ರೋಗ ಪರೀಕ್ಷೆ ಪ್ರಯೋಗಾಲಯಗಳ(ಸ್ಕಾನಿಂಗ್ ಸೆಂಟರ್) ವಿರುದ್ದದ ಸಮಗ್ರ ತನಿಖೆಗೆ ಹಾಗೂ ತಪ್ಪಿತಸ್ಥ ಅಧಿಕಾರಿಗಳ ಅಮಾನತ್ತಿಗೆ ಆಗ್ರಹ
ಮಂಡ್ಯ:ನಿಯಮಬಾಹಿರವಾಗಿ ಭ್ರೂಣ ಪರೀಕ್ಷೆ ಮಾಡುತ್ತಿದ್ದ ರೋಗ ಪರೀಕ್ಷೆ ಪ್ರಯೋಗಾಲಯಗಳ(ಸ್ಕಾನಿಂಗ್ ಸೆಂಟರ್) ಮೇಲೆ ಲೋಕಾಯುಕ್ತ ಸ್ವಯಂಪ್ರೇರಿತ ಧಾಳಿ ನಡೆಸಿ ಅಕ್ರಮಗಳನ್ನು ಬಯಲಿಗೆಳೆದಿದ್ದು ಈ ಕುರಿತು ಸಮಗ್ರ ತನಿಖೆ ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತಿನಲ್ಲಿರಿಸಿ ತನಿಖೆ ನಡೆಸುವಂತೆ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು.
ಬಹುತೇಕ ಖಾಸಗಿ ಪ್ರಯೋಗಾಲಯಗಳು ಅಕ್ರಮವಾಗಿ ಭ್ರೂಣ ಪರೀಕ್ಷೆ ನಡೆಸುತ್ತಿರುವುದು ಲೋಕಾಯುಕ್ತ ಪರಿಶೀಲನೆ ವೇಳೆಯಲ್ಲಿ ಕಂಡು ಬಂದಿದೆ ಇದು ಸರ್ಕಾರಿ ಆಸ್ಪತ್ರೆಗಳ ವೈದ್ಯರ ಹಾಗೂ ಖಾಸಗಿ ಪ್ರಯೋಗಾಲಯಗಳ ನಡುವಿನ ಅಪವಿತ್ರ ಮೈತ್ರಿಯ ಕಾರಣವಾಗಿದೆ. ಬಹುತೇಕ ಜಿಲ್ಲೆಯಲ್ಲಿನ ಪ್ರಯೋಗಾಲಯಗಳು ನಿಯಮಬಾಹಿರವಾಗಿ ಭ್ರೂಣ ಪರೀಕ್ಷೆ ಮತ್ತು ಸಮರ್ಪಕ ದಾಖಲೆಗಳನ್ನು ನಿರ್ವಹಿಸದಿರುವುದು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿಯಮಾನುಸಾರ ಕಾಲ ಕಾಲಕ್ಕೆ ತಪಾಸಣೆ ನಡೆಸದೆ ನಿರ್ಲಕ್ಷ ಹಾಗೂ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದರು.
