
ಮಂಡ್ಯ ನಗರಸಭೆಯ ಅಧ್ಯಕ್ಷ ಎಚ್ ಎಸ್ ಮಂಜುರವರ ಅಧಿಕಾರವಧಿ ಇಂದಿಗೆ ಮುಕ್ತಾಯವಾಗಿದೆ.ಕಳೆದ 2020 ನವೆಂಬರ್ ಎರಡರಂದು ಮಂಡ್ಯ ಶಾಸಕ ಎಂ ಶ್ರೀನಿವಾಸ್ ಬೆಂಬಲದೊಂದಿಗೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಹುದ್ದೆಗೆ ಏರಿದ್ದ ಮಂಜುಗೆ 30ತಿಂಗಳ ಅವಧಿ ಇಂದಿಗೆ ಮುಕ್ತಾಯವಾಗಿದೆ.ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ನಗರಸಭೆಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಬವಾಗಲಿದೆ.
ಮೂಲತಃ ಸರಕಾರಿ ಕಾಮಗಾರಿಗಳ ಗುತ್ತಿಗೆದಾರರಾದ ಎಚ್ ಎಸ್ ಮಂಜು ತಮ್ಮ ತಂದೆ ಹಾಗೂ ಗುತ್ತಿಗೆದಾರರಾದ ಹೊಸಹಳ್ಳಿ ಸಿದ್ದರಾಮಯ್ಯನವರ ಮೂಲಕ ರಾಜಕೀಯ ಎಂಟ್ರಿ ಪಡೆದಿದ್ದರು.ಆರಂಭದಲ್ಲಿ ಕಾಂಗ್ರೇಸ್ ಶಾಸಕ ಎಂ.ಎಸ್ ಆತ್ಮಾನಂದರವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಇವರ ಕುಟುಂಬ 2004ರ ಸಾರ್ವತ್ರಿಕ ಚುನಾವಣೆ ನಂತರ ತಮ್ಮ ನಿಷ್ಟೆಯನ್ನು ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಗೆ ತೋರಿಸಿದರು.ಮುಂದುವರೆದು 2006ರಲ್ಲಿ ಕಾಂಗ್ರೇಸ್ ಜ್ಯಾದಳ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಚಲುವರಾಯಸ್ವಾಮಿಯವರೊಂದಿಗೆ ಉತ್ತಮ ಒಡನಾಟ ಹೊಂದಿ ಮಂಡ್ಯ ನಗರದ ಪ್ರಮುಖ ಸಿವಿಲ್ ಕಾಮಗಾರಿಗಳ ಪ್ರಮುಖ ಗುತ್ತಿಗೆದಾರರಾಗಿ ಗುರುತಿಸಿಕೊಂಡರು.
ಕಳೆದ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ನಗರಸಭಾ ಚುನಾವಣೆಯಲ್ಲಿ ಗೆಲುವು ಪಡೆದ ಮಂಜು ನಗರಸಭೆ ಅಧ್ಯಕ್ಷರಾಗಿ ಸಹ ಆಯ್ಕೆಯಾದರು.ಆಗ ಇನ್ನುಳಿದ ಅಧ್ಯಕ್ಷ ಅಕಾಂಕ್ಷಿಗಳಾಗಿದ್ದ ಕಲ್ಲಹಳ್ಳಿಯ ರವಿ ಮತ್ತು ಒಂದನೆ ವಾರ್ಡ್‌ನ ನಾಗೇಶ್ ಸೇರಿದಂತೆ ಮೂವರಿಗೂ ತಲಾ ಹತ್ತು ತಿಂಗಳ ಅಧ್ಯಕ್ಷ ಹುದ್ದೆ ಹಂಚಿಕೆಗೆ ಸೂತ್ರವೊಂದನ್ನು ರೂಪಿಸಲಾಗಿತ್ತು.