Wednesday, October 14, 2026
spot_img

ಮೈಶುಗರ್ ಕಪ್ಪುಕಣ:ಮಂಡ್ಯದ ನಾಗರೀಕರು ಹೈರಾಣ!

ಮೈಶುಗರ್ ಕಾರ್ಖಾನೆಯ ಕಪ್ಪು ಬೂದಿಗೆ ಮಂಡ್ಯ ನಾಗರಿಕರು ಹೈರಾಣ; ತಕ್ಷಣ ಕ್ರಮಕ್ಕೆ ಕರುನಾಡ ಸೇವಕರು ಆಗ್ರಹ

ಮಂಡ್ಯ: ಮೈಸೂರು ಸಕ್ಕರೆ ಕಂಪನಿ ನಿಯಮಿತ (ಮೈಶುಗರ್) ಕಾರ್ಖಾನೆಯ ಚಿಮಣಿಯಿಂದ ಹೊರಬರುತ್ತಿರುವ ಕಪ್ಪು ಬೂದಿ ಮಂಡ್ಯ ನಗರದ ಹಲವು ಬಡಾವಣೆಗಳಲ್ಲಿ ಹರಡುತ್ತಿದ್ದು, ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ. ನಾಗಣ್ಣಗೌಡ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಗಾಳಿಯಲ್ಲಿ ತೇಲುವ ಬೂದಿ ಕಣಗಳು ಕಣ್ಣಿಗೆ ಬೀಳುವುದರಿಂದ ಕಣ್ಣು ಉರಿ, ಕೆಂಪಾಗುವಿಕೆ, ನೀರು ಸುರಿಯುವುದು ಹಾಗೂ ಕಿರಿಕಿರಿ ಉಂಟಾಗುತ್ತಿದೆ. ಮನೆಯ ಹೊರಗೆ ಒಣಗಿಸಿದ ಬಟ್ಟೆಗಳ ಮೇಲೆ ಕಪ್ಪು ಕಲೆಗಳು ಅಂಟಿಕೊಂಡು ಹಾಳಾಗುತ್ತಿವೆ. ಮನೆಗಳು, ಆಹಾರ ಪದಾರ್ಥಗಳು, ಕುಡಿಯುವ ನೀರಿನ ಪಾತ್ರೆಗಳು ಹಾಗೂ ವಾಹನಗಳ ಮೇಲೆ ಕಪ್ಪು ಧೂಳು ಕುಳಿತು ಸ್ವಚ್ಛತೆ ಕಾಪಾಡುವುದೇ ಕಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕಣಗಳನ್ನು ಉಸಿರಾಡುವುದರಿಂದ ಮಕ್ಕಳು, ವೃದ್ಧರು ಹಾಗೂ ಅಸ್ತಮಾ ಮತ್ತು ಉಸಿರಾಟದ ತೊಂದರೆ ಇರುವವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಘಟನೆಯ ಆಗ್ರಹಗಳು:
ಚಿಮಣಿಗೆ ಬೂದಿ ತಡೆಯುವ ಸಾಧನ (ಡಸ್ಟ್ ಕಲೆಕ್ಟರ್/ಸ್ಕ್ರಬ್ಬರ್/ಫಿಲ್ಟರ್) ಅಳವಡಿಸುವುದು, ಅಥವಾ ಈಗಿರುವ ಸಾಧನಗಳನ್ನು ದುರಸ್ತಿಗೊಳಿಸಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು
ಬಾಯ್ಲರ್ ಮತ್ತು ಇಂಧನ ದಹನ ವ್ಯವಸ್ಥೆಯನ್ನು ನಿಯಮಿತವಾಗಿ ಪರಿಶೀಲಿಸಿ ಹೊಗೆ ಹಾಗೂ ಬೂದಿ ಹೊರಸೂಸುವಿಕೆ ನಿಯಂತ್ರಿಸುವುದು

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು
ಬೂದಿಯ ಸಂಗ್ರಹಣೆ ಮತ್ತು ಸಾಗಾಣಿಕೆಯನ್ನು ಮುಚ್ಚಿದ ವ್ಯವಸ್ಥೆಯಲ್ಲಿ ಮಾಡುವುದು
ಪೀಡಿತ ಪ್ರದೇಶಗಳ ನಾಗರಿಕರ ಕುಂದುಕೊರತೆ ಆಲಿಸಿ ಪರಿಹಾರ ಕ್ರಮ ಕೈಗೊಳ್ಳುವುದು
ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದಿದ್ದರೆ, ನಾಗರಿಕರ ಆರೋಗ್ಯ ಮತ್ತು ಜೀವನ ಗುಣಮಟ್ಟಕ್ಕೆ ಧಕ್ಕೆಯಾಗುವುದರಿಂದ, ಮುಂದಿನ ಹಂತದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದು ನಾಗಣ್ಣಗೌಡ ಎಚ್ಚರಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಅವರು ಕೋರಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!