ಮಂಡ್ಯ ಲೋಕಸಭಾ ಚುನಾವಣೆಗೆ ಎಲ್ಲರಿಗಿಂತ ಮುಂಚಿತವಾಗಿಯೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ತನ್ನ ಸಿದ್ದತೆ ಆರಂಭಿಸಿದೆ.ಕಳೆದ ಬಾರಿ ಸ್ವಾಭಿಮಾನದ ಅಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕೊಚ್ಚಿ ಹೋಗಿದ್ದರು.ಸದ್ಯಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವುದೆ ಅಲೆಯಿಲ್ಲವಾದರೂ ರಾಜಕೀಯವಾಗಿ ಸಾಕಷ್ಟು ಬದಲಾವಣೆಗಳಾಗಿದೆ.ಕಳೆದ ಲೋಕಸಭಾ ಚುನಾವಣೆ ಕಾಲಕ್ಕೆ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲು ಜ್ಯಾದಳ ಶಾಸಕರೆ ಇದ್ದರು.ಸ್ವತಃ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ವಿರಾಜಮಾನವಾಗಿದ್ದರು.ಆದರೆ ಈಗ ಬಹುತೇಕ ಪರಿಸ್ಥಿತಿ ಉಲ್ಟಾ ಆಗಿದೆ.ಎಂಟಕ್ಕೆ ಏಳರಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. (ಒಬ್ಬರು ಕಾಂಗ್ರೆಸ್ ಬೆಂಬಲಿತ ಶಾಸಕರು) ಜತೆಯಲ್ಲಿ ಕಾಂಗ್ರೆಸ್ ನ ಜನಪ್ರಿಯ ಕಾರ್ಯಕ್ರಮಗಳ ಅಲೆಯಲ್ಲಿ ಅರಾಮಾಗಿ ಕಾಂಗ್ರೆಸ್ ಅಭ್ಯರ್ಥಿ ಪಾರ್ಲಿಮೆಂಟ್ ತಲುಪಿಬಿಡಬಹದು ಎಂಬ ಸುಲಭವಾದ ಲೆಕ್ಕಚಾರದಲ್ಲಿದ್ದರು ಕಾಂಗ್ರೇಸಿಗರು.ಅದೇ ಕಾರಣಕ್ಕೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಮ್ಮ ಅಣ್ಣನ ಮಗನನ್ನು ಕಣಕಿಳಿಸುವ ಪ್ರಯೋಗವೊಂದಕ್ಕೆ ಸಿದ್ದವಾಗಿದ್ದರು
.ಅದು ಅವರಿಗೆ ಅನಿವಾರ್ಯವು ಆಗಿತ್ತೇನೆ.ಬೆನ್ನಲ್ಲೇ ಭವಿಷ್ಯದ ನಾಯಕ ಅದು ಇದು ಅಂತೆಲ್ಲ ಮಂಡ್ಯದ ಹೈವೇಯುದ್ದಕ್ಕು ಫ್ಲೆಕ್ಸ್ ಗಳನ್ನು ಹಾಕಿದ್ದು ಆಗಿತ್ತು.ಕಾಂಗ್ರೆಸ್ ನಲ್ಲು ಡಾ.ಎಚ್ ಎನ್ ರವೀಂದ್ರ ಹೆಸರು ಸಹ ಅಭ್ಯರ್ಥಿಯ ಲಿಸ್ಟಿನಲ್ಲಿ ಚಲಾವಣೆಗೆ ಬಂದಿದೆ.ಮೇಲುಕೋಟೆ ಮಂಡ್ಯ ಕೆ ಆರ್ ನಗರ ಶಾಸಕರು ಇವರ ಬೆನ್ನಿಗೆ ನಿಂತಿದ್ದಾರೆ.
