ಕಾವೇರಿ ನೀರು ನಿರ್ವಹಣಾ ಮಂಡಲಿ ಆದೇಶಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಮಂಡ್ಯ ಜಿಲ್ಲೆಯ ರೈತರಿಗೆ ಕಟ್ಟು ಪದ್ದತಿ ನೀರು ಬಿಡುವ ರಾಜ್ಯ ಸರಕಾರದ ನಿಲುವು ನಾಡಿನ ರೈತರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಿಂದ ಪಂಜು ಹಾಗೂ ಕನ್ನಡ ಬಾವುಟ ಹಿಡಿದು ಮೆರವಣಿಗೆ ಹೊರಟ ಸಂಘಟನೆಯ ಕಾರ್ಯಕರ್ತರು
ಸ್ವತಃ ಜಿಲ್ಲೆಯವರೆ ರಾಜ್ಯದ ಜಲಸಂಪನ್ಮೂಲ ಸಚಿವರಾದರೂ ಸದನದಲ್ಲಿ ಈ ಕುರಿತು ಚರ್ಚಿಸಿ ಸುಪ್ರೀಂಕೋರ್ಟ್ ಎದುರು ನಾಡಿನ ರೈತರ ಹಿತಕಾಯುವ ಯಾವುದೆ ಪ್ರಯತ್ನ ಆಗಿಲ್ಲ.
ಬದಲಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರು ಹರಿಸಿ ರೈತರನ್ನು ಬಲಿಕೊಟ್ಟು ತಮ್ಮ ಅಸಮರ್ಥತೆ ತೋರಿದ್ದಾರೆ.ಇವತ್ತಿಗೂ ಜಿಲ್ಲೆಯಲ್ಲಿ ಕೆರೆಗಳನ್ನು ತುಂಬಿಸುವ ಮತ್ತು ಒತ್ತುವರಿ ತೆರವುಗೊಳಿಸುವ ಇಚ್ಚಾಶಕ್ತಿ ತೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗಿಹೋದ ಎಲ್ಲ ಸರಕಾರಗಳು ನಾಡಿನ ರೈತರಿಗೆ ದ್ರೋಹ ಬಗೆದು ತಮಿಳುನಾಡಿಗೆ ನೀರು ಹರಿಸಿವೆ.ಕಾಂಗ್ರೆಸ್ ಸಹ ಆ ಸಾಲಿಗೆ ಸೇರಿದೆ.
ಕಟ್ಟು ಪದ್ದತಿ ಬದಲು ಸಮರ್ಪಕವಾಗಿ ನೀರು ಹರಿಸಬೇಕು ಇಲ್ಲವೆ ರೈತರಿಗೆ ಬೆಳೆನಷ್ಟ ತುಂಬಿಕೊಡಲು ಸರಕಾರ ಸಿದ್ದವಾಗಬೇಕು.ತತ್ಕಾಲೀನ ತೀರ್ಮಾನಗಳಿಂದ ಕಾವೇರಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ.
ಕಾವೇರಿ ನೀರು ಹಂಚಿಕೆ ವಿವಾದ ಇತ್ಯರ್ಥಗೊಳಿಸಲು ಮಳೆ ಕೊರತೆಯಾದಾಗ ನೀರು ಹಂಚಿಕೊಳ್ಳಲು ಸಂಕಷ್ಟ ಸೂತ್ರ ರೂಪಿಸಬೇಕಿದೆ.
ಮಳೆ ಪ್ರಕೃತಿ ನಿರ್ಧಾರಿತವಾಗಿದ್ದು.ತಮಿಳುನಾಡಿಗೆ ಬಯಸಿದ ಪ್ರಮಾಣಕ್ಕೆ ಮಳೆ ಬೀಳಲು ಸಾಧ್ಯವಿಲ್ಲ.ಬದಲಿಗೆ ಅಯಾ ಸಂಧರ್ಭದಲ್ಲಿ ಹರಿಸಿದ ನೀರನ್ನು ತಮಿಳುನಾಡಿನ ಒಟ್ಟು ಪಾಲಿಗೆ ಜಮೆಯಾಗಬೇಕು.
