ಸಿ ಡಿ ಗಂಗಧರ್ ಬೆನ್ನಿಗೆ ಸಿ ಆರ್ ಎಸ್.ಹೊರಗುಳಿದ ಶಾಸಕ ರವಿಕುಮಾರ್
ನಿನ್ನೆಯಷ್ಟೆ ಮೈಶುಗರ್ ಕಾರ್ಖಾನೆಯ ಕಬ್ಬು ನುರಿಸುವ ಮೊದಲ ಅಂಕವಾಗಿ ಕಾರ್ಖಾನೆಯ ಬಾಯ್ಲರ್ ಗೆ ಬೆಂಕಿ ಕೊಡುವ ಕಾರ್ಯ ನಡೆದಿದೆ.
ಇದರ ಜತೆಯಲ್ಲೆ ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಕಾರ್ಖಾನೆಯಲ್ಲಿನ ಅಕ್ರಮಗಳಿಗೆ ತನ್ನ ಬೆಂಬಲ ಇಲ್ಲ ಎಂಬ ಘೋಷಣೆಯನ್ನು ಪರೋಕ್ಷವಾಗಿ ನೀಡಿದ್ದಾರೆ.
ಮೈಶುಗರ್ ಕಾರ್ಖಾನೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ ಡಿ ಗಂಗಧರ್ ನೇಮಕ ಒಮ್ಮತದ ತೀರ್ಮಾನವೇ ಆಗಿದ್ದರೂ ನಂತರದ ಬೆಳವಣಿಗಳು ಜಿಲ್ಲೆಯ ಕಾಂಗ್ರೆಸ್ ಶಾಸಕರ ಮಧ್ಯೆ ಭಿನ್ನಭಿಪ್ರಾಯದ ಗೆರೆ ಕೊರೆದಿರುವುದು ಸುಳ್ಳೇನಲ್ಲ.
ಈ ಮಧ್ಯೆ ಕಾರ್ಖಾನೆಯ ಹತ್ತು ಹಲವು ವಿಷಯಗಳಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಮೇಲುಗೈ ಸಾಧಿಸಿದ್ದಾರೆ.ಮಾಜಿ ಸಚಿವರ ಅಖಂಡ ಬೆಂಬಲದೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಿರಿ ಹಾಗೂ ಕಾರ್ಖಾನೆಯ ಅಧ್ಯಕ್ಷ ಹುದ್ದೆ ಎರಡನ್ನು ಅಲಂಕರಿಸಿರುವ ಸಿ.ಡಿ ಗಂಗಧರ್ ವಿರುದ್ದ ಹತ್ತು ಹಲವು ಆರೋಪಗಳು ಕೇಳಿ ಬಂದಿವೆ.
ಸಿಸಿ ಕ್ಯಾಮೆರಾ.ಕಾರ್ಖಾನೆಯ ಅವರಣದ ಮರ ಕಡಿತ.ಅನಗತ್ಯ ಸಿಬ್ಬಂದಿ ನೇಮಕ ಮಾತ್ರವಲ್ಲದೆ ಕಾರ್ಖಾನೆಯ ಆಸ್ತಿಗಳ ಅಕ್ರಮ ವಿಲೇವಾರಿ ಸೇರಿದಂತೆ ಹತ್ತು ಹಲವು ಆರೋಪಗಳು ಕೇಳಿ ಬಂದಿವೆ.ಇವುಗಳಲ್ಲಿ ಹಲವು ಆರೋಪಗಳು ಈಗಾಗಲೇ ತನಿಖೆಯಲ್ಲಿ ಧೃಡಪಟ್ಟಿವೆ.
ಇದರ ನಡುವೆ ಅನುಪಯುಕ್ತ ವಸ್ತುಗಳ ಮಾರಾಟದ ಹೆಸರಿನಲ್ಲಿ ಕಬ್ಬು ನುರಿಸುವ ಬಿ ಮಿಲ್ ನ್ನು ಮಾರಾಟ ಮಾಡಿರುವುದು ಜಿಲ್ಲೆಯ ರೈತರಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಮೂಡಿಸಿದೆ.
ಬಿ ಮಿಲ್ ಮಾರಾಟಕ್ಕೆ ಕಂಪನಿಯ ನಿರ್ಣಯದ ಹೊರತಾಗಿ ಸಕ್ಷಮ ಪ್ರಾಧಿಕಾರದ ಅನುಮತಿ.ಅರ್ಹ ತಾಂತ್ರಿಕ ಏಜೆನ್ಸಿಗಳಿಂದ ಮಿಲ್ ನ ಮೌಲ್ಯಮಾಪನ ಮಾಡಿಲ್ಲ.
