ನಕಲಿ ಔಷಧ ದಂಧೆ: ‘ಕೃಪಾ ಹೆಲ್ತ್ಕೇರ್’ ಮಾಲೀಕ ವೀರೇಶ್ ಕುಮಾರ್ ಅವರ 9 ಲಕ್ಷ ರೂ. ಖಾತೆ ಫ್ರೀಜ್ ಮಾಡಿದ ಇ.ಡಿ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದ ಬಹುಕೋಟಿ ನಕಲಿ ಔಷಧ ಜಾಲದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ತೀವ್ರಗೊಳಿಸಿದ್ದು, ‘ಕೃಪಾ ಹೆಲ್ತ್ಕೇರ್’ ಮಾಲೀಕ ವೀರೇಶ್ ಕುಮಾರ್ ಅವರಿಗೆ ಸೇರಿದ ಸುಮಾರು 9 ಲಕ್ಷ ರೂಪಾಯಿ ಬ್ಯಾಂಕ್ ಡೆಪಾಸಿಟ್ಗಳನ್ನು ಫ್ರೀಜ್ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಇ.ಡಿ. ಅಧಿಕಾರಿಗಳು, ಬೆಂಗಳೂರಿನ ವಿವಿಧ 5 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಮುಖ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಆಕ್ಷೇಪಾರ್ಹ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರು ದಕ್ಷಿಣದ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಹಾಗೂ ಔಷಧ ನಿಯಂತ್ರಣ ಇಲಾಖೆಯ ಕಾರ್ಯಾಚರಣೆ ಆಧಾರದ ಮೇಲೆ ಇ.ಡಿ. ಪ್ರಕರಣ ದಾಖಲಿಸಿಕೊಂಡಿತ್ತು. ಮುಖ್ಯ ಆರೋಪಿಗಳು ಬಿಡದಿ ಬಳಿಯ ಫಾರ್ಮ್ಹೌಸ್ನಲ್ಲಿ ಯಾವುದೇ ಸಿಂಧು ಪರವಾನಗಿ ಇಲ್ಲದೆ, ವಿವಿಧ ರಾಜ್ಯಗಳಿಂದ ತರಿಸಿದ ಅಗ್ಗದ ದರದ ಜನೆರಿಕ್ ಮಾತ್ರೆಗಳು ಹಾಗೂ ಔಷಧಗಳನ್ನು ಮರು-ಪ್ಯಾಕ್ ಮಾಡುತ್ತಿದ್ದರು. ನಂತರ ಅವುಗಳಿಗೆ ಪ್ರಸಿದ್ಧ ‘ಫೈಜರ್’ (Pfizer) ಕಂಪನಿಯ ‘ಜಾವಿಸೆಫ್ಟಾ’ ಮತ್ತು ‘ಎಂಬ್ಲಾವಿಯೊ’ದಂತಹ ದುಬಾರಿ ಆಂಟಿಬಯೋಟಿಕ್ ಬ್ರಾಂಡ್ಗಳ ನಕಲಿ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಬಿಡಲಾಗುತ್ತಿತ್ತು.
ಈ ನಕಲಿ ಔಷಧಗಳನ್ನು ಡಿ.ಎಂ. ಫಾರ್ಮಾಸ್ಯುಟಿಕಲ್ಸ್ ಹಾಗೂ ಕೃಪಾ ಹೆಲ್ತ್ಕೇರ್ ಮೂಲಕ ನೈಜ ಔಷಧಗಳ ಜೊತೆಗೆ ಬೆರೆಸಿ ವಿವಿಧ ಆಸ್ಪತ್ರೆಗಳಿಗೆ ಹಾಗೂ ಫಾರ್ಮಸಿಗಳಿಗೆ ಪೂರೈಸಲಾಗುತ್ತಿತ್ತು ಎಂಬುದು ಇ.ಡಿ. ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಕುರಿತು ಇ.ಡಿ. ಮತ್ತಷ್ಟು ಆಳವಾದ ತನಿಖೆಯನ್ನು ಮುಂದುವರಿಸಿದೆ.


