Thursday, September 19, 2024
spot_img

ಅನ್ನಭಾಗ್ಯ ಬಿಟ್ಟಿಯಲ್ಲ ಅದು ಸರಕಾರದ ಜವಾಬ್ದಾರಿ

ಉಚಿತ ‘ಭಾಗ್ಯ’
ಡಾ. ಎಚ್ ಎಸ್‌ ಅನುಪಮಾ


ಕಾಂಗ್ರೆಸ್ ಸರಕಾರ ಕೊಡುತ್ತಿರುವ ಐದು ಭಾಗ್ಯ’ಗಳು ಉಚಿತವಾದವು. ಉಚಿತ ಎಂಬ ಪದದ ಅರ್ಥ ಪುಕ್ಕಟೆ ಅಲ್ಲ,ಸೂಕ್ತ’ ಎಂದು. ಎಂದರೆ ಈ ಐದೂ ಕೊಡಲೇಬೇಕಾದ ಜವಾಬ್ದಾರಿಗಳು. ಕೊಡದಿರುವುದು ಅನುಚಿತ. ಬಡತನದ ಬಿಕ್ಕಟ್ಟುಗಳ ಅರಿವಿಲ್ಲದ, ಆರ್ಥಿಕತೆಯ ಗಂಧಗಾಳಿ ಇಲ್ಲದ ಟ್ಯಾಕ್ಸ್‌ಪೇಯರ್’ಗಳು, ಯಾವುದನ್ನು ಹೇಗೆ ವಿರೋಧಿಸಬೇಕೆಂದರಿಯದ ವಿರೋಧಪಕ್ಷಗಳು ಭಾಗ್ಯಗಳ ಬಗೆಗೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಈಗಾಗಲೇ ಜಾರಿಯಾಗಿರುವ, ಮಹಿಳೆಯರಿಗೆ ಶುಲ್ಕರಹಿತ ಬಸ್ ಪ್ರಯಾಣಶಕ್ತಿ’ಯ ಬಗೆಗಂತೂ ವಿಪರೀತದ ಕುಹಕ ಕೇಳಿಬರುತ್ತಿದೆ. ಏನಚ್ಚರಿ? ಮಹಿಳೆಯರ ದುಡಿಮೆ, ವಿರಾಮ, ಮನರಂಜನೆಯ ಬಗೆಗೆ ಸಮಾಜ ಹೊಂದಿರುವ ಅಸಡ್ಡೆ ಈ ಪ್ರತಿಕ್ರಿಯೆಗಳಲ್ಲಿ ವ್ಯಕ್ತವಾಗುತ್ತಿದೆ. ಇದೇ ಮುಂದುವರಿದು ಬರಿಯ ಒಂಭತ್ತು ಮಹಿಳೆಯರಷ್ಟೇ ಶಾಸನ ಸಭೆಗೆ ಆಯ್ಕೆಯಾಗಿರುವ, ನಾಲ್ವರು ಶಾಸಕಿಯರಲ್ಲಿ ಒಬ್ಬರಷ್ಟೇ ಮಂತ್ರಿಯಾಗುವತನಕ ಮುಂದುವರೆದಿದೆ.

