ರಾಜಕೀಯ ಉದ್ದೇಶಕ್ಕೆ ಮೈಶುಗರ್ ಲೆಟರ್ಹೆಡ್ ಬಳಕೆ?
ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಅಧಿಕೃತ ಪತ್ರದ ದುರ್ಬಳಕೆ : ಅಧ್ಯಕ್ಷ ಸಿ.ಡಿ. ಗಂಗಾಧರ್ ವಿರುದ್ಧ ಆಕ್ಷೇಪ
ಮಂಡ್ಯ: ಸರ್ಕಾರಿ ಸ್ವಾಮ್ಯದ ಮೈಶುಗರ್ (ದಿ ಮೈಸೂರು ಶುಗರ್ ಕಂಪನಿ ಲಿಮಿಟೆಡ್) ಸಂಸ್ಥೆಯ ಅಧಿಕೃತ ಲೆಟರ್ಹೆಡ್ ಅನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡಿದ್ದು ಕಾರ್ಖಾನೆಯ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರ ನಡೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
2026ರ ಅಕ್ಟೋಬರ್ 16ರ ದಿನಾಂಕ ಹೊಂದಿರುವ ಪತ್ರವು ಮೈಶುಗರ್ ಸಂಸ್ಥೆಯ ಅಧಿಕೃತ ಲೆಟರ್ಹೆಡ್ನಲ್ಲಿ ಸಿದ್ಧಪಡಿಸಲಾಗಿದೆ. ಅದರಲ್ಲಿ ರಾಜ್ಯ ಸಭಾ ಸದಸ್ಯರೊಬ್ಬರು, ಕೇಂದ್ರ ಸಚಿವರು ಹಾಗೂ ರಾಜ್ಯದ ವಿವಿಧ ರಾಜಕೀಯ ಮುಖಂಡರ ಹೆಸರನ್ನು ಉಲ್ಲೇಖಿಸಲಾಗಿದೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ದದ ಪತ್ರಿಕಾ ಗೋಷ್ಡಿಗೆ ಮೈಶುಗರ್ ಕಾರ್ಖಾನೆಯ ಲೆಟರ್ ಹೆಡ್ ದುರ್ಬಳಕೆ ಮಾಡಲಾಗಿದೆ.ಪತ್ರದ ವಿಷಯ ಮತ್ತು ಅದರ ಉದ್ದೇಶದ ಹಿನ್ನೆಲೆಯಲ್ಲಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಅಧಿಕೃತ ಹೆಸರನ್ನು ರಾಜಕೀಯ ವಿಚಾರಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಮೈಶುಗರ್ ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಉದ್ಯಮ ಸಂಸ್ಥೆಯಾಗಿದ್ದು, ಅದರ ಅಧಿಕೃತ ಲೆಟರ್ಹೆಡ್ ಅನ್ನು ಸಂಸ್ಥೆಯ ಆಡಳಿತಾತ್ಮಕ ಹಾಗೂ ಅಧಿಕೃತ ವ್ಯವಹಾರಗಳಿಗೆ ಬಳಸಬೇಕೆಂಬ ನಿರೀಕ್ಷೆ ಸಾರ್ವಜನಿಕರಲ್ಲಿದೆ ಮತ್ತು ಅದು ನಿಯಮವೂ ಸಹ ಆಗಿದೆ.
ಇಂತಹ ಲೆಟರ್ಹೆಡ್ನಲ್ಲಿ ರಾಜಕೀಯ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ಪತ್ರ ಹೊರಡಿಸಿರುವುದು ಸಂಸ್ಥೆಯ ಆಡಳಿತಾತ್ಮಕ ತಟಸ್ಥತೆಯ ಕುರಿತು ಪ್ರಶ್ನೆಗಳನ್ನು ಎತ್ತಿದೆ.
ಅಧಿಕೃತ ಲೆಟರ್ಹೆಡ್ ಬಳಕೆಗೆ ಅನುಮತಿ ಇದೆಯೇ?
ಸಂಬಂಧಪಟ್ಟ ಪತ್ರವನ್ನು ಯಾವ ಉದ್ದೇಶಕ್ಕಾಗಿ ಹೊರಡಿಸಲಾಗಿದೆ, ಅದಕ್ಕೆ ಆಡಳಿತ ಮಂಡಳಿಯ ಅನುಮೋದನೆ ಇದೆಯೇ, ಪತ್ರದ ವಿಷಯವು ಕಾರ್ಖಾನೆಯ ಅಧಿಕೃತ ಕಾರ್ಯವ್ಯಾಪ್ತಿಗೆ ಸಂಬಂಧಿಸಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಈ ಪತ್ರವನ್ನು ಹೊರಡಿಸುವಲ್ಲಿ ಅಧ್ಯಕ್ಷರ ಪಾತ್ರವೇನು ಮತ್ತು ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಇಂತಹ ಬಳಕೆಗೆ ಅವಕಾಶವಿದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕಾಗಿದೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕೇ ಹೊರತು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಹಿತಾಸಕ್ತಿಗೆ ಅನುಗುಣವಾಗಿ ನಡೆಯಬಾರದು ಎಂಬುದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯ ಮೂಲ ಆಶಯವಾಗಿದೆ.
ತನಿಖೆಗೆ ಆಗ್ರಹ
ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಪತ್ರದ ಉದ್ದೇಶ, ಅದನ್ನು ಹೊರಡಿಸಲು ನೀಡಲಾದ ಅನುಮತಿ ಹಾಗೂ ಅಧಿಕೃತ ಲೆಟರ್ಹೆಡ್ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘನೆ ಅಥವಾ ಅಧಿಕಾರ ದುರುಪಯೋಗ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಸರ್ಕಾರಿ ಸ್ವಾಮ್ಯದ ಮೈಶುಗರ್ ಸಂಸ್ಥೆಯ ಘನತೆ, ಆಡಳಿತಾತ್ಮಕ ಸ್ವಾಯತ್ತತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಕಾಪಾಡುವ ನಿಟ್ಟಿನಲ್ಲಿ ಈ ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.
ಮೈಶುಗರ್ ನಲ್ಲಿ ಸಾಕಷ್ಟು ಭ್ರಷ್ಟಾಚಾರ ಎಸಗಿ ತನಿಖೆಯಲ್ಲಿ ಸಾಬೀತಾದರೂ ಉಸ್ತುವಾರಿ ಸಚಿವರ ಕೃಪಕಟಾಕ್ಷದಿಂದ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುತ್ತಿರುವ ಗಂಗಾಧರ್ ತಮ್ಮ ಪಕ್ಷದ ನಾಯಕರ ಓಲೈಕೆಗಾಗಿ ಸರ್ಕಾರಿ ಸ್ವಾಮ್ಯದ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿರುವುದು ಮೈಶುಗರ್ ಆಡಳಿತ ಹಳಿ ತಪ್ಪಿರುವ ಅಂತಿಮ ಘಟ್ಟ ಎನ್ನಲಾಗಿದೆ.


