ಪಾಂಡವಪುರ : ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ದೊರೆಯುತ್ತದೆ ಎಂಬ ನಿರೀಕ್ಷೆ ಇತ್ತು. ಅವರು ಮತ್ತೊಮ್ಮೆ ಸಂಸದನಾಗಿದ್ದರೆ ನಾನು ಶಾಸಕನಾದಷ್ಟೆ ಸಂತೋಷವಾಗುತ್ತಿತ್ತು. ನಾನು ರಾಜಕೀಯವಾಗಿ ಬೆಳೆಯಲು ಪುಟ್ಟರಾಜು ಸಾಥ್ ನೀಡಲಿ, ಪುಟ್ಟರಾಜು ಸಾಕಷ್ಟು ಬೆಳೆದಿದ್ದಾರೆ. ನಮ್ಮನ್ನೂ ಜತೆ ಜತೆಯಲ್ಲಿ ಬೆಳೆಸಲಿ. ದೊಡ್ಡ ಮೀನು ಚಿಕ್ಕಮೀನುಗಳನ್ನು ನುಂಗಿದಂತಾಗಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ದ್ರೋಹಬಗೆಯಿತು. 2018ರಲ್ಲಿ ಕಾಂಗ್ರೆಸ್ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ ತರುವಾಯ ಅವರಲ್ಲಿದ್ದ ಕೆಲ ಶಾಸಕರನ್ನು ಬಿಜೆಪಿಗೆ ಕಳುಹಿಸಿ ಸರ್ಕಾರವನ್ನು ಬೀಳಿಸಿತು. ಹೀಗೆ ಕಾಂಗ್ರೆಸ್ ಜೆಡಿಎಸ್ ಬೆನ್ನಿಗೆ ಚೂರಿ ಹಾಕುತ್ತಲೇ ಬಂದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಡಿಸೆಂಬರ್‌ನೊಳಗೆ ಬಿದ್ದಹೋಗಲಿದೆ. ಬಿಜೆಪಿ–ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ವಿತ ಎಂದು ಭವಿಷ್ಯ ನುಡಿದರು.
ಚುನಾವಣೆ ಬಳಿಕ ಮೇಕೆದಾಟು ಯೋಜನೆ ಅನುಷ್ಠಾನ : ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾವೇರಿ ಸಮಸ್ಯೆ ಬಗೆಹರಿಸುವ ಜತೆಗೆ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ನರೇಂದ್ರ ಮೋದಿ ಹಾಗೂ ಎಚ್.ಡಿ.ದೇವೇಗೌಡರು ಬಹುಮುಖ್ಯ ಪಾತ್ರವಹಿಸಲಿದ್ದಾರೆ ಎಂದು ಹೇಳಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ, ಎಚ್.ಡಿ.ಕುಮಾರಸ್ವಾಮಿ ಅವರು ಗೆಲುವು ಕೂಡ ಅಷ್ಠೆ ಶತಾಸಿದ್ದವಾಗಿದ್ದು, ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಲಿದ್ದಾರೆ. ಈ ನಿಟ್ಟಿನಲ್ಲಿ ಕಾವೇರಿ ವಿವಾದ ಬಗೆಹರಿಯಲಿದ್ದು, ಮೇಕೆದಾಟು ಯೋಜನೆ ಕೂಡ ಅನುಷ್ಟಾಗೊಳ್ಳಲಿದೆ. ಕಾವೇರಿ ನೀರಿನ ವಿಚಾರದಲ್ಲಿ ಎಚ್.ಡಿ.ದೇವೇಗೌಡರ ಹೋರಾಟ ಅವಿಸ್ಮರಣೀಯ ಎಂದರು.
ಕುಮಾರಸ್ವಾಮಿ ಅವರು ಕೇಂದ್ರದ ಸಚಿವರಾದರೆ ನಾಡಿನ ಹಿತ ಕಾಯುವ ಜೊತೆಗೆ ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ದಿಗೊಳಿಸಲಿದ್ದಾರೆ. ನಾನು ಸಂಸದನಾಗಿದ್ದಾಗ ಮಂಡ್ಯಕ್ಕೆ ಕೇಂದ್ರಿಯ ವಿ.ವಿ, ಶ್ರೀರಂಗಪಟ್ಟಣ –ಬೀದರ್ ಹೆದ್ದಾರಿ ಅಭಿವೃದ್ದಿ, ನಾಗಮಂಗಲದ ಬಳಿ ಕೇಂದ್ರದ ಆಯುರ್ವೇದ ಆಸ್ಪತ್ರೆ ನಿರ್ಮಾಣ ಮಾಡಿಸಿದೆ. ಈ ಕೆಲಸಗಳಿಗೆ ಎಚ್.ಡಿ.ದೇವೇಗೌಡರು ಬೆಂಬಲಿಸಿ ಸಹಕಾರ ನೀಡಿದರು ಎಂದು ಹೇಳಿದರು.