ಆದಾಯ ತೆರಿಗೆ ಕಟ್ಟುವ ಟ್ಯಾಕ್ಸ್‌ಪೇಯರ್’ಗಳು ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುತ್ತಿದ್ದಾರೆ. ಬಹುಶಃ ಅವರು ತಾವಷ್ಟೇ ತೆರಿಗೆ ಕಟ್ಟುವವರೆಂದು ಭಾವಿಸಿದಂತಿದೆ. ಹಾಗೆ ನೋಡಿದರೆ ಪ್ರತಿಯೊಬ್ಬ ನಾಗರಿಕರೂ ತೆರಿಗೆ ಕೊಡುವವರೇ. ತಾವು ಕೊಳ್ಳುವ ಊದುಬತ್ತಿ, ಪೆನ್ನು, ನೋಟ್‍ಬುಕ್, ಮೊಬೈಲು, ಗುಟ್ಕಾ, ಬಿಸ್ಕೀಟು, ಹಾಲು, ಅಕ್ಕಿ, ಬಳೆ, ಟಿಕ್ಲಿ, ಹೆಂಡ, ಬಟ್ಟೆ, ಬೀಡಿ, ಬೆಂಕಿಪೊಟ್ಣ ಮುಂತಾಗಿ ಪ್ರತಿಯೊಂದು ವಸ್ತುವಿನ ಮೇಲೂ ವಿಧಿಸಲ್ಪಟ್ಟ ಜಿಎಸ್ಟಿ ತೆರಿಗೆ ತೆತ್ತು ಅವರು ವಸ್ತುಗಳನ್ನು ಕೊಂಡಿರುತ್ತಾರೆ. ವಿದ್ಯುತ್, ನೀರು, ಗ್ಯಾಸ್, ವಸತಿಗಳಿಗೆ ಬಿಲ್ ಜೊತೆಗೆ ತೆರಿಗೆ ಕಟ್ಟುತ್ತಾರೆ. ಬಡವರ ಸೀಮಿತ ಆದಾಯಕ್ಕೆ ಹೋಲಿಸಿದರೆ ಅವರು ಕೊಡುವ ವಸ್ತುಗಳ ಮೇಲಿನ ತೆರಿಗೆ ತುಂಬ ಹೆಚ್ಚು. ಸರ್ಕಾರದ ಬೊಕ್ಕಸಕ್ಕೆ ಆದಾಯ ತೆರಿಗೆಯಿಂದ ಬರುವ ಹಣಕ್ಕಿಂತ ಇಂತಹ ಪರೋಕ್ಷ ತೆರಿಗೆಗಳಿಂದ ಬರುವ ಆದಾಯವೇ ಹೆಚ್ಚು. ಇದೇ ಬಡವರ ಇದೇ ತೆರಿಗೆ ಹಣ ಬಳಸಿ ಅವರೆಂದೂ ಬಳಸದ ಏರ್‌ಪೋರ್ಟ್, ಫ್ಲೈ ಓವರ್, ಸಂಸತ್ ಭವನ, ವಿಶ್ವವಿದ್ಯಾಲಯ, ಸಂಸ್ಥೆಗಳನ್ನು ಕಟ್ಟಿದೆವು. ಭಾರೀ ಮೂರ್ತಿ, ಸ್ಮಾರಕಗಳ ನಿಲ್ಲಿಸಿದೆವು. ಕಟ್ಟುವಾಗ ನಾಲ್ಕು ಜನರಿಗೆ ಸಿಕ್ಕ ಕೂಲಿಯ ಕೆಲಸದ ಹೊರತು ಬಡವರಿಗೆ ಅವುಗಳಿಂದ ಏನೂ ಉಪಯೋಗವಿಲ್ಲ. ಬಡವರ ತೆರಿಗೆ ಹಣವನ್ನು ಉಳ್ಳವರು ಕಸಿಯುತ್ತಿರುವುದರ ಪರಿಜ್ಞಾನವಿಲ್ಲದೆಭಾಗ್ಯ’ಗಳ ಬಗೆಗೆ ವಿಪರೀತ ಅಪಪ್ರಚಾರ ನಡೆಯುತ್ತಿದೆ.

ಭಾಗ್ಯಗಳಲ್ಲಿ ಒಂದಾದ, ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಶುಲ್ಕರಹಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆಯ ಬಗೆಗೆ ಮೆಚ್ಚಿಗೆ, ಧನ್ಯತಾಭಾವಗಳಷ್ಟೇ ಟೀಕೆ, ವಿರೋಧಗಳೂ ವ್ಯಕ್ತವಾಗುತ್ತಿವೆ. ಭಾರತದ ಅರ್ಧಕ್ಕರ್ಧ ಕುಟುಂಬಗಳ ತಿಂಗಳ ಆದಾಯ 10 ಸಾವಿರದ ಆಸುಪಾಸು. ಎಂದೇ ದುಡಿಯುವ ಮಹಿಳೆಯರಲ್ಲಿ 92% ಕುಟುಂಬ ನಡೆಸಲು ಉದ್ಯೋಗ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಸಿಕ್ಕಷ್ಟು ಸಿಗಲಿ ಎಂದು ಕಡಿಮೆ ವೇತನಕ್ಕೆ ದುಡಿಯುವವರೇ ಆಗಿದ್ದಾರೆ. ಬೆಂಗಳೂರು ಒಂದರಲ್ಲೇ 3 ಲಕ್ಷದಷ್ಟು ಮಹಿಳೆಯರು ಗಾರ್ಮೆಂಟ್ ಉದ್ದಿಮೆಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿನಿತ್ಯ ಕನಿಷ್ಟ 8 ಗಂಟೆ ದುಡಿದು, ತಿಂಗಳಿಗೆ 8ರಿಂದ 10 ಸಾವಿರ ರೂಪಾಯಿ ವೇತನ ಪಡೆಯುವ ಅವರು ದುಬಾರಿ ಬಾಡಿಗೆ ಕೊಟ್ಟು ನಗರದಲ್ಲಿ ವಾಸಿಸಲಾರರು. ಬಹುತೇಕರು ಅಕ್ಕಪಕ್ಕದ ಊರುಗಳಿಂದ ಅಥವಾ ನಗರದ ಹೊರವಲಯದ ಬಡಾವಣೆಗಳಿಂದ ಕೆಲಸದ ಸ್ಥಳಗಳಿಗೆ ಪಯಣಿಸುತ್ತಾರೆ. ಗಾರ್ಮೆಂಟ್ ಅಷ್ಟೇ ಅಲ್ಲ, ಬೆಂಗಳೂರಿನಲ್ಲೇ ಒಂದುಕಡೆಯಿಂದ ಇನ್ನೊಂದೆಡೆಗೆ ಪ್ರತಿನಿತ್ಯ ಪಯಣಿಸುವ ಲಕ್ಷಾಂತರ ಉದ್ಯೋಗಿಗಳಿದ್ದಾರೆ. ಅವರು ಪ್ರಯಾಣಕ್ಕಾಗಿಯೇ ಸಂಬಳದ ಒಂದು ಪಾಲನ್ನು ಎತ್ತಿಡಬೇಕು. ಅಂಥವರಿಗೆ ಶುಲ್ಕರಹಿತ ಬಸ್ ಪ್ರಯಾಣ ವರದಾನವಾಗಿದೆ.