ಒಂದು ಹಂತಕ್ಕೆ ಜ್ಯಾದಳ ಮಾಜಿ ಶಾಸಕ ಸಿಎಸ್ ಪುಟ್ಟರಾಜುರನ್ನು ಕಾಂಗ್ರೆಸ್ ಗೆ ಎಳೆತಂದು ಲೋಕಸಭಾ ಕ್ಯಾಂಡೀಟೇಟಾಗಿಸುವ ಡಿಕೆಶಿ ಯತ್ನದ ಸುಳಿವು ಸಿಗುತ್ತಿದ್ದಂತೆ ಕುಮಾರಸ್ವಾಮಿ ಆಲರ್ಟ್ ಆಗಿಹೋದರು.ಜ್ಯಾದಳದ ಲೋಕಸಭಾ ಅಭ್ಯರ್ಥಿಯಾಗಿ ಪುಟ್ಟರಾಜೂರನ್ನೆ ಕಣಕಿಳಿಸುವ ಮಾತುಗಳನ್ನು ತೇಲಿಬಿಟ್ಟರು.ಅಲ್ಲಿಗೆ ಪುಟ್ಟರಾಜೂರನ್ನು ಕಾಂಗ್ರೇಸ್ಸಿಗೆ ದಾಟಿಸುವ ಯತ್ನಗಳು ಹಿನ್ನೆಲೆಗೆ ಸರಿದವು.
ನಂತರದಲ್ಲಿ ಕಾಂಗ್ರೆಸ್ ನಿಂದ ಎಸ್ ಎಂ ಕೃಷ್ಣರ ಮಗಳು ಶಾಂಭವಿಯವರನ್ನು ಕರೆತರುವ ಯತ್ನವು ನಡೆದಿದೆ.ಸಾಹುಕಾರ್ ಚನ್ನಯ್ಯರ ಮೊಮ್ಮಗ ವಿನಯ್ ಕಾರ್ತಿಕ್ ರನ್ನು ಸ್ಪರ್ಧೆಗೊಡ್ಡುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.ಡಾಕ್ಟರ್ ರವೀಂದ್ರ ಹೊರತುಪಡಿಸಿದರೆ ಎಲ್ಲವು ಕ್ಷೇತ್ರಕ್ಕೆ ಅಪರಿಚಿತ ಮುಖಗಳೇ ಆಗಿವೆ.
ಜ್ಯಾದಳ ಬಿಜೆಪಿ ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಖಚಿತವಾಗುತ್ತಿದ್ದಂತೆ ಮಂಡ್ಯದ ಕಾಂಗ್ರೆಸ್ ಧುರೀಣರು ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ಗೆ ಹೊರಿಸಿ ಯುದ್ದಕ್ಕೆ ಮೊದಲೆ ಶಸ್ತ್ರ ತ್ಯಾಗ ಮಾಡಿದ್ದಾರೆ. ಮಳವಳ್ಳಿಯ ನರೇಂದ್ರಸ್ವಾಮಿಯವರಿಗೆ ಯಾವ ರಿಸ್ಕ್ ಬೇಡ ನಟಿ ರಮ್ಯರನ್ನು ಕಣಕಿಳಿಸಿ ಆಕೆಯ ಗ್ಲಾಮರ್ ಇತ್ಯಾದಿ ಲೆಕ್ಕಚಾರದಲ್ಲಿ ಚುನಾವಣೆ ಗೆಲ್ಲಬೇಕೆಂಬ ಉಮೇದು ಇದೆ.ಆದರೆ ರಮ್ಯ ಅಭ್ಯರ್ಥಿಯಾದರೆ ಮಂಡ್ಯ ರಾಜಕಾರಣ ತಮ್ಮ ಅಂಕೆಗೆ ಸಿಗದು ಎಂಬ ಅತಂಕ ಇಲ್ಲಿನ ಕಾಂಗ್ರೆಸ್ ಲೀಡರುಗಳದ್ದು.ಕುಮಾರಸ್ವಾಮಿಯ ಕುಟುಂಬ ಪ್ರೇಮ ಅಂಕೆಯಿಲ್ಲದ ಮಾತುಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮಣ್ಣು ಮುಕ್ಕುವಂತೆ ಮಾಡಿದರು ಮಂಡ್ಯ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಜ್ಯಾದಳ ಭದ್ರವಾಗಿರುವುದು ಸುಳ್ಳೇನಲ್ಲ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಅಂತರವೆ ಇದನ್ನು ಖಚಿತಪಡಿಸುತ್ತದೆ.