ಈ ಪ್ರಕ್ರಿಯೆಯಲ್ಲಿ ಯಾವೊಬ್ಬ ರೈತ ಪ್ರತಿನಿಧಿಯನ್ನು ಒಳಗೊಳ್ಳದೆ ಇಡೀ ವ್ಯವಹಾರವನ್ನು ಕದ್ದು ಮುಚ್ಚಿ ನಡೆಸಿರುವುದು.ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಯಾವುದೆ ಮಾಹಿತಿ ನೀಡದೆ ತಾರಮ್ಮಯ್ಯ ಆಡುತ್ತಿರುವುದು ಕಾರ್ಖಾನೆಯ ಭವಿಷ್ಯವನ್ನು ಡೋಲಾಯಮಾನವಾಗಿಸಿದೆ.
ಇದರ ಬೆನ್ನಲ್ಲೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಒಬ್ಬ ರಬ್ಬರ್ ಸ್ಟಾಂಪ್ ಎನ್ನುತ್ತಾರೆ ಜಿಲ್ಲೆಯ ರೈತರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹುದ್ದೆಯಲ್ಲಿರುವ ದಾಸ್ ಗೆ ಮೈಶುಗರ್ ಎಂಡಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಿರುವುದು ಕಾರ್ಖಾನೆಯ ದೈನಂದಿನ ಆಡಳಿತಕ್ಕೆ ತೊಡಕು ಹಾಗೂ ಅಕ್ರಮಗಳಿಗೆ ರಹದಾರಿ ಎನ್ನಲಾಗಿದೆ.
ಈಗಾಗಲೇ ಗಂಗಧರ್ ಹಾಗೂ ಮಂಗಲ್ ದಾಸ್ ವಿರುದ್ದ ಸಕ್ಕರೆ ನಿರ್ದೇಶನಾಲಯ ಮತ್ತು ಸಿ ಅಂಡ್ ಐ ಗೆ ೧೫೦ ಕ್ಕು ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ.
ಗಂಗಧರ್ ಹಾಗೂ ಮಂಗಲ್ ದಾಸ್ ರಿಂದ ಕಾರ್ಖಾನೆಯನ್ನು ವಿಮೋಚನೆ ಮಾಡದಿದ್ದರೆ ಮೈಶುಗರ್ ಗೆ ಉಳಿವಿಲ್ಲ ಎಂಬುದನ್ನು ಜಿಲ್ಲೆಯ ಶಾಸಕರೆ ಖಾಸಗಿಯಾಗಿ ಒಪ್ಪುತ್ತಾರೆ.ವಿಧಾನಸೌಧದ ಅಧಿಕಾರಿಗಳು ಸಹ ಇವರ ಬದಲಾವಣೆಗೆ ಒಲವು ತೋರಿದರೂ ಚಲುವರಾಯಸ್ವಾಮಿ ಕೃಪಕಟಾಕ್ಷ ಗಂಗಧರ್ ಮೇಲಿರುವುದರಿಂದ ಸದ್ಯಕ್ಕೆ ಕಾರ್ಖಾನೆಯ ಮೇಲಿರುವ ಕರಿ ನೆರಳು ಸರಿಯುವಂತೆ ಕಾಣುತ್ತಿಲ್ಲ.
ಈಗಾಗಲೇ ಮಳೆಯಿಲ್ಲದೆ ಬೆಳೆದು ನಿಂತ ಕಬ್ಬಿಗೆ ನೀರಿಲ್ಲದೆ ಜಿಲೆಯ ರೈತ ಆತಂಕದಲ್ಲಿದ್ದಾನೆ.
ತನ್ನ ಆಪ್ತರಿಗೆ ನಿರ್ಮಿತಿ ಕೇಂದ್ರ ಕ್ರೆಡಿಲ್ ಮೂಲಕ ಕೋಟಿಗಟ್ಟಲೆ ಸಿವಿಲ್ ಕಾಮಗಾರಿಗಳನ್ನು ನೀಡಿ ತನ್ನ ವಿರುದ್ದ ಯಾರೂ ದನಿ ಎತ್ತದಂತೆ ನೋಡಿಕೊಳ್ಳುವ ಪ್ರಯತ್ನವನ್ನು ಸಹ ಗಂಗಧರ್ ಯಶಸ್ವಿಯಾಗಿ ನಡೆಸಿದ್ದಾರೆ.ಪರಿಣಾಮ ಎಲ್ಲರು ಗಪ್ ಚುಪ್!