ಇನ್ನು ಒಂದೂರಿನಿಂದ ಬೇರೆ ಊರಿಗೆ ಗುಳೆಬಂದು ಕಟ್ಟಡ ನಿರ್ಮಾಣ, ರಸ್ತೆ ಕೆಲಸ, ಜಂಗಲ್ ಕಟಿಂಗ್, ಮರಳು ಸಾಗಣೆ, ಮನೆಗೆಲಸ, ಕೂಲಿ ಕೆಲಸಗಳಲ್ಲಿ ತೊಡಗಿಕೊಂಡ ಲಕ್ಷಾಂತರ ವಲಸಿಗರಿದ್ದಾರೆ. ಅಂಥವರು ದೂರದ ತಮ್ಮೂರಿಗೆ ಹೋಗಿ ಬರುವುದೆಂದರೆ ಒಂದು ವಾರದ ದುಡಿಮೆಯನ್ನು ಬಸ್‌ಚಾರ್ಜ್‌ಗೇ ತೆಗೆದಿಡಬೇಕಾಗುತ್ತದೆ. ಎಂದೇ ಊರಿಗೆ ಹೋಗುವ ಬಯಕೆಯಿದ್ದರೂ ಹೋಗದೇ ಯಂತ್ರಗಳಂತೆ ದುಡಿಯುತ್ತಾರೆ. ಅಂಥವರಿಗೆ ಮಹಿಳೆಯರಿಗೆ ಟಿಕೆಟ್ ಇಲ್ಲವೆಂದರೆ ಅರ್ಧ ಖರ್ಚಿನಲ್ಲಿ ಊರಿಗೆ ಹೋಗಿಬರಲು ಅನುಕೂಲವಾಗುತ್ತದೆ.

ಶಾಲೆಕಾಲೇಜಿಗೆ ಹೋಗಿಬರಲು ಪಾಸ್ ಮಾಡಿಸಲೂ ಸಾಧ್ಯವಾಗದೇ ಎಷ್ಟೋ ಬಡ ಮನೆತನಗಳ ಹೆಣ್ಣುಮಕ್ಕಳು ಶಾಲೆ ಬಿಟ್ಟು ಮನೆಯಲ್ಲಿ ಕೂತಿರುವುದನ್ನು ಪ್ರತಿನಿತ್ಯ ಕಾಣುತ್ತಿದ್ದೇವೆ. ಇಂಥವರಿಗೆಲ್ಲ ಶಕ್ತಿ ಯೋಜನೆ ಸಹಾಯವಾಗುತ್ತದೆ. ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಸರ್ಕಾರವು ಅವರ ಶೈಕ್ಷಣಿಕ ಅವಕಾಶ, ದುಡಿಮೆಯ ಶಕ್ತಿ, ಗಳಿಕೆಯನ್ನು ಹೆಚ್ಚು ಮಾಡಿದಂತಾಗುತ್ತದೆ. ಅದರ ಜೊತೆಗೆ ಪ್ರತಿ ಮನೆಯೊಡತಿಗೆ ಎರಡು ಸಾವಿರ ರೂಪಾಯಿಯೂ ಬಂದರೆ, ನಿರುದ್ಯೋಗಿ ಪದವೀಧರ ಯುವಜನರಿಗೆ ಭತ್ಯೆಯೂ ದೊರೆತರೆ ಕುಟುಂಬಗಳ ಆರ್ಥಿಕ ಸ್ಥಿತಿ ಕೊಂಚ ಸುಧಾರಿಸುತ್ತದೆ. ಪ್ರತಿ ತಿಂಗಳು 10 ಸಾವಿರದಲ್ಲಿ ಬದುಕಿನ ಬಂಡಿ ತೂಗಿಸಬೇಕಾದವರಿಗೆ ನಾನಾ ಯೋಜನೆಗಳಿಂದ 5,000 ರೂ. ದೊರೆಯುವಂತಾದರೆ ಅವರ ಆರೋಗ್ಯ, ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲವೆ?