ನಂತರದಲ್ಲಿ ಈ ಇಬ್ಬರು ಅಧ್ಯಕ್ಷ ಅಕಾಂಕ್ಷಿಗಳನ್ನು ಸಮಾಧಾನಿಸಿ 30ತಿಂಗಳ ಅವಧಿಯನ್ನು ಮಂಜುರವರೆ ನಿಭಾಯಿಸಿದ್ದಾರೆ.ಮಂಡ್ಯ ನಗರದಲ್ಲಿ ಬೆಟ್ಟದಷ್ಟು ಸವಾಲಿದ್ದರು ತರಕಾರಿ ಮಾರುಕಟ್ಟೆ ನಿರ್ಮಾಣ ಹೊರತುಪಡಿಸಿ ಗಮನಾರ್ಹ ಸಾಧನೆ ತೋರುವಲ್ಲಿ ಮಂಜು ಪ್ರಯತ್ನ ಯಶಸ್ವಿಯಾಗಿಲ್ಲ.ಜೆಡಿಎಸ್ ನಿಂದ ಬಂಡೆದ್ದು ಬಿಜೆಪಿ ಬೆಂಬಲಿಸಿ ಕಡೆಗೆ ಸಚಿವರು ಆದ ಕೃಷ್ಟರಾಜಪೇಟೆಯ ನಾರಯಣಗೌಡರೊಂದಿಗೆ ಉತ್ತಮ ಬಾಂಧವ್ಯ ಕುದುರಿಸಿಕೊಂಡಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಪಾಂಡವಪುರ ಶಾಸಕ ಪುಟ್ಟರಾಜು ಬೆಂಬಲಿಗ ಮನ್ ಮೂಲ್ ರಾಮಚಂದ್ರುಗೆ ಮಂಡ್ಯ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಆರಂಭವಾದ ಬಂಡಾಯದ ಕಹಳೆಗೆ ಹಿಮ್ಮೇಳ ನುಡಿಸಿದ್ದರು.ಸ್ವತಃ ಪಕ್ಷದ ವರಿಷ್ಟ ಕುಮಾರಸ್ವಾಮಿ ವಿರುದ್ದ ಗುಡುಗಿದ್ದರು.ಜೆಡಿಎಸ್ ರಾಷ್ಟೀಯ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಹಾಗೂ ಮಂಡ್ಯ ವಿಧಾನಸಭಾ ಜ್ಯಾದಳ ಅಭ್ಯರ್ಥಿ ರಾಮಚಂದ್ರು ಒಂದೇ ದಿನದಲ್ಲಿ ನಡೆಸಿದ ಕಾರ್ಯಚರಣೆಯಲ್ಲಿ ಇಪ್ಪತ್ತು ನಾಲ್ಕು ಗಂಟೆಯೊಳಗೆ ಮರಳಿ ಜ್ಯಾದಳ ಅಧಿಕೃತ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು.ಸದ್ಯ ಎಚ್ ಎಸ್ ಮಂಜುರವರ ಅಧ್ಯಕ್ಷವಧಿ ಮುಗಿದಿದ್ದು ಮುಂದಿನ ಅಧ್ಯಕ್ಷರ ಆಯ್ಕೆವರೆಗೆ ಜಿಲ್ಲಾಧಿಕಾರಿಗಳು ನಿಯೋಜಿಸುವ ಅಧಿಕಾರಿಗಳು ಮಂಡ್ಯ ನಗರಸಭೆಯ ಆಡಳಿತಾಧಿಕಾರಿಯಾಗಿರುತ್ತಾರೆ.
ಮರಳಿ ಜೆಡಿಎಸ್ ವರಿಷ್ಟರು ಎಚ್ ಎಸ್ ಮಂಜುಗೆ ನಗರಸಭೆಯ ಅಧ್ಯಕ್ಷ ಹುದ್ದೆಯ ಪಟ್ಟ ಕಟ್ಟುವರೆ ಎಂಬುದು ಮುಂದಿನ ಸರಕಾರ ನಿರ್ಧರಿಸಲಿರುವ ಮೀಸಲಾತಿಯ ಮೇಲೆ ತೀರ್ಮಾನವಾಗಲಿದೆ