Thursday, September 19, 2024
spot_img

ಮಂಡ್ಯ:ಜಿಲ್ಲೆಯಲ್ಲಿ 10.075 ಮತದಾರರಿಂದ ಅಂಚೆ ಮತ ಚಲಾವಣೆ

ಜಿಲ್ಲೆಯಲ್ಲಿ 10,075 ಮತದಾರರಿಂದ ಅಂಚೆ ಮತದಾನ : ಡಾ: ಹೆಚ್.ಎನ್ ಗೋಪಾಲಕೃಷ್ಣ

ಮಂಡ್ಯ: ಮೇ.9 ಅಂಚೆ ಮತದಾನಕ್ಕೆ 12674 ಜನರು ಒಪ್ಪಿಗೆ ನೀಡಿದ್ದ ಪೈಕಿ 10,075 ಜನರು ಅಂಚೆ ಮತದಾನ ಮಾಡಿರುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 2502 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 759 ವಿಕಲ ಚೇತನರು, 188 ಅಗತ್ಯ ಸೇವಾ ವಲಯ, 6626 ಪೋಲಿಂಗ್ ಅಧಿಕಾರಿಗಳು ಸೇರಿದಂತೆ ಒಟ್ಟು 10,075 ಅಂಚೆ ಮತದಾನವಾಗಿದೆ ಎಂದರು.

ಈವರೆಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿರದ ಪೊಲೀಂಗ್ ಅಧಿಕಾರಿಗಳಿಗೆ ಮೇ 9 ರಂದು ತಾಲ್ಲೂಕು ಮಸ್ಟರಿಂಗ್ ಕೇಂದ್ರಗಳಲ್ಲಿ ಪಿಬಿಎಫ್‍ಸಿ ಗಳನ್ನು ಅಂದು ಬೆಳಿಗ್ಗೆ 9 ರಿಂದ ಅಪರಾಹ್ನ 1 ಗಂಟೆಯವರೆಗೆ ತೆರೆಯಲಾಗುತ್ತದೆ ಎಂದರು.

ಮೇ 9 ರಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಕಾರ್ಯಗಳನ್ನು ನಡೆಸಲು 186-ಮಳವಳ್ಳಿ ಶಾಂತಿ ಪದವಿ ಪೂರ್ವ ಕಾಲೇಜು, 187-ಮದ್ದೂರು ಹೆಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜು, 188-ಮೇಲುಕೋಟೆ ಪಿ.ಎಸ್.ಎಸ್.ಕೆ. ಪ್ರೌಢಶಾಲೆ, ರೈಲ್ವೆ ನಿಲ್ದಾಣ ಹತ್ತಿರ, ಪಾಂಡವಪುರ, 189-ಮಂಡ್ಯ ಮಂಡ್ಯ ವಿಶ್ವವಿದ್ಯಾಲಯ, 190-ಶ್ರೀಂಗರಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು, 191-ನಾಗಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು, 192-ಕೆ.ಆರ್.ಪೇಟೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಮೇ 10 ರಂದು ಮತದಾನ ಮುಕ್ತಾಯಗೊಂಡ ನಂತರ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರಿಸೈಡಿಂಗ್ ಅಧಿಕಾರಿಗಳಿಂದ ಸಂಗ್ರಹಿಸಿ ನಂತರ ಜಿ.ಪಿ.ಎಸ್. ಅಳವಡಿಸಿರುವ ವಾಹನ ಹಾಗೂ ಸೂಕ್ತ ಪೋಲೀಸ್ ಭದ್ರತೆಯೊಂದಿಗೆ ಜಿಲ್ಲಾ ಭದ್ರತಾ ಕೊಠಡಿಯಾದ ಮಂಡ್ಯ ವಿಶ್ವವಿದ್ಯಾಲಯಕ್ಕೆ ಸಾಗಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಭದ್ರತಾ ಕೊಠಡಿ ಕೆಂದ್ರದಲ್ಲಿ ವಿಧಾನಸಭಾ ಕ್ಷೇತ್ರವಾರು ತಲಾ 2 ಭದ್ರತಾ ಕೊಠಡಿಯನ್ನು ಗುರುತಿಸಲಾಗಿದ್ದು ಮತದಾನದಲ್ಲಿ ಬಳಸಿದ ಇ.ವಿ.ಎಂ. ಯಂತ್ರಗಳನ್ನು ಸಂಗ್ರಹಿಸಿ ಮೊಹರು ಮಾಡಿ ಆರಕ್ಷಕರ ಸುಪರ್ದಿಗೆ ನೀಡಲಾಗುವುದು ಎಂದರು.