ಹೀಗೆ ಬಸ್‌ ಚಾರ್ಜ್‌ ಇಲ್ಲದೆ ಉಳಿಸಿದ, `ಭಾಗ್ಯ’ದಿಂದ ದೊರಕಿದ ಹೆಚ್ಚುವರಿ ಹಣವನ್ನು ಮಹಿಳೆಯರು ಏನು ಮಾಡಿಯಾರು? ತರಕಾರಿ, ಹಣ್ಣು, ಮಾಂಸ, ಹಾಲು, ಬಟ್ಟೆ ಕೊಂಡಾರು. ಸಾಲ ತೀರಿಸಿಯಾರು. ಮುಂದೇನಕ್ಕೋ ಬೇಕೆಂದು ತೆಗೆದಿಟ್ಟುಕೊಂಡಾರು. ಔಷಧೋಪಚಾರ, ಆಸ್ಪತ್ರೆಗೆ ಹೋಗಿ ಬಂದಾರು. ಕೈಸಾಲ, ಬ್ಯಾಂಕಿನ ಸಾಲ ತೀರಿಸಿಯಾರು. ಕೈಯಲ್ಲಿ ನಾಕು ಕಾಸು ಇಟ್ಟುಕೊಂಡಾರು. ಅಡವಿಟ್ಟ ಚೂರು ಬಂಗಾರ ಬಿಡಿಸಿಕೊಂಡಾರು. ಬಾಕಿಯಿರುವ ಹರಕೆ, ಮನದಾಸೆ ತೀರಿಸಿಕೊಳ್ಳಲು ತೀರ್ಥಕ್ಷೇತ್ರಗಳಿಗೆ ಹೋದಾರು. ಎಲ್ಲೋ ಕೆಲವರು ಟೂರಿಗೂ ಹೋಗಬಹುದು. ತಮಗಿಷ್ಟದ ಬಟ್ಟೆ, ಬಳೆ ಕೊಳ್ಳಬಹುದು. ಅವರು ಹಾಗೆ ಮಾಡುವುದರಿಂದ ಅಂಗಡಿಗಳಿಗೆ ವ್ಯಾಪಾರವಾಗುತ್ತದೆ. ಬ್ಯಾಂಕುಗಳ ಸಾಲ ಮರುಪಾವತಿಯಾಗುತ್ತದೆ. ತೀರ್ಥಕ್ಷೇತ್ರಗಳಲ್ಲಿ ಪೂಜೆ ಮಾಡುವ ಪುರೋಹಿತವರ್ಗದಿಂದ ಹಿಡಿದು ಚಿಕ್ಕಿ, ಬಲೂನು, ಪ್ರಸಾದ, ಬಳೆ ಟಿಕ್ಲಿ ಮಾರುವವರವರೆಗೆ, ಹೋಟೆಲು, ರಿಕ್ಷಾ, ಲಾಡ್ಜುಗಳವರೆಗೆ ಎಲ್ಲರ ವ್ಯಾಪಾರ ವೃದ್ಧಿಸುತ್ತದೆ.