ಈ ಪ್ರಕರಣದಲ್ಲಿ
1)medical termination of pregnancy act -1971
2) pre conception and prenatal diagnostic techniques act -1994 and pre conception and prenatal diagnostic techniques act -2003
3) drug and cosmetic rule – 1945 ಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಯಾವುದೇ ಭಯ ಭೀತಿಯಿಲ್ಲದೆ ಉಲ್ಲಂಘಿಸಿರುವುದು ಮತ್ತು ಈ ಅಧಿನಿಯಮ ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದ ಸಂಬಂಧಪಟ್ಟ ಜವಾಬ್ದಾರಿಯುತ ಅಧಿಕಾರಿಗಳು, ಪಟ್ಟ ಭದ್ರ ಹಿತಾಸಕ್ತಿಗಳ ಜತೆ ಕೈ ಜೋಡಿಸಿರುವ ಅನುಮಾನ ನಮ್ಮನ್ನು ಕಾಡುತ್ತಿದೆ . ಭ್ರೂಣಪರೀಕ್ಷೇ ತಡೆಯುವ ಸಲುವಾಗಿಯೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪಿಸಿಟಿ ಎನ್ ಡಿಟಿ ಕಾಯ್ದೆ ಅನುಷ್ಟಾನ ಸಮಿತಿ ನಿಷ್ಕಿಯವಾಗಿರುವುದು ಕಂಡುಬಂದಿದ್ದು.ಈ ಸಮಿತಿಯನ್ನು ವಿಸರ್ಜಿಸುವುದು ಸೂಕ್ತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇದ್ದರೂ ಅದಕ್ಕೆ ಬೇಕಾದ ರೆಡಿಯಾಲಿಜಿಸ್ಟ್ಗಳನ್ನು ನೇಮಕಗೊಳಿಸಿರುವುದಿಲ್ಲ. ಕಾರಣ ಬಹುತೇಕ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಖಾಸಗಿ ಪ್ರಯೋಗಾಲಯಗಳಲ್ಲಿ ಹೂಡಿಕೆ ಮಾಡಿರುವುದು ಒಂದು ಪ್ರಮುಖ ಕಾರಣವಾಗಿದೆ..ಈ ಕುರಿತು ದನಿ ಎತ್ತುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ವಿಫಲರಾಗಿದ್ದಾರೆ.ಬರೇ ಕಟ್ಟಡಗಳನ್ನು ನಿರ್ಮಿಸುವಲ್ಲಿ ಯಂತ್ರಗಳನ್ನು ಖರೀದಿಸುವಲ್ಲಿ ತೋರುವ ಆಸಕ್ತಿಯನ್ನು ಅಗತ್ಯ ಸಿಬ್ಬಂದಿ ನೇಮಕಕ್ಕು ತೋರಬೇಕಿದೆ. ಈ ಹಿನ್ನಲೆಯಲ್ಲಿ ತನಿಖೆಯು ಸಮಗ್ರ ಅಯಾಮಗಳಿಂದ ನಡೆಯುವ ಅವಶ್ಯವಿದ್ದು.ತನಿಖೆಯ ಮೇಲೆ ನಿಗಾ ವಹಿಸಲು ಹೈಕೋರ್ಟ್ ನ್ಯಾಯಮೂರ್ತಿಗಳ ಉಸ್ತುವಾರಿ ಸಮಿತಿಯನ್ನು ರಚಿಸುವಂತೆ ಆಗ್ರಹಿಸಿದರು.
ಇದಲ್ಲದೆ ಈ ಪ್ರಕರಣದಲ್ಲಿ ಕರ್ತವ್ಯ ಲೋಪ.ನಿರ್ಲಕ್ಷ್ಯ ಎಸಗಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇರಿಸಬೇಕು. ಈಗಾಗಾಲೆ ಚಾಲ್ತಿಯಲ್ಲಿರುವ ಬಾಲಿಕ ತಂತ್ರಾಂಶವನ್ಮು ಸಮರ್ಪಕವಾಗಿ ನಿರ್ವಹಿಸಬೇಕು.ಅಕ್ರಮ ಎಸಗಿರುವ ರೋಗ ಪರೀಕ್ಷಾ ಕೇಂದ್ರಗಳ ಮೇಲೆ ಪೋಲಿಸ್ ಠಾಣೆಯಲ್ಲಿ ನಿಯಮಾನುಸಾರ ಪ್ರಕರಣ ದಾಖಲಿಸಬೇಕಿದೆ.
ಸದರಿ ಪ್ರಕರಣ ಕೇವಲ ಜಿಲ್ಲೆಗೆ ಸಂಬಂಧಿಸಿದ ಘಟನೆ ಮಾತ್ರವಲ್ಲ ಇಡೀ ರಾಜ್ಯದ ಆರೋಗ್ಯ ವ್ಯವಸ್ಥೆ ಇದೇ ಮಾದರಿಯಲ್ಲಿದ್ದು ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಈ ಎಲ್ಲ ಕ್ರಮಗಳ ಅವಶ್ಯವಿದೆ.
