ಮಂಡ್ಯ: ಜ್ಯಾದಳ ಬಂಡಾಯಕ್ಕೆ ನಗರಸಭಾ ಸದಸ್ಯರು ಯೂಟರ್ನ್
ಮಂಡ್ಯ ವಿಧಾನಸಭಾ ಕ್ಷೇತ್ರದ ಹೊರಗಿನವರಿಗೆ ಜ್ಯಾದಳ ಭಿ ಫಾರಂ ಕೊಟ್ಟಿದ್ದನ್ನು ವಿರೋಧಿಸಿ ಮಂಡ್ಯ ಹಾಲೀ ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಶುರುವಾದ ಬಂಡಾಯಕ್ಕೆ ಆರಂಭದಲ್ಲೆ ಮಂಡ್ಯ ನಗರಸಭೆಯ ಜ್ಯಾದಳ ಸದಸ್ಯರಿಂದ ವಿಫ್ನ ಎದುರಾಗಿದೆ.
ಮಂಡ್ಯ ಹಾಲೀ ಜ್ಯಾದಳ ಶಾಸಕ ಎಂ.ಶ್ರೀನಿವಾಸ್ ತಮಗೆ ಟಿಕೇಟ್ ಘೋಷಿಸಿ ಕಡೇ ಘಳಿಗೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಬಿ.ರಾಮಚಂದ್ರುಗೆ ಟಿಕೇಟ್ ಘೋಷಣೆಯಾದುದನ್ನು ವಿರೋಧಿಸಿ ಮಂಡ್ಯದಲ್ಲಿ ಜ್ಯಾದಳ ಅಕಾಂಕ್ಷಿತರ ಸ್ವಾಭಿಮಾನಿ ಬಣವೊಂದು ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಶುರುವಾಗಿತ್ತು.
ಈ ಬಣದಲ್ಲಿ ಹಾಲೀ ಶಾಸಕ ಎಂ ಶ್ರೀನಿವಾಸ್ ಅಳಿಯ ಎಚ್ ಎನ್ ಯೋಗೇಶ್ ಮುದ್ದನಘಟ್ಟ ಮಹಲಿಂಗ ಹಾಗೂ ಮಾಜಿ ಜಿಪಂ ಸದಸ್ಯ ಕೆ.ಎಸ್ ವಿಜಯಾನಂದಾ ಇದ್ದರು.ಸ್ವಾಭಿಮಾನಿ ಬಣದ ಈ ಮೂವರು ಒಟ್ಟಾಗಿಯೆ ನಾಮಪತ್ರ ಸಲ್ಲಿಸಿದ್ದರು.ಈ ಸಂಧರ್ಭದಲ್ಲಿ ಮಂಡ್ಯ ನಗರಸಭೆಯ ಹಲವು ಸದಸ್ಯರು ಸ್ವಾಭಿಮಾನಿ ಬಣದೊಂದಿಗೆ ಗುರುತಿಸಿಕೊಂಡಿದ್ದರು.ಅಂತಿಮವಾಗಿ ನಿನ್ನೆ ದಿನ ಸ್ವಾಭಿಮಾನಿ ಬಣದ ಪರವಾಗಿ ವಿಜಯಾನಂದರನ್ನು ಕಣದಲ್ಲಿ ಉಳಿಸಲು ತೀರ್ಮಾನಿಸಿ ಉಳಿದವರು ನಾಮಪತ್ರ ವಾಪಸ್ ಪಡೆದಿದ್ದರು.ಇನ್ನೇನು ಮಂಡ್ಯದಲ್ಲಿ ಕಳೆದ ಲೋಕಸಭಾ ಚುನಾವಣೆ ಮಾದರಿಯಲ್ಲಿ ಮತ್ತೊಂದು ಸುತ್ತಿನ ಸ್ವಾಭಿಮಾನಿ ಹೋರಾಟ ಶುರುವಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ನಿನ್ನೆಯಿಂದ ನಡೆದ ಬೆಳವಣಿಗೆಗಳು ಬಂಡಾಯಕ್ಕೆ ಶಕ್ತಿ ತುಂಬುವಂತೆ ಕಾಣುತ್ತಿಲ್ಲ.