
ಮಂಡ್ಯ ಜು.೧೯.ಕೃಷ್ಣರಾಜಸಾಗರ ದಿಂದ ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ರೈತರು ಮಂಡ್ಯದಲ್ಲಿ ರಸ್ತೆ ತಡೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರೈತರು ಮಾನವ ಸರಪಳಿ ರಚಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.
ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದಿರುವ ಬೆಳೆ ನೀರಿಲ್ಲದೆ ಒಣಗುತ್ತಿವೆ, ಮುಂಗಾರು ಮಳೆ ಕೊರತೆಯಿಂದ ಕಬ್ಬು, ಭತ್ತ, ರಾಗಿ ತರಕಾರಿ ಸೇರಿದಂತೆ ಇತರೆ ಬೆಳೆಗಳಿಗೆ ನೀರಿಲ್ಲದಂತಾಗಿದೆ, ಬೆಳೆಗಳ ರಕ್ಷಣೆಗೆ ತುರ್ತು ನೀರಿನ ಅವಶ್ಯಕತೆ ಇದೆ, ಹಾಗೊಮ್ಮೆ ನೀರು ಹರಿಸದಿದ್ದರೆ ಬೆಳೆ ಸಂಪೂರ್ಣ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆ ಆರ್ ಎಸ್ ಜಲಾಶಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿದು ಬಂದಿದೆ, ನಾಲೆಗಳಿಗೆ ತುರ್ತಾಗಿ ನೀರು ಬಿಡುಗಡೆ ಮಾಡಿದರೆ ಬೆಳೆಗಳ ರಕ್ಷಣೆ ಸಾಧ್ಯವಾಗಲಿದೆ, ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ವಾಸ್ತವ ಮನವರಿಕೆ ಮಾಡಿಕೊಂಡು ರೈತರ ಹಿತ ಕಾಯಲು ಮುಂದಾಗಬೇಕಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಲಾಶಯದಿಂದ ನಾಲೆಗಳಿಗೆ ನೀರು ಬಿಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರಿದರೆ ರೈತರು ಹೋರಾಟ ನಡೆಸಲಿದ್ದು,ಆಳುವ ಸರ್ಕಾರ ಎಚ್ಚೆತ್ತು ತಕ್ಷಣ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಬೊಮ್ಮೇಗೌಡ, ಲತಾ ಶಂಕರ್. ಜವರೇಗೌಡ. ಸುರೇಶ್ ಗೋಪಾಲಪುರ, ನಾಗರಾಜು. ಮಲ್ಲೇಶ್. ದೊಡ್ಡ ಸ್ವಾಮಿ, ಮಹದೇವ ಗಾಣದಾಳು ಕರುನಾಡ ಸೇವಕರು ಸಂಘಟನೆಯ ನಗರಾಧ್ಯಕ್ಷ ಎಂ ಎನ್ ಚಂದ್ರು ನೇತೃತ್ವ ವಹಿಸಿದ್ದರು.