ರಾಜ್ಯದ ನಗರ ಪಟ್ಟಣಗಳ ಸ್ವಚ್ಚತೆ ಹಾಗೂ ಕುಡಿಯುವ ನೀರು ಸರಬರಾಜಿನಲ್ಲಿ ತೊಡಗಿಕೊಂಡಿರುವ ಶ್ರಮಜೀವಿಗಳೇ ನಗರಗಳ ಜೀವಾಳವಾಗಿದ್ದಾರೆ.ಆದರೆ ಈ ಶ್ರಮಜೀವಿಗಳ ಪರವಾಗಿ ನೀತಿ ರೂಪಿಸುವಲ್ಲಿ ವ್ಯವಸ್ಥೆ ಸೋತಿದೆಯೆಂದು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ವಿಷಾದಿಸಿದರು.
ಮಂಡ್ಯ ನಗರಸಭೆ ಸಭಾಂಗಣಾದಲ್ಲಿ ವಯೋನಿವೃತ್ತಿ ಹೊಂದಿದ ಪೌರಕಾರ್ಮಿಕ ಮಹದೇವರವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು.ಕಳೆದ ೩೫ ವರ್ಷಗಳ ಕಾಲ ಈ ನಗರವನ್ನ ಸ್ವಚ್ಚವಾಗಿಡುವಲ್ಲಿ ತಮ್ಮ ಬೆವರು ಸುರಿಸಿದ ಈ ಕಾರ್ಮಿಕರಿಗೆ ಈಗ ಬರಿಗೈ ವಿದಾಯ ಹೇಳಲಾಗುತ್ತಿದೆ.
ನಗರಗಳಿಗೆ ಸ್ವಚ್ಚತೆ ಹಾಗೂ ಕುಡಿಯುವ ನೀರಿನ ಪೂರೈಕೆ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ರೂಪಿಸುವ ಸರಕಾರ ಸ್ವಚ್ಚತೆಗೆ ಕಾರಣರಾದ ಕಾರ್ಮಿಕರ ಬಗ್ಗೆ ಯಾವುದೆ ಅನುಕೂಲ ಮಾಡಿಕೊಡುವ ನೀತಿ ರೂಪಿಸಿಲ್ಲ.ಇದರ ಪರಿಣಾಮ ಹತ್ತಾರು ವರ್ಷ ದುಡಿದ ಪೌರಕಾರ್ಮಿಕರು ಹೊರಗುತ್ತಿಗೆ ನೌಕರರು ತಮ್ಮ ನಿವೃತ್ತಿಯ ಬದುಕಿನ ಬಗ್ಗೆ ಅತಂತ್ರರಾಗಿದ್ದಾರೆ.
ನಿವೃತ್ತಿಯ ನಂತರ ಯಾವುದೆ ಆದಾಯವಿಲ್ಲದೆ ಸರಕಾರದಿಂದ ಯಾವುದೆ ಆರ್ಥಿಕ ಸೌಲಭ್ಯವಿಲ್ಲದೆ ದೈನಂದಿನ ಬದುಕು ನರಕಸದೃಶ್ಯವಾಗಲಿದೆ.ಇಡೀ ಜೀವಮಾನ ನಗರದ ಸ್ವಚ್ಚತೆಗಾಗಿ ದುಡಿದವರನ್ನು ಬರಿಗೈಲಿ ಕಳುಹಿಸುವ ಈ ವ್ಯವಸ್ಥೆ ನಿಜಕ್ಕು ಅಮಾನವೀಯ ಮತ್ತು ಪ್ರಜಾಪ್ರಭುತ್ವ ವಿರೋಧಿಯಾದುದು ಎಂದು ವ್ಯಾಖ್ಯಾನಿಸಿದರು.
ಸರಕಾರ ಕೂಡಲೇ ೬೦ ವರ್ಷ ತುಂಬಿದ ಎಲ್ಲ ಹೊರಗುತ್ತಿಗೆ ನೌಕರರಿಗೆ ಕನಿಷ್ಟ ೧೦ ಲಕ್ಷ ರೂಪಾಯಿ ಇಡುಗಂಟು ನೀಡಿ ನಿವೃತ್ತಿಯ ಬದುಕನ್ನು ಸಹನೀಯಗೊಳಿಸಬೇಕು.ಹೊರಗುತ್ತಿಗೆ ನೌಕರರು ಘನತೆಯಿಂದ ಬದುಕುವ ವಾತಾವರ ಣವನ್ನು ಸರಕಾರ ಸೃಷ್ಟಿಸಬೇಕು.ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಪೌರಕಾರ್ಮಿಕರ ಹುದ್ದೆಗಳ ಭರ್ತಿ ಜೊತೆಗೆ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಚಾಲಕರು ನೀರು ಸರಬರಾಜು ಸಹಾಯಕರನ್ನು ನೇರಪಾವತಿಗೆ ತರಬೇಕು.
ವಯೋ ನಿವೃತ್ತಿ ಹೊಂದಿದ ಪೌರಕಾರ್ಮಿಕರ ಕುಟುಂಬಗಳ ಆವಲಂಬಿತರಿಗೆ ಖಾಲಿಯಿರುವ ಪೌರಕಾರ್ಮಿಕ ಹುದ್ದೆಗಳಿಗೆ ಭರ್ತಿ ಮಾಡಬೇಕು ಎಂದರು.
ಆಯುಕ್ತೆ ಪಂಪಾಶ್ರೀ ಸರಕಾರದ ವತಿಯಿಂದ ನಿವೃತ್ತ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಸಮಾರಂಭದಲ್ಲಿ ಪರಿಸರ ಅಭಿಯಂತರ ರುದ್ರೇಗೌಡ.ಕಚೇರಿ ವ್ಯವಸ್ಥಾಪಕಿ ಕಲ್ಪಾ.ಲೆಕ್ಕಾಧಿಕಾರಿ ಮಂಜುನಾಥ್.ರಾಜಸ್ವ ನಿರೀಕ್ಷಕ ರಾಜಶೇಖರ.ಆರೋಗ್ಯ ನಿರೀಕ್ಷಕ ಚಲುವರಾಜು.ಅಶ್ವಥ್.ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್ ನಾಗರಾಜು.ಪ್ರಕಾಶ್.ಮಂಜುನಾಥ್.ರಾಜೂ ರಾಜೇಶ್.ಶಿವಕುಮಾರ್ ನೀರು ಸರಬರಾಜು ಸಹಾಯಕರ ಸಂಘದ ಎಸ್ ಕೆ ರಾಜೂಗೌಡ ಸೇರಿದಂತೆ ಪೌರಕಾರ್ಮಿಕರು ಭಾಗೀಯಾಗಿದ್ದರು.