_ಹಳ್ಳ ಹಿಡಿದ ತನಿಖೆ_: ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಸಾವಿರಾರು ಗರ್ಭ ನಿರೋಧಕ ಮಾತ್ರೆಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೆ ವಿತರಿಸಿದ್ದು ಮತ್ತು ನೂರು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಪ್ರಕರಣ ಸಂಬಂಧ ನಡೆಸಿದ ತನಿಖೆ ಯಾವುದೇ ತಾರ್ಕಿಕ ಅಂತ್ಯ ಕಂಡಿಲ್ಲ. ಔಷಧಿ ಕಂಪನಿಗಳ ಲಾಬಿಗೆ ಮಣಿದಿರುವ ಔಷಧ ನಿಯಂತ್ರಕರು ಹಾಗೂ ಆರೋಗ್ಯ ಇಲಾಖೆ ಇಡೀ ತನಿಖೆಯನ್ನು ಹಳ್ಳ ಹಿಡಿಸಿದೆ. ಸದರಿ ಪ್ರಕರಣವನ್ನು ಆದ್ಯತೆ ಮೇಲೆ ತನಿಖೆಗೆ ಪ್ರತ್ಯೇಕ ತನಿಖಾ ಸಮಿತಿಯನ್ನು ಜಿಲ್ಲಾಧಿಕಾರಿಗಳು ರಚಿಸಬೇಕು. ಈ ಪ್ರಕರಣದಲ್ಲಿ ಔಷಧ ಕಂಪನಿಗಳೊಂದಿಗೆ ಶಾಮೀಲಾಗಿರುವ ಔಷಧ ನಿಯಂತ್ರಕರನ್ನು ಅಮಾನತ್ತಿನಲ್ಲಿರಿಸಿ ತನಿಖೆ ನಡೆಸಬೇಕು.

ಮಂಡ್ಯ ಮಿಮ್ಸ್ ನ ದಾದಿಯರಿಗಾಗಿ ೩ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಸತಿಗೃಹವನ್ನು ತಕ್ಷಣವೇ ದಾದಿಯರಿಗೆ ಹಂಚಿಕೆ ಮಾಡಬೇಕು. ವಸತಿಗೃಹಕ್ಕೆ ತೆರಳದ ಸಿಬ್ಬಂದಿಯ ಬಳಿ ಅಗತ್ಯ ಉತ್ತರ ಪಡೆದು ಇನ್ನುಳಿದ ಸಿಬ್ಬಂದಿಗೆ ವಸತಿಗಳ ಹಂಚಿಕೆ ಮಾಡಬೇಕು. ಆರೋಗ್ಯ ರಕ್ಷಾ ಸಮಿತಿಯ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಕೂಡಲೇ ಸಾರ್ವಜನಿಕರ ಕುಂದು ಕೊರತೆ ಸಭೆ ಆಯೋಜಿಸಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ್ ರನ್ನು ಭೇಟಿ ಮಾಡಿ ಆಗ್ರಹ ಪತ್ರ ನೀಡಲಾಯಿತು. ಈ ಸಂಬಂದ ನಾಳೆ ಅಧಿಕಾರಿಗಳ ಸಭೆ ಆಯೋಜಿಸಿ ಮುಂದಿನ ಕ್ರಮದ ಕುರಿತು ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗೋಷ್ಠಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ.ಆಟೋ ಘಟಕದ ವೆಂಕಟೇಶ್. ಕರುನಾಡ ಸೇವಕರು ಸಂಘಟನೆಯ ಎಸ್ ಕೆ ರಾಜೂಗೌಡ.ರಾಜೇಂದ್ರ ಸಿಂಗ್ ಬಾಬು ಮೊದಲಾದವರಿದ್ದರು


