**ಡೇ-ನಲ್ಮ್ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಾಸಿಕ ಗೌರವಧನದ ಮೇಲೆ ಮುಂದುವರಿಕೆ**
ಬೆಂಗಳೂರು, ಅ.27: ಡೇ-ನಲ್ಮ್ ಯೋಜನೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಆ ಯೋಜನೆಯಡಿ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮುದಾಯ ಸಂಪನ್ಮೂಲ ವ್ಯಕ್ತಿಗಳ (CRP) ಸೇವೆಯನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗೌರವಧನದ ಆಧಾರದ ಮೇಲೆ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ (ಯೋಜನೆ) ಅವರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಅ.27ರಂದು ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅವರ ಜಂಟಿ ಅಧ್ಯಕ್ಷತೆಯಲ್ಲಿ ಜುಲೈ 10, 2026ರಂದು ನಡೆದ ಸಭೆಯ ನಿರ್ಣಯದಂತೆ ಈ ಕ್ರಮ ಕೈಗೊಳ್ಳಲಾಗಿದೆ.
**ಪ್ರಮುಖ ಷರತ್ತುಗಳು**
– ಸಿಬ್ಬಂದಿಯ ಅಗತ್ಯವಿದೆಯೇ ಎಂಬುದನ್ನು ಆಯಾ ನಗರ ಸ್ಥಳೀಯ ಸಂಸ್ಥೆಯೇ ಖಚಿತಪಡಿಸಿಕೊಳ್ಳಬೇಕು; ಅಗತ್ಯವಿದ್ದರೆ ಮಾತ್ರ ಸೇವೆ ಪಡೆಯಬೇಕು.
– ಗೌರವಧನದ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಸಂಪನ್ಮೂಲದಿಂದ ಭರಿಸಲು ಒಪ್ಪಿದರೆ ಮಾತ್ರ ನೇಮಕ ಮಾಡಿಕೊಳ್ಳಬೇಕು. ಇದಕ್ಕಾಗಿ ಸರ್ಕಾರದಿಂದ ಅನುದಾನ ಕೋರುವಂತಿಲ್ಲ.
– ಸೇವೆ ತಾತ್ಕಾಲಿಕ ಹಾಗೂ ಮಾಸಿಕ ಗೌರವಧನ ಆಧಾರಿತವಾಗಿರುತ್ತದೆ. ತಿಂಗಳಿಗೆ ಗರಿಷ್ಠ 20 ದಿನಗಳ ಕಾಲ ಮಾತ್ರ ಕೆಲಸ ಮಾಡಬೇಕು.
– ಮಾಸಿಕ ₹8,000 ಹಾಗೂ ₹2,000 ಮೀರದಂತೆ ಪ್ರಯಾಣ ಭತ್ಯೆ/ಇತರ ಭತ್ಯೆ ನೀಡಬೇಕು.
– ಪ್ರತಿ 11 ತಿಂಗಳಿಗೆ ಮಾತ್ರ ಒಪ್ಪಂದದ ಆಧಾರದ ಮೇಲೆ ಸ್ವ-ಸಹಾಯ ಗುಂಪಿನ ಸದಸ್ಯರನ್ನು ತೊಡಗಿಸಿಕೊಳ್ಳಬೇಕು.
– ಡೇ-ನಲ್ಮ್ ಅಭಿಯಾನ ಕಚೇರಿಯ 22.12.2021 ಮತ್ತು 24.05.2022ರ ಆದೇಶಗಳಲ್ಲಿನ ಮಾರ್ಗಸೂಚಿ ಪಾಲಿಸಬೇಕು. ಸೇವಾ ಷರತ್ತು, ನಿಬಂಧನೆಗಳ ಕುರಿತು ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸ್ಪಷ್ಟ ಮಾಹಿತಿ ಪಡೆಯಬೇಕು.
– ತಿಂಗಳಿಗೆ 20 ದಿನ ಮಾತ್ರ ಕೆಲಸ ಮಾಡುವುದರಿಂದ ಇವರು ‘ಉದ್ಯೋಗಿ’ (employee) ವ್ಯಾಖ್ಯಾನದ ಅಡಿ ಬರುವುದಿಲ್ಲ. ಆದ್ದರಿಂದ ಮುಂದೆ ಸೇವಾ ಸಕ್ರಮಾತಿಗೆ ಕೋರುವಂತಿಲ್ಲ; ಈ ಅಂಶವನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.
**ಇತರ ವರ್ಗದ ಸಿಬ್ಬಂದಿಗೆ ಅವಕಾಶವಿಲ್ಲ**
ರಾಜ್ಯ/ನಗರ ಅಭಿಯಾನ ವ್ಯವಸ್ಥಾಪಕರನ್ನು ಪಿಎಂ ಸ್ವನಿಧಿ 2.0 ಯೋಜನೆಯಡಿ ಹಾಗೂ ಬಹುಕಾರ್ಯ ಅಧಿಕಾರಿಗಳನ್ನು (multi tasking officials) NURM ಯೋಜನೆಯಡಿ ತೊಡಗಿಸಿಕೊಳ್ಳಲು ಜುಲೈ 10ರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಪೌರಾಡಳಿತ ಇಲಾಖೆಯ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಡಿ ವೇತನ ಹಾಗೂ ಇತರ ಭತ್ಯೆಗಳನ್ನು ಭರಿಸಲು ಲೆಕ್ಕ ಶೀರ್ಷಿಕೆಯಡಿ ಅವಕಾಶವಿಲ್ಲ. ಜೊತೆಗೆ, ವಿಷಯ ತಜ್ಞರು ಮತ್ತು ಕಚೇರಿ ಸಹಾಯಕರ ಹುದ್ದೆಗಳು ಪೌರಸೇವಾ ವೃಂದದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಮಂಜೂರಾಗಿಲ್ಲ. ಹೀಗಾಗಿ ಇವರ ಸೇವೆಯನ್ನು ಪೌರಾಡಳಿತ ಇಲಾಖೆ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹಾಗೂ ಸವಿವರವಾಗಿ ದಾಖಲಿಸಿ, ಸಂಬಂಧಿಸಿದವರಿಗೆ ಹಿಂಬರಹ ನೀಡುವಂತೆ ನಿರ್ದೇಶಕರಿಗೆ ಸೂಚಿಸಲಾಗಿದೆ.


