Wednesday, November 4, 2026
spot_img

ಸರಕಾರಿ ಶಾಲೆಗಳ‌ ನಿರ್ವಹಣೆ ಖಾಸಗಿ ಶಾಲೆಗಳಿಗೆ:ಡಿಕೆ ಶಿವಕುಮಾರ್

**1,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಗುರಿ: ಡಿ.ಕೆ. ಶಿವಕುಮಾರ್**

*ಬೆಂಗಳೂರು:* ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (Institutional CSR) ಪ್ರತಿನಿಧಿಗಳ ಸಭೆಯಲ್ಲಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಹೊಸ ಸಿಎಸ್‌ಆರ್ ನೀತಿ ಜಾರಿಗೊಳಿಸಿದೆ ಎಂದ ಅವರು, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಗ್ರಾಮೀಣ ಶಾಲೆಗಳನ್ನು ದತ್ತು ಪಡೆಯಲು ಅಥವಾ ಅವುಗಳ ಅಭಿವೃದ್ಧಿಗೆ ಕೈಜೋಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಮಕ್ಕಳನ್ನು ತಮ್ಮ ಶಾಲೆಯ ಮಕ್ಕಳೊಂದಿಗೆ ಸೇರಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

**ಯೋಜನೆಯ ರೂಪರೇಖೆ**

2,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆ ಇದೆ. ಆರಂಭಿಕ ಹಂತದಲ್ಲಿ 1,000 ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಾಲೆಗಳನ್ನು ಜೋಡಿಸುವ ಗುರಿ ಇದೆ. ರಾಜ್ಯದ 6,000 ಪಂಚಾಯಿತಿಗಳನ್ನು ಮೂರು ವಿಭಾಗಗಳಾಗಿ ಮಾಡಲಾಗಿದೆ. ಒಂದು ಖಾಸಗಿ ಶಾಲೆ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಅವಕಾಶವಿದೆ. ಯಾವ ಶಾಲೆಗಳನ್ನು ಪಡೆಯಬೇಕು ಎಂಬ ಆಯ್ಕೆಯನ್ನು ಸರ್ಕಾರ ಮಾಡುವುದಿಲ್ಲ. ತಮ್ಮ ಅನುಕೂಲ ಮತ್ತು ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಆಡಳಿತ ಮಂಡಳಿಗಳೇ ನಿರ್ಧರಿಸಬಹುದು. ಮುಂದಿನ 4–5 ವರ್ಷಗಳಲ್ಲಿ ಈ ಪ್ರಯತ್ನಕ್ಕೆ ಉತ್ತಮ ಫಲ ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶಾಲೆಯನ್ನು ಅಭಿವೃದ್ಧಿಪಡಿಸುವ ಖಾಸಗಿ ಸಂಸ್ಥೆಗಳು ತಮ್ಮ ಹೆಸರನ್ನು ಸರ್ಕಾರಿ ಶಾಲೆಯ ಹೆಸರಿನೊಂದಿಗೆ ಸೇರಿಸಿಕೊಳ್ಳಲು ಅವಕಾಶವಿದೆ. ತಮಿಳುನಾಡು ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಗೆ ‘ಹೆಗ್ಗನೂರು ಸರ್ಕಾರಿ ಟೊಯೊಟಾ ಶಾಲೆ’ ಎಂದು ಹೆಸರಿಡಲು ಅನುಮತಿ ನೀಡಲಾಗಿದೆ.

**ಸಿಎಸ್‌ಆರ್ ನಿಧಿ**

ರಾಜ್ಯದಲ್ಲಿ ವಾರ್ಷಿಕ ಒಟ್ಟು ₹8,800 ಕೋಟಿ ಸಿಎಸ್‌ಆರ್ ನಿಧಿ ಇದೆ. ಎಲ್ಲ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಿ, ಈ ನಿಧಿಯನ್ನು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆಯಾಗಿ ಬಳಸುವಂತೆ ಕೋರಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು. ಕಂಪನಿಗಳು ಈಗಾಗಲೇ ಕೆಲಸ ಆರಂಭಿಸಿವೆ ಎಂದರು.

ಸಿಎಸ್‌ಆರ್ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚಿಸಿರುವುದಾಗಿಯೂ ಅವರು ಹೇಳಿದರು. ಕೆಲವರು ಮುಂಬೈನಲ್ಲಿ ಕಚೇರಿ ತೆರೆದು, ಇಲ್ಲಿ ಕಂಪನಿ ನೋಂದಣಿ ಮಾಡಿಸಿ, ಇಲ್ಲಿ ಗಳಿಸಿದ ಹಣವನ್ನು ಅಲ್ಲಿ ವಿನಿಯೋಗಿಸುತ್ತಿದ್ದಾರೆ. ಹೀಗೆ ಬಿಡುಗಡೆ ಮಾಡಿದ ಹಣದಲ್ಲಿ ಅರ್ಧದಷ್ಟನ್ನು ವಾಪಸ್ ಪಡೆಯಲಾಗುತ್ತಿದೆ. ಇಂತಹ ದಂಧೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದ್ದಾಗಿ ತಿಳಿಸಿದರು.