ಇದಕ್ಕಾಗಿ ರಾಜ್ಯ ಅಗತ್ಯ ಕಾನೂನು ಹೋರಾಟ ರೂಪಿಸಬೇಕಿದೆ.
ಇದಲ್ಲದೆ ಈಗಾಗಲೆ ಬೆಂಗಳೂರಿಗೆ ೧೯ ಟಿಎಂಸಿ ಕುಡಿಯುವ ನೀರಿಗೆ ಬಳಕೆಯಾಗುತ್ತಿದೆ.ಇದಲ್ಲದೆ ೬ ನೇ ಹಂತದ ಹೆಸರಿನಲ್ಲಿ ನೇರ ಕೃಷ್ಣರಾಜ ಸಾಗರದ ಡೆಡ್ ಸ್ಟೋರೆಜ್ ನಿಂದ ೬ ಟಿಎಂಸಿ ಕೊಂಡೊಯ್ಯುವ ಸರಕಾರದ ಪ್ರಯತ್ನ ಮಂಡ್ಯ ಜಿಲ್ಲೆಯನ್ನು ಬರಡಾಗಿಸುವುದರ ಹೊರತು ಮತ್ತೇನಿಲ್ಲ.
ಕಾವೇರಿ ಕಣಿವೆಯ ಯಾವುದೆ ಜಲಾಶಯಗಳಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯಾವುದೆ ಹೊಸ ಪ್ರಯತ್ನ ಕನ್ನಂಬಾಡಿ ಅಚ್ಚುಕಟ್ಟಿನ ರೈತರ ಬದುಕನ್ನು ಕಸಿಯಲಿದೆ.ಆದ್ದರಿಂದ ಸರಕಾರ ಈ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಖಂಡನೆ:ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಗಳು ತಲಾ ಈಗಾಗಲೇ ಒಂದುವರೆ ಲಕ್ಷಕ್ಕು ಹೆಚ್ಚಿನ ಟನ್ ಕಬ್ಬು ಅರೆದರೂ ಅದಕ್ಷ ಹಾಗೂ ಭ್ರಷ್ಟ ಆಡಳಿತದಿಂದ ಮೈಶುಗರ್ ನಿಗದಿತ ಗುರಿ ತಲುಪದೆ ಸರಾಸರಿ ದಿನವೊಂದಕ್ಕೆ ಎರಡು ಸಾವಿರ ಟನ್ ಗೆ ಸಿಮೀತವಾಗಿದೆ.ಇದು ಅನಗತ್ಯ ನಷ್ಟಕ್ಕೆ ಈಡು ಮಾಡಲಿದೆ.ಕಾರ್ಖಾನೆಯಲ್ಲಿ ಅಕ್ರಮ ಬಿ ಮಿಲ್ ಮಾರಾಟ ಸೇರಿದಂತೆ ಸಾಕಷ್ಟು ಭ್ರಷ್ಟಾಚಾರ ನಡೆದರೂ ಜಿಲ್ಲೆಯ ಶಾಸಕರು ಸಚಿವರ ಈ ಬಗ್ಗೆ ಪ್ರಶ್ನಿಸದೆ ಮೌನವಾಗಿರುವ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಮೆರವಣಿಗೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ.ಆಟೋ ವೆಂಕಟೇಶ್. ಗೋವಿಂದರಾಜೂ.ಎಸ್ ಕೆ ರಾಜೂಗೌಡ.ರಾಜೇಂದ್ರ ಬಾಬು.ರಾಮಣ್ಣ.ಎಂ.ಬಿ.ನಾಗಣ್ಣಗೌಡ. ಭೂತನ ಹೊಸೂರು ದೇವೇಗೌಡ.ಮಂಜು.ನಾರಯಣಸ್ವಾಮಿ.ಮೋಹನ್ ಸೇರಿದಂತೆ ಹಲವರಿದ್ದರು..