ಈ ಹಿಂದಿನ ಕಾರ್ಖಾನೆಯ ಅಧ್ಯಕ್ಷ ನಾಗರಾಜಪ್ಪ ನಡೆಸಿದ ೧೨೦ ಕೋಟಿ ಅಕ್ರಮಗಳ ವಿರುದ್ದ ಭೂ ಕಂದಾಯ ಬಾಕೀಯಂತೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸ್ವತಃ ಹೈಕೋರ್ಟ್ ಆದೇಶ ಹೊರಡಿಸಿದ್ದರು ಸಂಬಂದಿಸಿದ ಅಧಿಕಾರಿಗಳು ಅಲ್ಲಾಡುತ್ತಿಲ್ಲ.ಏನೇನೂ ಸಬೂಬು ಹೇಳುತ್ತಾ ಕಾಲ ತುಂಬಿಸುತ್ತಿದ್ದಾರೆ.
ಇಂತಹ ಬಾಲ ಅಲ್ಲಾಡಿಸುವ ಅಧಿಕಾರಿಗಳೇ ಈಗ ಜಿಲ್ಲೆಯಲ್ಲಿ ತುಂಬಲಾಗಿದೆ.
ಕಳೆದ ಬಜೆಟ್ ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತ ಯೋಜನೆ ಘೋಷಿಸಿಲ್ಲವೆಂದು ರಾಜ್ಯ ಸರಕಾರ ಮೈಶುಗರ್ ನ ಬಾಯ್ಲಿಂಗ್ ಹೌಸ್ ನಿರ್ಮಾಣಕ್ಕಾಗಿ ೬೦ ಕೋಟಿ ಬಿಡುಗಡೆ ಮಾಡಿದೆ.
ಕಾರ್ಖಾನೆಯ ಪುನಶ್ಚೇತನಕ್ಕೆ ರಾಜ್ಯ ಸರಕಾರ ಅಗತ್ಯ ನೆರವು ಒದಗಿಸಿದರೂ ಕಾರ್ಖಾನೆಯ ಮಟ್ಟದಲ್ಲಿ ಈ ಪ್ರಯತ್ನಕ್ಕೆ ಪೂರಕವಾದ ಸ್ಪಂದನೆಯಿಲ್ಲವಾಗಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸರಿಯಾದೊಂದು ತೀರ್ಮಾನ ಕೈಗೊಳ್ಳದಿದ್ದರೆ ಮುಂದಿನ ಚುನಾವಣೆಗೆ ಇಡೀ ಜಿಲ್ಲೆ ಎನ್ ಡಿ ಎ ಮೈತ್ರಿಕೂಟಕ್ಕೆ ಚಿನ್ನದ ಹರಿವಾಣದಲ್ಲಿ ಕೊಟ್ಟಂತಯೆ ಆಗಲಿದೆ.ಇದೆಲ್ಲದರಿಂದ ಬೇಸತ್ತ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಕಾರ್ಖಾನೆಯ ಆಡಳಿತ ವ್ಯವಹಾರಗಳಿಂದ ದೂರ ಉಳಿದಿದ್ದಾರೆ.ಬೆನ್ನ ಹಿಂದೆಯೆ ಬಾಯ್ಲರ್ ಹೌಸ್ ಗೆ ಬೆಂಕಿ ಕೊಡುವ ಕಾರ್ಯಕ್ಕೆ ತಮ್ಮ ಪುತ್ರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಕಳುಹಿಸುವುದರೊಂದಿಗೆ ಮಾಜಿ ಸಚಿವ ಚಲುವರಾಯಸ್ವಾಮಿ ಗಂಗಧರ್ ಮೇಲಿನ ಕೃಪಕಟಾಕ್ಷ ನಿರಂತರ ಎಂಬ ಸಂದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ನೊಳಗಿನ ಈ ಕಲಹ ಮೈಶುಗರ್ ಕಾರ್ಖಾನೆಗೆ ತಗುಲದಂತೆ ರಕ್ಷಿಸಬೇಕಾದ ಜವಾಬ್ದಾರಿ ಈಗ ಸಿಎಂ ಡಿಕೆಶಿ ಹೆಗಲಿಗೇರಿದೆ.
ಜಿಲ್ಲೆಯ ಶಾಸಕರು ಮೌನ ಮುರಿದು ಮಾತನಾಡುವ ಸಮಯ ಸನ್ನಿಹಿತವಾಗಿದೆ.
ವಿಶೇಷ ಲೇಖನ-ರಾ ಬಾಬು


