ಪ್ರಜ್ವಲ್ ರೇವಣ್ಣ ಅವರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳೆಯರ ಖಾಸಗಿ ಮತ್ತು ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಪೆನ್ ಡ್ರೈವ್ ಮುಖಾಂತರ ಸಾರ್ವಜನಿಕರಿಗೆ ವಿತರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಲು ಕಾರಣವಾದವರನ್ನು ಪತ್ತೆಹಚ್ಚಿ ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಚಿತ್ರೀಕರಣ ಮಾಡಿದವರು ಯಾರು ಪೆನ್ ಡ್ರೈವ್ ಯಾರಿಂದ ಬಂತು, ಯಾರು ಯಾರಿಗೆ ಪೆನ್ ಡ್ರೈವ್ ಹಂಚಿಕೆಯಾಗಿದೆ. ಮತ್ತು ಯಾವ ಮೊಬೈಲ್‌ನಿಂದ ಚಿತ್ರೀಕರಣವಾಗಿದೆ ಎನ್ನುವುದನ್ನು ಪತ್ತೆಹಚ್ಚಬೇಕು. ಪೆನ್‌ ಡ್ರೈವ್ ಲೈಂಗಿಕ ದೌರ್ಜನ್ಯದಲ್ಲಿ ಸಂತ್ರಸ್ತರಾಗಿರುವ ಮಹಿಳೆಯ ಗೌಪ್ಯತೆಯನ್ನು ಕಾಯಬೇಕು. ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಸಂತ್ರಸ್ತ ಮಹಿಳೆಯರಿಗಾಗಿ ಪ್ರತ್ಯೇಕ ಕೌನ್ಸಿಲಿಂಗ್ ಕೇಂದ್ರಗಳನ್ನು ತೆರೆಯಬೇಕು. ಹಾಗೂ ಸಂತ್ರಸ್ಥ ಮಹಿಳೆಯರಿಗೆ ದೂರು ದಾಖಲಿಸಲು ಅನುಕೂಲವಾಗುವಂತೆ ಹಾಸನ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕವಾದ ದೂರು ಕೇಂದ್ರಗಳನ್ನು ಸ್ಥಾಪಿಸಬೇಕು. ಜೊತೆಗೆ ದೂರು ದಾಖಲಿಸಲು ಬರುವ ಸಂತ್ರಸ್ಥ ಮಹಿಳೆಯರಿಗೆ ಸೂಕ್ತ ಭದ್ರತೆ ಮತ್ತು ಪ್ರಯಾಣ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಜನಪರ ಒಕ್ಕೂಟದ ದೇವಿ, ಸಿ.ಕುಮಾರಿ, ಸುನಂದಾಜಯರಾಮ್, ಲತಾ, ಸುಶೀಲಾ, ಮಂಜುಳಾ ಭರತ್ ರಾಜ್, ಪ್ರೇಮಮ್ಮ, ಪ್ರಿಯಾರಮೇಶ್, ಮಹಾದೇವಮ್ಮ, ಸತ್ಯಭಾಮ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಕೆಪಿಸಿಸಿ ಸದಸ್ಯೆ
ವಿಜಯಲಕ್ಷ್ಮಿ ರಘುನಂದನ್, ಸೋನಿಯಾ ಬ್ರಿಗ್ರೇಡ್ ಜಿಲ್ಲಾಧ್ಯಕ್ಷೆ ವೀಣಾ ಶಂಕರ್, ಹೀನಾ ಕೌಸರ್, ಶಾಂಭವಿ, ಕಿಸಾನ್ ಕಾಂಗ್ರೆಸ್ ಮೇಲುಕೋಟೆ ಕ್ಷೇತ್ರದ ಅಧ್ಯಕ್ಷ ಸಿ.ಆರ್.ರಮೇಶ್, ಕುರುಬರ ಸಂಘದ ಪಾಂಡವಪುರ
ತಾಲೂಕು ಅಧ್ಯಕ್ಷ ಡಿ.ಹುಚ್ಚೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡರಾದ ಕೊತ್ತತ್ತಿ ರಾಜು,
ಕೋ.ಪು.ಗುಣಶೇಖರ್, ಎಚ್.ವಿ.ನಾಗರಾಜು ಇತರರು ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!