ಹಾಸನ / ಬೆಂಗಳೂರು:
ಆದಾಯಕ್ಕಿಂತ ಶೇ. 214.40 ರಷ್ಟು ಹೆಚ್ಚಿನ ಪ್ರಮಾಣದ ಅಕ್ರಮ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ಹಾಸನ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಎಂ.ಸಿ. ಸತ್ಯನಾರಾಯಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿ ಮತ್ತು ಪ್ರಾಥಮಿಕ ತನಿಖೆಯಲ್ಲಿ ಸತ್ಯನಾರಾಯಣ ಅವರ ಬಳಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ ಕೆ. ಅವರು (ದಿನಾಂಕ: 28.09.2026) ಈ ಅಮಾನತು ಆದೇಶ ಜಾರಿ ಮಾಡಿದ್ದಾರೆ., ₹7.50 ಕೋಟಿ ಅಸಮತೋಲನ ಆಸ್ತಿ ಪತ್ತೆ
ಲೋಕಾಯುಕ್ತ ಪೊಲೀಸರು ಸಲ್ಲಿಸಿದ ತನಿಖಾ ವರದಿಯ ಪ್ರಕಾರ, ಸತ್ಯನಾರಾಯಣ ಅವರ ಒಟ್ಟು ಚರ-ಸ್ಥಿರಾಸ್ತಿ ಮೌಲ್ಯ ಹಾಗೂ ಖರ್ಚು-ವೆಚ್ಚಗಳ ಮೊತ್ತ ಬರೋಬ್ಬರಿ ₹11,00,40,013 ತಲುಪಿದೆ. ಆದರೆ, ಅವರ ಅಧಿಕೃತ ವರಮಾನದ ಮೂಲಗಳಿಂದ ಬಂದ ಅಂದಾಜು ಆದಾಯ ₹3,50,00,000 ಮಾತ್ರ. ಇದರ ಪರಿಣಾಮವಾಗಿ, ತಮ್ಮ ಗೊತ್ತಾದ ಆದಾಯಕ್ಕಿಂತ ಭಾರಿ ಪ್ರಮಾಣದಲ್ಲಿ, ಅಂದರೆ ₹7,50,40,013 (ಶೇ. 214.40) ರಷ್ಟು ಹೆಚ್ಚುವರಿ ಅಕ್ರಮ ಆಸ್ತಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಹಲವೆಡೆ ಲೋಕಾಯುಕ್ತ ದಾಳಿ: ಶಾಲೆಗಳು, ಬಿಡಿಎ ಅಪಾರ್ಟ್ಮೆಂಟ್ ಶೋಧ
ಆರೋಪಿತ ಅಧಿಕಾರಿಯ ವಿರುದ್ಧ ಹಾಸನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ (ಮೊ.ಸಂ. 04/2026) ಪ್ರಕರಣ ದಾಖಲಿಸಿಕೊಂಡ ನಂತರ, ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಹಲವು ಕಡೆ ಶೋಧನೆ ನಡೆಸಲಾಗಿತ್ತು.
ಹಾಸನದ ನಿವಾಸ: ರವೀಂದ್ರ ನಗರದ 4ನೇ ಕ್ರಾಸ್ನಲ್ಲಿರುವ ಮನೆ ನಂ. 5155.
ಬೆಂಗಳೂರು ಅಪಾರ್ಟ್ಮೆಂಟ್: ಸದಾಶಿವನಗರದಲ್ಲಿರುವ 2,415 ಚದರ ಅಡಿಯ ಬಿಡಿಎ ಅಪಾರ್ಟ್ಮೆಂಟ್ ಮನೆ.
ಶಿಕ್ಷಣ ಸಂಸ್ಥೆಗಳು: ಪತ್ನಿ ಚೈತ್ರಾ ಸದಸ್ಯತ್ವ ಹೊಂದಿರುವ ಹಾಸನದ ‘ಪಾಂಡಿತ್ಯ ಎಜುಕೇಷನ್ ಟ್ರಸ್ಟ್’, ರವೀಂದ್ರ ನಗರ, ಹೇಮಾವತಿ ನಗರ, ಚನ್ನಪಟ್ಟಣ ದೇವಮ್ಮ ಬಡಾವಣೆ ಹಾಗೂ ತಣ್ಣೀರುಹಳ್ಳದ ಬಳಿಯ ‘ಯುರೋ ಕಿಡ್ಸ್’ / ‘ಯೂರೋ’ ಶಾಲೆಗಳು.
ಕಚೇರಿ: ಹಾಸನ ಮಹಾನಗರ ಪಾಲಿಕೆ ಆವರಣದಲ್ಲಿರುವ AEE ಕಚೇರಿ ಕೊಠಡಿ.
ಸಾಕ್ಷ್ಯ ನಾಶ ತಡೆಯಲು ಕ್ರಮ, ಬಳ್ಳಾರಿಗೆ ಲೀನ್ ವರ್ಗಾವಣೆ
”ಆರೋಪಿತ ಅಧಿಕಾರಿಯು ಪ್ರಭಾವಶಾಲಿಯಾಗಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೇ ಮುಂದುವರಿದರೆ ತನಿಖೆಗೆ ಅಡ್ಡಿಪಡಿಸುವ ಹಾಗೂ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಯಿದೆ” ಎಂದು ಲೋಕಾಯುಕ್ತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ವರದಿ ನೀಡಿದ್ದರು.
ಈ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಸರ್ಕಾರ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಎಎ) ಅಡಿಯಲ್ಲಿ ಇಲಾಖಾ/ಕ್ರಿಮಿನಲ್ ಪ್ರಕರಣ ಕಾಯ್ದಿರಿಸಿ ಇವರನ್ನು ಅಮಾನತುಗೊಳಿಸಿದೆ. ಅಲ್ಲದೆ, ಪ್ರಕರಣದ ನಿಷ್ಪಕ್ಷಪಾತ ತನಿಖೆಯ ಹಿತದೃಷ್ಟಿಯಿಂದ ಇವರ ‘ಲೀನ್’ (ಸ್ಥಾನ) ಅನ್ನು ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿರುವ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ಅಮಾನತಿನ ಅವಧಿಯಲ್ಲಿ ಸರ್ಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡಬಾರದೆಂದು ಶರತ್ತು ವಿಧಿಸಲಾಗಿದೆ.


