ಕಾವೇರಿ ಆರತಿ ವಿರುದ್ಧ ರೈತರ ಆಕ್ರೋಶ: ಇಂದು ಮಂಡ್ಯದಲ್ಲಿ ಕಪ್ಪುಪಟ್ಟಿ ಪ್ರತಿಭಟನೆ
ಮಂಡ್ಯ: ರಾಜ್ಯ ಸರ್ಕಾರದ ಕಾವೇರಿ ಆರತಿ ಕಾರ್ಯಕ್ರಮವನ್ನು ಖಂಡಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಇಂದು (ಅ.15) ಬೆಳಿಗ್ಗೆ 10 ಗಂಟೆಗೆ ನಗರದ ಕಾವೇರಿ ಉದ್ಯಾನವನದಲ್ಲಿರುವ ಕಾವೇರಿ ಪ್ರತಿಮೆ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದೆ.
“ಬೇಕಿರುವುದು ಕಾವೇರಿ ಆರತಿಯಲ್ಲ, ರೈತರ ನೈಜ ಉನ್ನತಿ” ಎಂಬ ಘೋಷವಾಕ್ಯದಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದಸರಾ ನೆಪದಲ್ಲಿ ರೈತರಿಗೆ ಯಾವುದೇ ರೀತಿಯಲ್ಲಿ ಉಪಯೋಗವಿಲ್ಲದ ಭಾವನಾತ್ಮಕ ವಿಚಾರಗಳನ್ನು ಸರ್ಕಾರ ಮುಂದೊಡ್ಡುತ್ತಿದೆ ಎಂದು ಸಮಿತಿ ಆರೋಪಿಸಿದೆ.
ಕಾವೇರಿ ನಾಡಿನ ಜನರ ಮನದಲ್ಲಿ ಚಿರಸ್ಥಾಯಿಯಾಗಿದ್ದಾಳೆ. ಉತ್ತರ ಭಾರತದ ಆಚರಣೆಯನ್ನು ಅಂಧಾನುಕರಣೆ ಮಾಡುವ ಈ ಪ್ರಯತ್ನಕ್ಕೆ ನ್ಯಾಯಾಲಯವು ಈಗಾಗಲೇ ಅಸಮ್ಮತಿ ವ್ಯಕ್ತಪಡಿಸಿ ತಡೆಯಾಜ್ಞೆ ನೀಡಿದೆ. ಆದರೂ ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಹಿಂಬಾಗಿಲ ಮೂಲಕ ಕಾವೇರಿ ಆರತಿ ನಡೆಸಲು ಯತ್ನಿಸುತ್ತಿದೆ ಎಂದು ಸಮಿತಿ ದೂರಿದೆ. ಇದರ ಹಿಂದೆ ಅಣೆಕಟ್ಟೆ ಸುತ್ತಮುತ್ತ ಅಮ್ಯೂಸ್ಮೆಂಟ್ ಪಾರ್ಕ್ನಂತಹ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಹುನ್ನಾರವಿದೆ ಎಂದೂ ಆರೋಪಿಸಿದೆ.
ಕೃಷ್ಣರಾಜಸಾಗರ ಅಣೆಕಟ್ಟೆಗೆ 2031ಕ್ಕೆ ನೂರು ವರ್ಷ ತುಂಬಲಿದ್ದು, ಸುರಕ್ಷತೆಯ ದೃಷ್ಟಿಯಿಂದ ಅಣೆಕಟ್ಟೆಯ ಸುತ್ತ ಯಾವುದೇ ಕಾಮಗಾರಿ ನಡೆಯದಂತೆ ನೋಡಿಕೊಳ್ಳಬೇಕಿದೆ. ಇದೇ ಕಾರಣಕ್ಕೆ ರಾಜ್ಯ ಹೈಕೋರ್ಟ್ ಸಹ ಕಾವೇರಿ ಆರತಿಗಾಗಿ ಯಾವುದೇ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಿದೆ ಎಂದು ಸಮಿತಿ ನೆನಪಿಸಿದೆ.
ಮಳೆ ಕೊರತೆಯಿಂದ ಕೆರೆಗಳು ಖಾಲಿಯಾಗಿ, ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಬೆಳೆ ನಷ್ಟ ಪರಿಹಾರ ನೀಡಿ ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರ, ಕಾವೇರಿ ಆರತಿಯಂತಹ ಭಾವನಾತ್ಮಕ ಪ್ರಹಸನದಲ್ಲಿ ತೊಡಗಿದೆ ಎಂದು ಸಮಿತಿ ಟೀಕಿಸಿದೆ.
ಆರತಿಯ ಬದಲು ಕೆರೆಗಳಿಗೆ ನೀರು ತುಂಬಿಸುವುದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಘೋಷಿಸುವುದು ಹಾಗೂ ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ರಾಜ್ಯದ ಪರವಾಗಿ ನ್ಯಾಯ ದೊರಕಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅದುವೇ ಕಾವೇರಿಗೆ ಸಲ್ಲಿಸುವ ನಿಜವಾದ ನ್ಯಾಯ ಎಂದು ಸಮಿತಿ ಆಗ್ರಹಿಸಿದೆ.
ಈ ಹಿನ್ನೆಲೆಯಲ್ಲಿ ಕಪ್ಪುಪಟ್ಟಿ ಧರಿಸಿ ತಮ್ಮ ವಿರೋಧ ದಾಖಲಿಸಲಾಗುವುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.