ಮತದಾನ ಮುಕ್ತಾಯಕ್ಕೆ ಮುಂಚಿನ 48ಗಂಟೆ ಅವಧಿಯಲ್ಲಿ ಅಂದರೆ ಮೇ 8 ರಂದು ಸಂಜೆ: 6.00 ಗಂಟೆಗೆ ಅಭ್ಯರ್ಥಿಗಳು ಯಾವುದೇ ರೀತಿಯ ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಬೇಕಾಗಿರುತ್ತದೆ. ನಂತರ ರ್ಯಾಲಿ, ರೋಡ್ ಶೋ ಅಥವಾ ಬಹಿರಂಗ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶವಿರುವುದಿಲ್ಲ. ಮೇ 8 ರ ಸಂಜೆ 6 ಗಂಟೆಯಿಂದ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದಿರುವ 1 ವಾಹನ ಹಾಗೂ ವಾಹನ ಚಾಲಕನನ್ನು ಸೇರಿದಂತೆ 5 ಮಂದಿ ಮಾತ್ರ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಬಹುದಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಜಿಲ್ಲೆಯಾದ್ಯಂತ ಮೇ 8ರ ಸಂಜೆ:5.00 ಗಂಟೆಯಿಂದ ಮೇ 11 ಬೆಳಿಗ್ಗೆ 10.00 ಹಾಗೂ ಮೇ 13 ಮತ ಎಣಿಕೆ ದಿನದಂದು ಬೆಳಿಗ್ಗೆ 6.00ಗಂಟೆಯಿಂದ ಮೇ 14 ಬೆಳಿಗ್ಗೆ 10.00ಗಂಟೆಯವರೆಗೆ ಮಂಡ್ಯ ಜಿಲ್ಲೆಯಾದ್ಯಂತ ಒಣ ದಿನವನ್ನು ಘೋಷಿಸುವುದರ ಜೊತೆಗೆ ಮೇ 10 ಜಿಲ್ಲೆಯಾದ್ಯಂತ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಿದೆ ಎಂದರು.

ಮೇ 8ರ ಸಂಜೆ:6.00 ಗಂಟೆಯಿಂದ ಮೇ 11 ಬೆಳಿಗ್ಗೆ:6.00 ಗಂಟೆಯವೆರೆಗೆ ಸಿ.ಆರ್.ಪಿ.ಸಿ. 1973ರ ಕಲಂ 144ರ ರೀತ್ಯಾ ಷರತ್ತುಗಳನ್ನು ವಿಧಿಸಿ ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದೆ. ಈ ಆದೇಶವು ಅಭ್ಯರ್ಥಿಯು ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸುವುದಕ್ಕೆ ಮಾತ್ರ ಅನ್ವಯಿಸುವುದಿಲ್ಲ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯ ಎಲ್ಲಾ ಸೆಕ್ಟರ್ ಮ್ಯಾಜಿಸ್ಟ್ರೇಟ್ ಅಧಿಕಾರಿಗಳು, SST & FST ಅಧಿಕಾರಿಗಳಿಗೆ ವಿಶೇಷ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿರುತ್ತದೆ. ಚೆಕ್ ಪೋಸ್ಟ್ ಹಾಗೂ ವಿವಿಧ ತಂಡಗಳು ಮತ್ತು ಮತಗಟ್ಟೆಗಳಿಗೆ CAPF ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ.

ಮತ ಎಣಿಕೆ ಕೇಂದ್ರವಾದ ಮಂಡ್ಯ ವಿಶ್ವವಿದ್ಯಾಲಯ, ಮಂಡ್ಯ ಇಲ್ಲಿ ವಿಧಾನಸಭಾ ಕ್ಷೇತ್ರವಾರು ತಲಾ 2 ಕೊಠಡಿಗಳನ್ನು ಮತ ಎಣಿಕೆಗಾಗಿ ಗುರುತಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೊಠಡಿಗೆ 7 ರಂತೆ 14 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ. ಈ ಕಾರ್ಯಕ್ಕಾಗಿ 120 ಅಧಿಕಾರಿ/ಸಿಬ್ಬಂದಿಗಳನ್ನು (ಮೈಕ್ರೋ ಅಬ್ಸರ್‍ವರ್ಸ್‍ಗಳೊಂದಿಗೆ) ಎಣಿಕೆ ಸಿಬ್ಬಂದಿಗಳನ್ನು ನೇಮಕ ಮಾಡಿ ಮೇ 6 ರಂದು ತರಬೇತಿಯನ್ನು ಸಹ ನೀಡಲಾಗಿರುತ್ತದೆ ಎಂದರು.

ಮತ ಎಣಿಕೆ ಕೇಂದ್ರದ ನೆಲ ಮಹಡಿಯ ಕೊಠಡಿ ಸಂಖ್ಯೆ:6 ರಲ್ಲಿ 188-ಮೇಲುಕೋಟೆ, 189-ಮಂಡ್ಯ, 191-ನಾಗಮಂಗಲ ಮತ್ತು 192-ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳ ಅಂಚೆ ಮತ ಎಣಿಕೆ ಕಾರ್ಯ ನೆಡೆಯಲಿದೆ, ಎರಡನೇ ಮಹಡಿಯ ಕೊಠಡಿ ಸಂಖ್ಯೆ: 30 ರಲ್ಲಿ 186-ಮಳವಳ್ಳಿ, 187-ಮದ್ದೂರು ಮತ್ತು 190-ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳ ಅಂಚೆ ಮತ ಎಣಿಕೆ ಕಾರ್ಯ ನೆಡೆಯಲಿದೆ.

