ತುಮಕೂರು: ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಲೆನ್ಸ್ ಅಳವಡಿಸಲು ₹6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಆಸ್ಪತ್ರೆ ವೈದ್ಯೆ ಸವಿತಾ, ಸಹಾಯಕ ಹೊರಗುತ್ತಿಗೆ ನೌಕರ ಮನೋಜ್ ಆಸ್ಪತ್ರೆಯಲ್ಲಿ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಗರದ ಉಪ್ಪಾರಹಳ್ಳಿಯ ಆಟೊ ಚಾಲಕ ಅವಿನಾಶ್ ತಮ್ಮ ತಾಯಿ ಮಂಗಳಮ್ಮ ಅವರನ್ನು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಜ್ಞ ವೈದ್ಯೆ ಸವಿತಾ ಕಣ್ಣು ಪರೀಕ್ಷಿಸಿದ್ದರು. ಪೊರೆ ಬೆಳೆದಿದೆ, ಶಸ್ತ್ರಚಿಕಿತ್ಸೆ ಮಾಡಬೇಕು. ಶಸ್ತ್ರಚಿಕಿತ್ಸೆಯ ಲೆನ್ಸ್‌ಗೆ ₹6 ಸಾವಿರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.
‘ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆ ಉಚಿತವಾಗಿ ಮಾಡುತ್ತಾರಲ್ಲ’ ಎಂದು ಅವಿನಾಶ್ ಪ್ರಶ್ನಿಸಿದ್ದರು. ‘ಉಚಿತವಾಗಿ ಚಿಕಿತ್ಸೆ ಪಡೆಯಬೇಕಾದರೆ ಬೆಂಗಳೂರಿನ ಮಿಂಟೊ ಆಸ್ಪತ್ರೆಗೆ ಹೋಗಬೇಕು. ₹6 ಸಾವಿರ ಹಣ ಕೊಟ್ಟರೆ ಮಾತ್ರ ಇಲ್ಲಿಯೇ ಚಿಕಿತ್ಸೆ ಮಾಡಲಾಗುವುದು’ ಎಂದು ಸವಿತಾ ಹೇಳಿದ್ದರು.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಟಿ.ರಾಜು ಹಣದ ಸಮೇತ ಮನೋಜ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸವಿತಾ ಹೆಸರು ಹೇಳಿದ್ದಾರೆ. ನಂತರ ಇಬ್ಬರನ್ನು ಬಂಧಿಸಿ ವಿಚಾರ ಮುಂದುವರಿಸಿದ್ದಾರೆ.
‘ಲೋಕಾಯುಕ್ತ ಡಿವೈಎಸ್‌ಪಿ ಕೆ.ಎಂ.ಸಂತೋಷ್ ಮತ್ತು ಮಂಜುನಾಥ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಟಿ.ರಾಜು, ಬಿ.ಮೊಹ್ಮದ್ ಸಲೀಂ ಹಾಗೂ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿತ್ತು’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.