ಅಂದರೆ ಸರ್ಕಾರದಿಂದ ಜನರ ಕೈಗೆ ಬಿದ್ದ ಕಾಸು ಊರಿಡೀ ಓಡಾಡುತ್ತದೆ. ಸರ್ಕಾರ ಅವರ ಪ್ರಯಾಣದ ರಖಮನ್ನು ಸಾರಿಗೆ ಸಂಸ್ಥೆಗಳಿಗೆ ಪಾವತಿಸುವುದರಿಂದ ಅವೂ ನಷ್ಟವನ್ನು ಕಡಿಮೆ ಮಾಡಿಕೊಳ್ಳುತ್ತವೆ. ಮಹಿಳೆಯರ ಜೊತೆಗೆ ಗಂಡಸರು, ಮಕ್ಕಳೂ ಬಸ್ ಹತ್ತಿ ಟಿಕೆಟ್ ಪಡೆಯುವುದರಿಂದ ಒಟ್ಟು ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಶಕ್ತಿ ಯೋಜನೆ ಆರಂಭಕ್ಕಿಂತ ಮೊದಲು ನಿತ್ಯ 84.14 ಲಕ್ಷ ಜನ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಮೊದಲ 6 ದಿನಗಳಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆಯು 84 ಲಕ್ಷದಿಂದ 1.16 ಕೋಟಿಗೇರಿತು. ಮಹಿಳಾ ಪ್ರಯಾಣಿಕರ ಸಂಖ್ಯೆಯೂ 41.34 ಲಕ್ಷದಿಂದ 55.09 ಲಕ್ಷಕ್ಕೇರಿತು. ದಿನನಿತ್ಯ 50% ಆಸನಗಳಲ್ಲಿ ಪುರುಷರೂ ಪ್ರಯಾಣಿಸುವುದರಿಂದ ಒಟ್ಟಾರೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಸಾರಿಗೆ ನಿಗಮಗಳಿಗೆ ತಿಂಗಳಿಗೆ 337 ಕೋಟಿ ರೂಪಾಯಿ, ವರ್ಷಕ್ಕೆ 4051 ಕೋಟಿ ರೂಪಾಯಿ ಆದಾಯ ಜನರಿಂದ ಬರದಿದ್ದರೂ ಸರ್ಕಾರದಿಂದ ಪಾವತಿಯಾಗಲಿದೆ.

ಇದರಿಂದ ಇನ್ನೂ ಹಲವು ಅನುಕೂಲಗಳಿವೆ. ಎಲ್ಲ `ಅಭಿವೃದ್ಧಿ’ ಮಾದರಿಗಳಲ್ಲಿ ಹೆಣ್ಣು ಹೊರಗೇ ಉಳಿದಿರುತ್ತಾಳೆ. ಈ ಮೂಲಕ ಅವಳನ್ನು ಒಳಗೊಳ್ಳಲು ಸಾಧ್ಯವಾಗಬಹುದು. ಮಹಿಳೆಯರು ಹೆಚ್ಚೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಹುದು. ಹೆಚ್ಚೆಚ್ಚು ಸಾರ್ವಜನಿಕ ಸಾರಿಗೆ ಬಳಸಬಹುದು. ಕಾರು, ಬೈಕು, ರಿಕ್ಷಾ ಹತ್ತದೆ ಸರ್ಕಾರಿ ಬಸ್ಸನ್ನೇರಿದರೆ ಟ್ರಾಫಿಕ್ ಸಮಸ್ಯೆಯೂ ಕಡಿಮೆಯಾಗಬಹುದು. ಸಾರ್ವಜನಿಕ ಸಾರಿಗೆ ಶುಲ್ಕರಹಿತವಾದ ದೇಶಗಳಲ್ಲೆಲ್ಲ ಆರ್ಥಿಕತೆ, ವಾಹನ ದಟ್ಟಣೆ, ವಾಯುಮಾಲಿನ್ಯ ಸುಧಾರಿಸಿದ ಉದಾಹರಣೆಗಳಿವೆ.

ಪದವೀಧರರ ಭತ್ಯೆಯಿಂದ, ಗೃಹಿಣಿಗೆ ಕೊಡುವ ಭಾಗ್ಯ’ದಿಂದಲೂ ಇಂತಹುದೇ ಪರಿಣಾಮಗಳಾಗಲಿವೆ. ಸಮಾಜದ ಎಲ್ಲ ಬಡವರಿಗೂ, ಮಹಿಳೆಯರಿಗೂ, ನಿರುದ್ಯೋಗಿ ಯುವಜನರಿಗೂ ಉಪಯೋಗವಾಗುವ ಇಂತಹಭಾಗ್ಯ’ಗಳು ಹಲವು ದೇಶಗಳಲ್ಲಿ ಜಾರಿಯಲ್ಲಿದ್ದು ಯಶಸ್ವಿಯಾಗಿವೆ. ಭಾರತದಲ್ಲೂ ದೆಹಲಿ, ತಮಿಳುನಾಡು ಮತ್ತಿತರ ರಾಜ್ಯಗಳು ಭಾಗ್ಯಗಳನ್ನು ಯಶಸ್ವಿಗೊಳಿಸಿವೆ. ಕರ್ನಾಟಕವೂ ಮೊದಲು ಸಾಕಷ್ಟು ಭಾಗ್ಯಗಳನ್ನು ಕೊಟ್ಟಿದೆ. ಈಗ ಇವನ್ನೂ ಯಶಸ್ವಿಗೊಳಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಲ್ಲ, ಎಲ್ಲರ ಮೇಲಿದೆ.

