**ಕೆ.ಆರ್. ಪೇಟೆಯಲ್ಲಿ ಡಬಲ್ ಟ್ರೇಲರ್ ಟ್ರ್ಯಾಕ್ಟರ್ ಹಾವಳಿ: ಅಪಘಾತಗಳಿಗೆ ಅಮಾಯಕರ ಬಲಿ, ಕ್ರಮಕ್ಕೆ ಆಗ್ರಹ**
*ಕೆ.ಆರ್. ಪೇಟೆ:* ತಾಲ್ಲೂಕಿನ ಮಾಕವಳ್ಳಿಯಲ್ಲಿರುವ ಹೇಮಗಿರಿ ಶುಗರ್ ಕಾರ್ಖಾನೆಗೆ ಕಬ್ಬು ಸಾಗಿಸುವ ಡಬಲ್ ಟ್ರೇಲರ್ ಟ್ರ್ಯಾಕ್ಟರ್ಗಳ ಹಾವಳಿಯಿಂದ ಅಪಘಾತಗಳು ಹೆಚ್ಚುತ್ತಿದ್ದು, ವಾಹನ ಸವಾರರು ಮತ್ತು ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ, ಬಳ್ಳಾರಿ ಮತ್ತು ಮಹಾರಾಷ್ಟ್ರ ಮೂಲದ ಡಬಲ್ ಟ್ರೇಲರ್ ಟ್ರ್ಯಾಕ್ಟರ್ಗಳು ತಾಲ್ಲೂಕಿನಾದ್ಯಂತ ಸಂಚರಿಸುತ್ತಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಜೀವಭಯ ಎದುರಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಡಬಲ್ ಟ್ರಾಲಿ ಬಳಕೆಯೇ ರಸ್ತೆ ನಿಯಮಗಳ ಪ್ರಕಾರ ಅಪರಾಧ. ಅದರ ಜೊತೆಗೆ ಅತಿಯಾದ ತೂಕ ಹೇರಿಕೊಂಡು, ಡಿ.ಜೆ.ಯನ್ನೂ ಮೀರಿಸುವ ಧ್ವನಿವರ್ಧಕಗಳನ್ನು ಹಾಕಿಕೊಂಡು ಸಂಚಾರ ನಿಯಮ ಉಲ್ಲಂಘಿಸಲಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.
ಬಹುತೇಕ ಡಬಲ್ ಟ್ರಾಲಿಗಳಿಗೆ ಎಚ್ಚರಿಕೆ ಸ್ಟಿಕ್ಕರ್ ಅಥವಾ ನಂಬರ್ ಪ್ಲೇಟ್ ಇರುವುದಿಲ್ಲ. ಹಿಂಬದಿಯಿಂದ ಬರುವ ವಾಹನ ಸವಾರರಿಗೆ ಟ್ರಾಲಿ ಕಾಣಿಸದೆ ಅಪಘಾತದ ಭೀತಿ ಹೆಚ್ಚಿದೆ ಎಂಬುದು ಅವರ ಅಳಲು.
**ಸರಣಿ ಅಪಘಾತಗಳು**
ನಾಲ್ಕು ದಿನಗಳ ಹಿಂದೆ ಹೆಮ್ಮನಹಳ್ಳಿ ಗೇಟ್ ಬಳಿ ಪಾಂಡವಪುರ ಮೂಲದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಎರಡು ತಿಂಗಳ ಹಿಂದೆ ಕುಂದನಹಳ್ಳಿ ಗೇಟ್ ಬಳಿ ಬಳ್ಳಾರಿ ಮೂಲದ ವ್ಯಕ್ತಿ ಹಾಗೂ ನಾಲ್ಕು ತಿಂಗಳ ಹಿಂದೆ ಜಲಸೂರು ಹೆದ್ದಾರಿ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಷ್ಟೆಲ್ಲಾ ಅಪಘಾತಗಳು ನಡೆದು, ವಾಹನಗಳಲ್ಲಿ ಹಲವು ನ್ಯೂನತೆಗಳಿದ್ದರೂ ಸಂಬಂಧಪಟ್ಟ ಇಲಾಖೆ ಮತ್ತು ಕಾರ್ಖಾನೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳದೆ ಮೌನವಾಗಿದೆ. ಸಾಮಾನ್ಯ ಜನರ ಜೀವದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
**ರೈತರ ಆರೋಪ**
ಕಾರ್ಖಾನೆಯು ಬೆಳಗಾವಿ, ಮಹಾರಾಷ್ಟ್ರ ಮತ್ತು ಬಳ್ಳಾರಿಯಿಂದ ಕರೆಸಿರುವ ಕಬ್ಬು ಕಟಾವು ಕಾರ್ಮಿಕರು ಟನ್ಗೆ ಸುಮಾರು ₹1,500 ಕೇಳುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಕಟಾವಿನ ನೆಪದಲ್ಲಿ ರೈತರ ಶೋಷಣೆ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಬಲ್ ಟ್ರೇಲರ್ ಟ್ರ್ಯಾಕ್ಟರ್ಗಳ ಹಾವಳಿಗೆ ಕಡಿವಾಣ ಹಾಕಿ ಅಮಾಯಕರ ಜೀವ ಉಳಿಸಬೇಕು ಮತ್ತು ರೈತರ ಶೋಷಣೆ ತಡೆಯಬೇಕು ಎಂದು ಸ್ಥಳೀಯರು ಹಾಗೂ ರೈತರು ಒತ್ತಾಯಿಸಿದ್ದಾರೆ.
*ವರದಿ: ಮನು ಮಾಕವಳ್ಳಿ, ಕೆ.ಆರ್. ಪೇಟೆ*