ಜ್ಯಾದಳ ರಾಷ್ಟೀಯ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ನೇತೃತ್ವದಲ್ಲಿ ರಂಗಕಿಳಿದ ಜ್ಯಾದಳ ಅಭ್ಯರ್ಥಿ ರಾಮಚಂದ್ರು ತಂಡ ಜೆಡಿಎಸ್ ನ ಒಂದಿಬ್ಬರು ನಗರಸಭಾ ಸದಸ್ಯರನ್ನು ಹೊರತುಪಡಿಸಿ ಬಹುತೇಕರನ್ನು ಸಮಾಧಾನಿಸಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದೆ.ಈಗ ಯೂ ಟರ್ನ್ ಹೊಡೆದಿರುವ ಜ್ಯಾದಳ ನಗರಸಭಾ ಸದಸ್ಯರು ಅಧಿಕೃತ ಅಭ್ಯರ್ಥಿ ರಾಮಚಂದ್ರುಗೆ ಜೈ ಎಂದಿದ್ದಾರೆ.
ಈ ನಡುವೆ ಮಂಡ್ಯದ ರಾಜಕೀಯ ಪಡಶಾಲೆಯಲ್ಲಿ ಗಾಳಿ ಸುದ್ದಿಯೊಂದು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡತೊಡಗಿದೆ.ರಾತ್ರೋರಾತ್ರಿ ನಗರಸಭಾ ಸದಸ್ಯರು ರಾಮಚಂದ್ರು ಪರ ವಾಲಲು ಕಾಂಚಾಣದ ಕರಾಮತ್ತೆ ಕಾರಣವೆಂದು ಸುದ್ದಿ ಹರಿದಾಡತೊಡಗಿದೆ.ಹಾಲೀ ಜ್ಯಾದಳದ ನಗರಸಭಾ ಸದಸ್ಯರಿಗೆ ತಲಾ ₹3ಲಕ್ಷ ಪರಾಜಿತ ನಗರಸಭಾ ಸದಸ್ಯರಿಗೆ ತಲಾ ₹1ಲಕ್ಷ ಸಂದಾಯವಾಗಿದ್ದು ಒಟ್ಟಾರೆ ರಾಮಚಂದ್ರು ಕಡೆಯಿಂದ ಪ್ರತಿಯೊಬ್ಬರಿಗೂ ತಲಾ ಐದು ಲಕ್ಷ ನೀಡುವ ಮಾತುಕತೆ ನಡೆದಿದೆಯೆಂದು ನಂತರವಷ್ಟೆ ನಗರಸಭಾ ಸದಸ್ಯರು ಹುಕಂ ಬದಲಾಯಿಸಿದರೆಂದು ಗುಸುಗುಸು ಹರಡಿದೆ.ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ ಆದರೆ ಹಣದ ಚಲಾವಣೆ ನಡೆದಿರುವುದು ನಿಜವೆಂದು ಹೆಸರು ಹೇಳಲು ಇಚ್ಚಿಸದ ಜ್ಯಾದಳ ಮುಖಂಡರೊಬ್ಬರು ಖಾತ್ರಿಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜ್ಯಾದಳ ನಗರಸಭಾ ಸದಸ್ಯರೊಬ್ಬರು ಪಕ್ಷಕ್ಕೆ ಬದ್ದವಾಗಿದ್ದೆವೆ ಅಷ್ಟೇ ಎಂದಿದ್ದಾರೆ. ಈಗ ಸ್ವಾಭಿಮಾನಿ ಅಭ್ಯರ್ಥಿಯಾಗಿ ಕಣಕಿಳಿದ ವಿಜಯಾನಂದಾ ಎಷ್ಟರ ಮಟ್ಟಿಗೆ ಯಶಸ್ವಿಯಾಗುವರೋ ಕಾದು ನೋಡಬೇಕಿದೆ