ಮಂಡ್ಯ: ಕೆಎಂಎಫ್ ಸಂಸ್ಥೆಯ ಉತ್ಪನ್ನಗಳನ್ನು ಕಲಬೆರಕೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾದ ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್ಮುಲ್) ಅಧ್ಯಕ್ಷ ಎಂ.ಕೆ.ಹರೀಶ್ ಬಾಬು ಸ್ಪಷ್ಟ ಪಡಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯಲ್ಲಿ ಕೆಎಂಎಫ್ ಉತ್ಪನ್ನಗಳಲ್ಲಿ ಕಲಬೆರಕೆ ಮಾಡಲಾಗುತ್ತಿದೆ ಎಂದು ಪ್ರಸ್ತಾಪಿಸಲಾಗಿತ್ತು.
ರಾಜ್ಯದ 14 ಹಾಲು ಒಕ್ಕೂಟಗಳ ಪೈಕಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಲಬೆರಕೆ ನಡೆಯುತ್ತಿದೆ ಎಂದು ಬಿಂಬಿಸಿರುವುದು ಸತ್ಯಕ್ಕೆ ದೂರ” ಎಂದು ತಿಳಿಸಿದರು.
ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಗೆಜ್ಜಲಗೆರೆ ವ್ಯಾಪ್ತಿಯ ಹೊರಭಾಗದಲ್ಲಿರುವ ‘ಮಾಸ್ಟರ್ ಇನ್ಸುಲೇಶನ್’ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದ್ದ ಹಾಲಿನ ಪೌಡರ್ನಲ್ಲಿ ಕಲಬೆರಕೆ ಕಂಡು ಬಂದಿತ್ತು. ಈ ಸಂಬಂಧ ಗೋದಾಮಿನ ಮಾಲೀಕರ ಮೇಲೆ ದೂರು ನೀಡಲಾಗಿದೆ. ಇದಾದ 3 ತಿಂಗಳ ನಂತರ ಖಾಸಗಿ ಮಾಧ್ಯಮ ಸಂಸ್ಥೆ ನಮ್ಮ ಒಕ್ಕೂಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ರಜಾ ದಿನವಾಗಿದ್ದರೂ ನಮ್ಮ ಅಧಿಕಾರಿಗಳು ಉಪಸ್ಥಿತರಿದ್ದು, ಅವರು ಕೇಳಿದ ಎಲ್ಲಾ ಪ್ರಶ್ನೆಗಳು ಮತ್ತು ಸಂದೇಹಗಳಿಗೆ ಸೂಕ್ತ ದಾಖಲೆಗಳೊಂದಿಗೆ ಸ್ಪಷ್ಟನೆ ಹಾಗೂ ವಿವರಣೆಯನ್ನು ನೀಡಿದ್ದಾರೆ,” ಎಂದು ವಿವರಿಸಿದರು.
“ಕೆಎಂಎಫ್ ಮಾರ್ಗದರ್ಶನ ಹಾಗೂ ಟೆಂಡರ್ ಪ್ರಕ್ರಿಯೆಯ ನಿಯಮಗಳ ಪ್ರಕಾರ, ಉತ್ಪಾದನೆಯಾದ ಕೆನೆ ರಹಿತ ಹಾಲಿನ ಪೌಡರನ್ನು ಕಾಯ್ದಿರಿಸಲು ಎರಡು ವರ್ಷಗಳ ಅವಧಿಗೆ ಗೋದಾಮುಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಅದರಂತೆ ಈ ಗೋದಾಮಿನಲ್ಲಿ ಇರಿಸಲಾದ ಪೌಡರ್ ಕಲಬೆರಕೆಯಾಗಿದೆ. ಇದರ ಮಾಲೀಕರಾದ ಎಸ್.ಅನಂತ್ ಮತ್ತು ಎಸ್.ಶ್ರೀಕಾಂತ್ ವಿರುದ್ದ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದರು.
ಸಂಸ್ಥೆಯ ಉತ್ಪನ್ನಗಳು ಕರ್ನಾಟಕ ಮಾತ್ರವಲ್ಲದೇ ದೇಶದ ಹೊರರಾಜ್ಯಗಳು, ವಿದೇಶಗಳಿಗೂ ಸರಬರಾಜಾಗುತ್ತಿವೆ. ಉತ್ಪನ್ನ ತಯಾರಿಕೆಗೂ ಮುನ್ನ ಎಲ್ಲ ಪರೀಕ್ಷೆಗಳನ್ನು ಮಾಡಲಾಗಿರುತ್ತದೆ. ಇದನ್ನು ಎಫ್ಎಸ್ಎಸ್ಎಐ ಸಂಸ್ಥೆಯ ಅಧಿಕಾರಿಗಳಿಂದ ಪರಿಶೀಲನೆಗೆ ಒಳಗೊಂಡ ನಂತರವಷ್ಟೇ ಅಗತ್ಯ ಇರುವ ಕಡೆಗೆ ಸರಬರಾಜು ಮಾಡಲಾಗುತ್ತದೆ ಎಂದು ಸ್ಪಷ್ಟೀಕರಿಸಿದರು.
ಈಚೆಗೆ ಮನ್ ಮುಲ್ ಉತ್ಪನ್ನಗಳ ದಾಸ್ತಾನಿಗೆಂದು ಪಡೆದಿದ್ದ ಗೋದಾಮುಗಳಲ್ಲಿ ನಕಲಿ ಹಾಗೂ ಕಲಬೆರಕೆ ಪದಾರ್ಥಗಳನ್ನು ಬೆರೆಸಿ ನಂದಿನಿ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಇದರಲ್ಲಿ ಮನ್ ಮೂಲ್ ನ ಕೆಲವರು ಭಾಗೀಯಾಗಿರುವ ಕುರಿತು ಖಾಸಗಿ ಮಾಧ್ಯಮ ಗಮನ ಸೆಳೆಯುವ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತ ಮನ್ ಮೂಲ್ ಆಡಳಿತ ಮಂಡಳಿ ತುರ್ತುಗೋಷ್ಡಿ ನಡೆಸಿದೆ.ಈ ಹಿಂದೆ ಪುಷ್ಪಾ ಸಿನಿಮಾ ಮಾದರಿಯಲ್ಲಿ ಟ್ಯಾಂಕರ್ ಗಳಲ್ಲಿ ಹಾಲು ನೀರು ಮಾರಾಟ ಮಾಡಿ ರಾಜ್ಯದ ತುಂಬಾ ಹಾಲು ನೀರು ಹಗರಣ ಮುನ್ನಲೆಗೆ ಬಂದಿತ್ತು.ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ಇದ್ದು ಅಪರಾಧಿಗಳಿಗೆ ಶಿಕ್ಷೆಯಾಗುವ ಮುನ್ನವೆ ಕಲಬೆರಕೆಯ ನಕಲಿ ಉತ್ಪನ್ನದ ಹಗರಣ ಕೇಳಿ ಬಂದಿದೆ.
ಗೋಷ್ಠಿಯಲ್ಲಿ ಮನ್ಮುಲ್ ವ್ಯವಸ್ಥಾಪಕ ಎಚ್.ಆರ್.ರಘು, ನಿರ್ದೇಶಕರಾದ ಉಮ್ಮಡಳ್ಳಿ ಶಿವು, ಅಪ್ಪಾಜಿಗೌಡ, ಕೃಷ್ಣೇಗೌಡ, ಲಕ್ಷ್ಮೀ ನಾರಾಯಣ್, ಮಾಜಿ ಅಧ್ಯಕ್ಷ ಬೋರೇಗೌಡ ಇದ್ದರು.