ಈ ಬಾರಿ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಿ ಗೆಲ್ಲಿಸಬೇಕೆಂಬುದು ನನ್ನ ಇಚ್ಚೆಯಾಗಿತ್ತು. ಈ ಸಂಬಂಧ ಪಕ್ಷದ ಹಿರಿಯರೊಂದಿಗೆ ಚರ್ಚೆ ನಡೆಸಿದ್ದೆ. ನಿಖಿಲ್ ಅವರು ಇದಕ್ಕೆ ಒಪ್ಪಲಿಲ್ಲ. ಬಳಿಕ ಡಿ.ಸಿ.ತಮ್ಮಣ್ಣನವರು ಸ್ಪರ್ಧಿಸಲಿ ಎಂಬ ಅಭಿಪ್ರಾಯ ನನ್ನದಾಗಿತ್ತು. ಆ ನಂತರದ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಡಿತು. ಅಮಿತಾ ಶಾ ಅವರು ಎಚ್.ಡಿ.ಕುಮಾರಸ್ವಾಮಿ ಅವರೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಲಿ ಎಂದು ಒತ್ತಾಯಿಸಿದರು. ಅಂತಿಮವಾಗಿ ಕುಮಾರಸ್ವಾಮಿ ಅವರು ಅಭ್ಯರ್ಥಿಯಾದರು ಎಂದು ತಿಳಿಸಿದರು.
ದ್ರೋಹವೆಸಗಿದ ಕಾಂಗ್ರೆಸ್: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಬೆಂಬಲಿಸಲಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಜೆಡಿಎಸ್‌ಗೆ ದ್ರೋಹಬಗೆಯಿತು. 2018ರ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್–ಜೆಡಿಎಸ್ ಜೊತೆಗೂಡಿ ಆಡಳಿತ ನಡೆಸಲು ನಿರ್ಧರಿಸಿದಾಗ, ಎಚ್.ಡಿ.ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿ ಎಂದು ಅಭಿಪ್ರಾಯಪಟ್ಟರು. ಆದರೆ ಕಾಂಗ್ರೆಸ್‌ನ ಕೆಲ ನಾಯಕರು ಇದಕ್ಕೆ ಒಪ್ಪಲಿಲಲ್ಲ. ಅನೀವಾರ್ಯವಾಗಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಕಾಂಗ್ರೆಸ್‌ನವರ ಚಿತಾವಣೆಯಿಂದಾಗಿ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು ಎಂದು ಹರಿಹಾಯ್ದರು.
ಸಹಾಯಹಸ್ತ : ಬಿಜೆಪಿ–ಜೆಡಿಎಸ್ ಮೈತ್ರಿ ಧರ್ಮವನ್ನು ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿಯೂ ಪಾಲಿಸಿಕೊಂಡು ಹೋಗಲಾಗುವುದು. ಮೈತ್ರಿಯಲ್ಲಿ ಯಾವುದೇ ಚೌಕಾಸಿ ಮಾಡುವುದಿಲ್ಲ. ಬಿಜೆಪಿಯವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ. ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಆರ್‌ಎಸ್‌ಎಸ್ ಕಚೇರಿ ಕಟ್ಟಡಕ್ಕೆ ನಾನು ಸಾಧ್ಯವಾದಷ್ಟು ಆರ್ಥಿಕ ನೆರವು ನೀಡಿದ್ದೇನೆ. ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅವರೊಂದಿಗೆ ಸೇರಿ ಒಟ್ಟಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವುದು ಗ್ಯಾರಂಟಿ. ನಾವಿಬ್ಬರೂ ಒಟ್ಟಾಗಿ ರಾಜಕಾರಣ ಮಾಡೋಣ. ಸಿ.ಎಸ್.ಪುಟ್ಟರಾಜು ಅವರು ನುರಿತ ರಾಜಕಾರಣಿಯಾಗಿದ್ದಾರೆ. ಚುನಾವಣೆ ಯಾವ ರೀತಿ ಎದುರಿಸಬೇಕು ಎಂಬುದು ಅವರಿಗೆ ಚನ್ನಾಗಿ ಗೊತ್ತಿದೆ. ಡಾ.ಇಂದ್ರೇಶ್ ಅವರು ಪುಟ್ಟರಾಜು ಅವರ ಹತ್ತಿರ ರಾಜಕಾರಣ ಹೇಗೆ ಮಾಡಬೇಕೆನ್ನುವುದನ್ನು ಕಲಿಯಬೇಕಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪ್ರೀತಿ ವಿಶ್ವಾಸದಿಂದ ಒಟ್ಟಾಗಿ ಕೆಲಸ ಮಾಡಿ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಶಾಸಕ ಕೆ.ಸಿ.ನಾರಾಯಣಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲ್ಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಮುಖಂಡರಾದ ಸಿ,ಅಶೋಕ, ಸೋಮಶೇಖರ್, ಕಣಿವೆ ಯೋಗೇಶ್, ಕನಗನಮರಡಿ ಬೊಮ್ಮರಾಜು, ಬಿಜೆಪಿ ಮುಖಂಡರಾದ ಸಿ.ಪಿ.ಉಮೇಶ್, ಜೆ.ಶಿವಲಿಂಗೇಗೌಡ, ಮಂಗಳ ನವೀನ್, ನೀಲನಹಳ್ಳಿ ಧನಂಜಯ, ಕೆ.ಎಲ್.ಆನಂದ ಇತರರು ಇದ್ದರು.