ಅರ್ಥಶಾಸ್ತ್ರ ಹೇಳುವಂತೆ ಹಣವಂತರು ತಿಜೋರಿಗಳಲ್ಲಿ ಬಂಗಾರದ ಗಟ್ಟಿ, ನೋಟಿನ ಕಂತೆ ಕೂಡಿಟ್ಟರೆ, ಸಿಕ್ಕಸಿಕ್ಕಲ್ಲಿ ಸೈಟು ಕೊಂಡು ಬೇಲಿ ಹಾಕಿಸಿಟ್ಟರೆ ಆರ್ಥಿಕತೆ ಕುಸಿಯುತ್ತದೆ. ಆರ್ಥಿಕ ವ್ಯವಸ್ಥೆ ಆರೋಗ್ಯಕರವಾಗಿರಲು ಹಣ ಚಲಾವಣೆಯಾಗಬೇಕು. ಆರ್ಥಿಕತೆಯನ್ನು ಬೂಸ್ಟ್’ ಮಾಡಲು ಜನ ಖರ್ಚು ಮಾಡುವಂತಾಗಬೇಕು. ಅಂದರೆ ಹಣವಿಲ್ಲದವರ ಬಳಿಗೆ ನಗದು ಹರಿಯಬೇಕು. ಈಭಾಗ್ಯ’ಗಳ ಮೂಲಕ ಖರ್ಚು ಮಾಡಲು ಜನರ ಕೈಯಲ್ಲಿ ಕಾಸಿರಲಿದೆ ಎಂದಾದರೆ, ಮತ್ತು ಆ ಹಣ ಕೂಡಿಡುವುದಕ್ಕಲ್ಲದೆ ದಿನನಿತ್ಯದ ಉಪಯೋಗಗಳಿಗೆ ಚಲಾವಣೆಯಾಗುವುದಾದರೆ ಅದರಿಂದ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದೇ ಆಗಲಿದೆ.

ಇಷ್ಟಾದಮೇಲೂ ಬೊಕ್ಕಸಕ್ಕೆ ನಷ್ಟ ಎನ್ನುವವರು ಟಿಕೆಟ್ ಪಡೆದು ಬಸ್ಸಿನಲ್ಲಿ ಪಯಣಿಸಲಿ. ರಶ್ ಇರುವ ಬಸ್ಸಿನಲ್ಲಿ ಬೆವರ ವಾಸನೆಯವರು ಪರಪರ ಕೆರೆಯುತ್ತ ಪಕ್ಕ ಕೂತು ತಮಗೆ ಅಸಹ್ಯವಾಗುವುದೆನ್ನುವವರು `ಭಾಗ್ಯ’ ಬೇಡವೆಂದು ತಮ್ಮ ಕಾರಿನಲ್ಲೇ ಪಯಣಿಸಲಿ. ಆ ಮೂಲಕ ಸರ್ಕಾರದ ಹೊರೆಯನ್ನು ಇಳಿಸಲಿ.

ಹಲವು ಭಾಗ್ಯಗಳನ್ನು ಲಾಗಾಯ್ತಿನಿಂದ ಕೊಡುತ್ತ ಬಂದಿರುವ ದಕ್ಷಿಣದ ಐದು ರಾಜ್ಯಗಳು ದೇಶದ ಜಿಡಿಪಿಗೆ 30% ಸಂದಾಯ ಮಾಡುವಷ್ಟು ಮುಂದುವರೆದಿರುವುದು ಹೇಗೆ ಎಂದು ಮುಂದುವರಿದವರು ಇನ್ನಾದರೂ ಯೋಚಿಸಲಿ.