**ಈಗಾಗಲೇ ನಡೆಯುತ್ತಿರುವ ಕೆಲಸ**

ಬೆಂಗಳೂರು ದಕ್ಷಿಣ ಜಿಲ್ಲೆಯ 30 ಶಾಲೆಗಳಲ್ಲಿ ಕಂಪನಿಗಳ ಸಿಎಸ್‌ಆರ್ ನಿಧಿ ಬಳಸಿ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಇವುಗಳಲ್ಲಿ ಶೇ.10ರಷ್ಟು ಶಾಲೆಗಳ ಕೆಲಸ ಪೂರ್ಣಗೊಂಡಿದೆ, 8 ಶಾಲೆಗಳಲ್ಲಿ ಕೆಲಸ ನಡೆಯುತ್ತಿದೆ ಮತ್ತು 12 ಶಾಲೆಗಳೊಂದಿಗೆ ಒಪ್ಪಂದ ಪೂರ್ಣಗೊಂಡಿದೆ. ಟೊಯೊಟಾ ಕಂಪನಿ ರಾಮನಗರ ಜಿಲ್ಲೆಯಲ್ಲಿ 23 ಶಾಲೆಗಳ ನಿರ್ಮಾಣಕ್ಕೆ ನೆರವು ನೀಡಿದ್ದು, ಪ್ರತಿ ಶಾಲೆಗೆ ₹10–15 ಕೋಟಿ ಹೂಡಿಕೆ ಮಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರವೇ ನೀಲನಕ್ಷೆ ನೀಡಿದೆ.

ವಿಶ್ವಬ್ಯಾಂಕ್‌ನಿಂದ ₹2,000 ಕೋಟಿ ಸಾಲ ಪಡೆದು ಕೆಪಿಎಸ್ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಶಿಕ್ಷಕರ ಆಯ್ಕೆಯ ಹಂತದಲ್ಲೇ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ವಿದೇಶದಲ್ಲಿರುವವರು ಕೂಡ ತಮ್ಮ ಹಳ್ಳಿಗಳ ಶಾಲೆಗಳ ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ ಎಂದು ಅವರು ತಿಳಿಸಿದರು.

**ಬೆಂಗಳೂರಿನ ಒತ್ತಡ ಕಡಿಮೆ ಮಾಡುವ ಉದ್ದೇಶ**

ದೇಶದಲ್ಲಿರುವ 140 ಅಂತರರಾಷ್ಟ್ರೀಯ ಗುಣಮಟ್ಟದ ಶಾಲೆಗಳಲ್ಲಿ 38 ಕರ್ನಾಟಕದಲ್ಲಿವೆ. ಬೆಂಗಳೂರಿನ ದಟ್ಟಣೆಗೆ ಉದ್ಯೋಗ ಮತ್ತು ಶಿಕ್ಷಣ ವಲಯ ಪ್ರಮುಖ ಕಾರಣ. ಮಕ್ಕಳಿಗೆ ತಮ್ಮ ಹಳ್ಳಿಯಲ್ಲೇ ಗುಣಮಟ್ಟದ ಶಿಕ್ಷಣ ದೊರೆತರೆ ನಗರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಷ್ಟು ಆರ್ಥಿಕವಾಗಿ ಸದೃಢವಾಗಿವೆ. ತಮ್ಮ ಶಾಲೆಯ ಶಿಕ್ಷಣದ ಗುಣಮಟ್ಟ ಮತ್ತು ಸಾಮರ್ಥ್ಯದ ಸ್ವಲ್ಪ ಭಾಗವನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದರೆ ಗ್ರಾಮೀಣ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬರುವುದನ್ನು ತಪ್ಪಿಸಬಹುದು. “ನೀವು ಕೂಡ ಹಳ್ಳಿಯಿಂದ ಬಂದವರು, ನಿಮ್ಮ ಹಳ್ಳಿಯ ಶಾಲೆಗೆ ಏನಾದರೂ ಕೊಡುಗೆ ನೀಡಿ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೆ ಕೈಜೋಡಿಸುವುದು ನಿಮ್ಮೆಲ್ಲರ ಕರ್ತವ್ಯ” ಎಂದು ಅವರು ಹೇಳಿದರು.

ಸರಕಾರಿ ಶಾಲೆಗಳ ಉಳಿವಿಗಾಗಿ ಹೋರಾಟಗಳು ನಡೆಯುತ್ತಿರುವ ನಡುವೆಯೆ ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಸರಕಾರಿ ಶಾಲೆಗಳ ನಿರ್ವಹಣೆ ಹೊಣೆ ಹೊರಿಸಲು ಹೊರಟಿರುವುದು ಶಿಕ್ಷಣ ಕ್ಷೇತ್ರದಿಂದ ಸರಕಾರ ಹೊರ ನಡೆದಂತೆ ಎಂದೇ ವಿಶ್ಲೇಷಿಸಲಾಗುತ್ತಿದೆ.

—

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!