ಜ್ಯಾದಳದಿಂದ ಪುಟ್ಟರಾಜು ಡಿಸಿ ತಮ್ಮಣ್ಣ ಸ್ಪರ್ಧೆಗೆ ಬರಬಹುದು.ಸೋತ ಸಿಂಪತಿ ಗಳಿಸಲು ನಿಖಿಲ್ ರನ್ನೆ ಮತ್ತೊಮ್ಮೆ ಪ್ರಯೋಗಕಿಳಿಸಬಹುದು.ಇಲ್ಲವೆ ಆಶ್ಚರ್ಯಕರ ಅಭ್ಯರ್ಥಿಯನ್ನೆ ಜ್ಯಾದಳ ಹೂಡಬಹುದು.ಒಟ್ಟಿನಲ್ಲಿ ಈ ಸಾರಿ ದಳವನ್ನು ಅದರ ರಾಜಕೀಯ ಹೃದಯದ ಜಿಲ್ಲೆಯಲ್ಲಿ ಸೋಲಿಸುವುದು ಸುಲಭದ ಮಾತೇನಲ್ಲ.ಕುಮಾರಸ್ವಾಮಿ ತನ್ನ ರಾಜಕೀಯ ಭದ್ರಕೋಟೆಯನ್ಮು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಕುಮಾರಸ್ವಾಮಿ ಎದುರಿಗಿದೆ.ಮೈತ್ರಿ ಮೂಲಕ ನಾಲ್ಕು ಲೋಕಸಭಾ ಕ್ಷೇತ್ರವಾದರೂ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗುವ ಮಹತ್ವಾಂಕ್ಷೆಯಲ್ಲಿರುವ ಜ್ಯಾದಳಕ್ಕೆ ಮಂಡ್ಯದ ಗೆಲುವು ತಾನಿನ್ನೂ ಒಕ್ಕಲಿಗರ ಮಧ್ಯೆ ಚಲಾವಣೆಯಲ್ಲಿದ್ದಿನಿ ಎಂಬುದಕ್ಕೆ ಸಾಕ್ಷೀಯಾಗಲಿದೆ.ಇನ್ನು ಡಿಕೆ ಶಿವಕುಮಾರ್ ಸಹ ಸಿದ್ದರಾಮಯ್ಯ ಅವಧಿ ಮುಗಿಯುತ್ತಿದ್ದಂತೆ ಎರಡನೇ ಇನ್ನಿಂಗ್ಸ್ ನಲ್ಲಿ ಸಿಎಂ ರೇಸಿನಲ್ಲಿದ್ದಾರೆ.ಅಧಿಕಾರ ಹಸ್ತಾಂತರ ಎಪಿಸೋಡ್ ಅಷ್ಟು ಸುಲಭವಾಗಿ ನೇರವೇರುವಂತೆ ಕಾಣುತ್ತಿಲ್ಲ.ಅದ್ದರಿಂದ ಈ ಚುನಾವಣೆಯಲ್ಲಿ ತಮ್ಮ ಅಸ್ತಿತ್ವ ಗಟ್ಟಿಗೊಳಿಸಲು ಅವರಿಗೂ ಈ ಗೆಲುವು ಬೇಕಿದೆ.ಅದ್ದರಿಂದ ಎರಡು ಪಕ್ಷಗಳಲ್ಲಿ ಯಾರೇ ಕಣಕಿಳಿದರೂ ಅಸಲಿ ಹುರಿಯಾಳುಗಳು ಡಿಕೆ ಮತ್ತು ಎಚ್ ಡಿಕೆಯೆ ಆಗಲಿದ್ದಾರೆ