ಮತದಾನಕ್ಕೆ ಪರ್ಯಾಯ ಗುರುತಿನ ಚೀಟಿ

ಮೇ 10 ರಂದು ಬೆಳಿಗ್ಗೆ 7.00 ಗಂಟೆಯಿಂದ ಸಂಜೆ:06.00 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನದ ವೇಳೆ ಮತದಾರರನ್ನು ಗುರುತಿಸಲು ಈ ಕೆಳಗಿನ ಯಾವುದಾದರು ಒಂದು ಗುರುತಿನ ಚೀಟಿಯನ್ನು ಬಳಸಬಹುದಾಗಿರುತ್ತದೆ.

ಭಾವಚಿತ್ರ ಇರುವ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಎಂ.ಎನ್.ಆರ್.ಇ.ಜಿ.ಎ ಜಾಬ್ ಕಾರ್ಡ್, ಬ್ಯಾಂಕ್/ಅಂಚೆ ಕಛೇರಿ ನೀಡಿರುವ ಭಾವಚಿತ್ರ ಇರುವ ಪಾಸ್ ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ್, ಚಾಲನಾ ಪರವಾನಗಿ(ಡ್ರೈವಿಂಗ್ ಲೈಸೆನ್ಸ್), ಪ್ಯಾನ್ ಕಾರ್ಡ್, ಎನ್.ಪಿ.ಆರ್. ನ ಅಡಿಯಲ್ಲಿ ಆರ್.ಜಿ.ಐ. ನೀಡಿರುವ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‍ಪೋರ್ಟ್, ಭಾವಚಿತ್ರ ಇರುವ ಪಿಂಚಣಿ ದಾಖಲೆ., ಸೇವಾ ಗುರುತಿನ ಚೀಟಿ(ಕೇಂದ್ರ/ರಾಜ್ಯ ಸರ್ಕಾರ/ PSU ಗಳ ಗುರುತಿನ ಚೀಟಿ), ಎಂ.ಪಿ/ಎಂ.ಎಲ್.ಎ/ಎಂ.ಎಲ್.ಸಿ ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ.

ಚುನಾವಣೆ ಘೋಷಣೆಯಾದ ನಂತರ ಮಾರ್ಚ್ 29 ರಿಂದ ಮೇ5 ರವರೆಗೆ ರೂ. 2,35,21,991 ಮೌಲ್ಯದ 108531.38 ಲೀಟರ್ ಮದ್ಯ, ರೂ 3,48,48,253 ನಗದು, ರೂ. 55,550 ಮೌಲ್ಯದ 1.805 ಕೆ.ಜಿ ಡ್ರಗ್ಸ್, ರೂ 24,79,270 ಮೌಲ್ಯದ 22,557 ಇನ್ನಿತರೆ ಪದಾರ್ಥಗಳು ಸೇರಿದಂತೆ ಒಟ್ಟು ನಗದು ಹಾಗೂ ವಸ್ತುಗಳ ಮೌಲ್ಯವು ರೂ.6,10,05,064/- ಆಗಿರುತ್ತದೆ ಎಂದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದಾಖಲಾದ ಎಫ್‍ಐರ್ ವಿವರ, ಆರಕ್ಷಕ ಇಲಾಖೆ 19 ಪ್ರಕರಣಗಳು, ಅಬಕಾರಿ ಇಲಾಖೆ 1322 ಪ್ರಕರಣಗಳು (ಈ ಪೈಕಿ 128 ವಾಹನಗಳನ್ನು ಜಫ್ತಿ ಮಾಡಲಾಗಿರುತ್ತದೆ), ಆರ್.ಟಿ.ಓ 506 ಪ್ರಕರಣಗಳು (ದಂಡ ವಿಧಿಸಿರುವ ಮೊತ್ತ ರೂ.16,50,696/-ಚುನಾವಣಾಧಿಕಾರಿ/ಸಂಚಾರಿದಳ/ಸ್ಥಿರ ಜಾಗೃತಿದಳದ ತಂಡ ದಿಂದ 04 ಪ್ರಕರಣಗಳು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಶೇಕ್ ತನ್ವಿರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಜ್ ಎಲ್ ನಾಗಾರಾಜು, ಅಬಕಾರಿ ಜಿಲ್ಲಾ ಆಯುಕ್ತರಾದ ಡಾ.ಮಹದೇವಿಬಾಯಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್ ಹೆಚ್ ನಿರ್ಮಲ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!