ಸರ್ಕಾರಿ ಉದ್ಯೋಗ, ಬ್ಯಾಂಕ್, ಸೇನೆ, ಕಾರ್ಪೊರೇಷನ್ನುಗಳ ಎಷ್ಟೋ ನೌಕರರು ನಿವೃತ್ತರಾದ ಬಳಿಕ ಪಿಂಚಣಿ ಪಡೆಯುತ್ತಿದ್ದಾರೆ. ಕೆಲವರು ಎಷ್ಟು ವರ್ಷ ಸೇವೆ ಮಾಡಿದರೋ ಅಷ್ಟೇ ವರ್ಷ ಪಿಂಚಣಿ ಪಡೆದಿದ್ದಾರೆ. ಅವರ ಬಳಿಕ ಅವರ ಸಂಗಾತಿಯೂ ಪಡೆದಿದ್ದಾರೆ. ಐದಂಕಿ ಸಂಬಳ ಎಣಿಸುವ ಮೇಲ್ವರ್ಗದ ಅಧಿಕಾರಿಗಳೂ ದಿನಭತ್ಯೆ, ಪ್ರಯಾಣ ಭತ್ಯೆ ಎಂದು ಸುಳ್ಳು ಬಿಲ್ಲುಗಳ ಸೃಷ್ಟಿಸಿ ಕ್ಲೇಮ್ ಮಾಡುತ್ತಾರೆ. ಸಂಬಳದ ನೂರುಪಟ್ಟು ಗಿಂಬಳ ಪಡೆಯುತ್ತಾರೆ. ಹಿರಿಯ ನಾಗರಿಕರ’ ರಿಯಾಯ್ತಿಯನ್ನು ಉಳ್ಳವರೂ ಸಂಕೋಚವಿಲ್ಲದೆ ಪಡೆಯುತ್ತಾರೆ. ಅದಷ್ಟೇ ಅಲ್ಲ, ಮತ್ಯಾವುದೇ ವಿನಾಯ್ತಿ, ರಿಯಾಯ್ತಿ ಇದೆಯೆಂದು ತಿಳಿದರೂ ತಕ್ಷಣ ಅದಕ್ಕೆ ಮುಗಿಬೀಳುತ್ತಾರೆ. ಬಡಜನರ ಸಮಾನ ಸಂಪನ್ಮೂಲದ ಪಾಲಿನಿಂದ, ರೈತರ ಬೆವರಿನಿಂದ, ಪ್ರತಿ ನಾಗರಿಕರಿಗೆ ವಿಧಿಸುವ ಆದಾಯ ತೆರಿಗೆ, ವಸ್ತು ತೆರಿಗೆಯ ಹಣದಿಂದ ಅವರಿಗೆ ಈಭಾಗ್ಯ’ಗಳನ್ನು ಸರ್ಕಾರ ಕೊಟ್ಟಿದೆ. ಆಗಲಿ, ಅವರಿಗೆ ಕೊಡಲೆಂದೇ ಮಾಡಿರುವುದನ್ನು ಪಡೆಯಲಿ. ಆದರೆ ತಾವು ಪಡೆಯುವಾಗ ಚಕಾರ ಎತ್ತದ ವರ್ಗವೇ ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟರೆ ಅವರು ಕುಳಿತುಂಡು ಸೋಮಾರಿಗಳಾಗುತ್ತಾರೆ; ಪುಕ್ಕಟೆ ಪ್ರಯಾಣ ಮಾಡಲು ಅವಕಾಶ ಕೊಟ್ಟರೆ ಹೆಂಗಸರು ಮನಬಂದಂತೆ ತಿರುಗುತ್ತಾರೆ; ಮನೆಯೊಡತಿಗೆ 2000 ರೂ. ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂಬ ಅಸಹ್ಯ ವಾದ ಮಂಡಿಸುತ್ತಿರುವುದು ವಿಚಿತ್ರವಾಗಿದೆ. ಮಹಿಳೆಯರು ಕಿತ್ತಾಡುವ ಯಾವ್ಯಾವುದೋ ಹಳೆಯ ವೀಡಿಯೋ, ಫೋಟೋಗಳನ್ನು ನಿನ್ನೆಮೊನ್ನೆಯದೆಂಬಂತೆ ಸೃಷ್ಟಿಸಿ ಫಾರ್ವರ್ಡ್ ಮಾಡಲಾಗುತ್ತಿದೆ. ಫೇಕ್‍ನ್ಯೂಸ್ ಫ್ಯಾಕ್ಟರಿಗೆ ಪುರುಸೊತ್ತೇ ಇಲ್ಲದಾಗಿದೆ.

ಭಾರೀ ಬಂಡವಾಳಶಾಹಿ ಕುಳಗಳು ಲಕ್ಷಕೋಟಿ ಸಾಲ ಮಾಡಿ, ಅಸಲುಬಡ್ಡಿ ಕಟ್ಟದೇ ಬ್ಯಾಂಕುಗಳನ್ನು ಮುಳುಗಿಸಬಹುದು; ಬಳಿಕ ದಿವಾಳಿ ಎಂದು ಘೋಷಿಸಿಕೊಂಡು ಫಾರಿನ್ನಿಗೆ ಓಡಬಹುದು. ಮತ್ಯಾವುದೋ ಬಿಂಬಾನಿ ಕಂಪನಿಯ 17 ಲಕ್ಷಕೋಟಿ ರೂಪಾಯಿ ಸಾಲವನ್ನು ಕಟ್ಟಲಾಗದ ಸಾಲವೆಂದು ಪರಿಗಣಿಸಿ ಸರ್ಕಾರವೇ ಮುಚ್ಚುಮರೆಯಲ್ಲಿ ಮನ್ನಾ ಮಾಡಬಹುದು. ಭವನ-ಮೂರ್ತಿ-ಸ್ಮಾರಕ-ಮಂದಿರ ನಿರ್ಮಾಣಗಳಿಗೆ ಸಾವಿರ ಕೋಟಿ ಖರ್ಚು ಮಾಡಬಹುದು. ದೇವರು, ಧರ್ಮ, ದನದ ಹೆಸರ ರಾಜಕೀಯಕ್ಕೆ ರಕ್ತ ಹರಿಸಬಹುದು. ಇದರ ಬಗೆಗೆ ದೇಶಭಕ್ತರಾರೂ ಸೊಲ್ಲೆತ್ತಲಾರರು. ಆದರೆ ಬಡವರಿಗೆ/ನಿರುದ್ಯೋಗಿ ಪದವೀಧರರಿಗೆ ಕಾಸು ಕೊಟ್ಟರೆ, ಕಡಿಮೆ ಬೆಲೆಗೆ ಹೊಟ್ಟೆ ತುಂಬ ಅನ್ನ ಉಣ್ಣಲು ಕ್ಯಾಂಟೀನುಗಳ ತೆರೆದರೆ, ಮನೆಯೊಡತಿಗೆ ಮತ್ತೆರೆಡು ಸಾವಿರ ಕೊಟ್ಟು ಸ್ವಾಯತ್ತವಾಗಲು ಉಚಿತ ಪ್ರಯಾಣ ಒದಗಿಸಿದರೆ – ಓಹೋಹೋ, ಆರ್ಥಿಕತೆ ಕುಸಿದೇ ಹೋಯಿತೆಂದು ದೊಡ್ಡ ಬೊಬ್ಬೆಯೇಳುತ್ತದೆ. ಅದೂ ಮಹಿಳೆಯರಿಗೆ ಕೊಡುವುದೆಂದರೆ ಮುಗಿದೇ ಹೋಯಿತು. ಮೇಲೆನಿಸಿಕೊಂಡ ವರ್ಗ-ಜಾತಿಗಳ ಮಹಿಳೆಯರು ತಾವು ಸವಲತ್ತು ಬಳಸಿಕೊಂಡ ಮೇಲೂ ಬಡ ಹೆಣುಮಕ್ಕಳಿಗೆ ಕೊಡುವುದರ ಬಗೆಗೆ ಅಸಡ್ಡೆಯ ಮಾತನಾಡುತ್ತಾರೆ. ಇದೆಂಥ ಆಷಾಢಭೂತಿತನ!

ಭಾರತದಲ್ಲಿ ಮೌಲ್ಯವ್ಯವಸ್ಥೆ ಬಲು ದ್ವಂದ್ವಮಯವಾಗಿದೆ. ಉದಾತ್ತತೆ, ನ್ಯಾಯಪ್ರಜ್ಞೆಗಳನ್ನು ಸ್ವಮತಧರ್ಮದ ಮೋಹ, ಸ್ವಜಾತಿ ಪ್ರೇಮಗಳು ನುಂಗಿ ಹಾಕಿವೆ. ಹಣ, ವಸ್ತುಗಳೇ ಮುಖ್ಯವಾಗಿರುವ ಕಾಲಮಾನದಲ್ಲಿ ಬರುವ ತಲೆಮಾರಿಗಾದರೂ ಜಾತಿ, ಧರ್ಮ, ಲಿಂಗತ್ವ ಮೀರಿದ ಮನುಷ್ಯಪ್ರೇಮವನ್ನು ಅರ್ಥಮಾಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಡಾ. ಎಚ್. ಎಸ್. ಅನುಪಮಾ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!