Wednesday, September 18, 2024
spot_img

ಮತ ಎಣಿಕೆ:ಮಂಡ್ಯ ಜಿಲ್ಲೆಯ 89ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಅಗತ್ಯ ಸಿದ್ದತೆ

89 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ.
ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ:ಮಧ್ಯಾಹ್ನದ ವೇಳೆಗೆ ಫಲಿತಾಂಶ ನಿರೀಕ್ಷೆ
ಮಂಡ್ಯ: ಮೇ.೧೨.ಚುನಾವಣೆ ನಂತರ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದ್ದು, ೧೩ ರಂದು ಬೆಳಿಗ್ಗೆ ೭-೧೫ ಕ್ಕೆ ವೀಕ್ಷಕರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆದು ಮತ ಎಣಿಕೆ ಪ್ರಕ್ರಿಯೆ ಆರಂಭಿಸಲಾಗುವುದು. ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ಮಧ್ಯಾಹ್ನ ೧೨-೩೦ ರ ವೇಳೆಗೆ ಫಲಿತಾಂಶ ಹೊರಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಮೇ.೧೩ ರ ಬೆಳಿಗ್ಗೆ ೭.೧೫ ಗಂಟೆಗೆ ಭದ್ರತಾ ಕೊಠಡಿಯನ್ನು ಎಣಿಕೆ ವೀಕ್ಷಕರ ಸಮಕ್ಷಮದಲ್ಲಿ ತೆರೆದು ಸರಿಯಾಗಿ ಬೆಳಿಗ್ಗೆ ೮.೦೦ ಗಂಟೆಗೆ ಮೊದಲಿಗೆ ಅಂಚೆ ಮತ ಎಣಿಕೆಯನ್ನು ಪ್ರಾರಂಭಿಸಲಾಗುವುದು.ರಿದಕ್ಕಾಗಿ ಎರಡು ಕೊಠಡಿಗಳನ್ನು ಸನ್ನದ್ಧಗೊಳಿಸಲಾಗಿದೆ ಎಂದರು.

ಈಗಾಗಲೇ ೧೦೯೫೯ ಅಂಚೆ ಮತ ಪತ್ರಗಳು ಬಂದಿದ್ದು ಬೆಳಿಗ್ಗೆ ೬-೩೦ ರೊಳಗೆ ಬರಲಿರುವ ಅಂಚೆ ಮತಗಳನ್ನು ಸೇರಿಸಿ ಎಣಿಕೆ ಕಾರ್ಯ ನಡೆಸಲಾಗುವುದು. ಅಂಚೆ ಮತಪತ್ರಗಳ ಎಣಿಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨ ಟೇಬಲ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.

ನಂತರ ಬೆಳಿಗ್ಗೆ ೮.೧೫ ರ ನಂತರ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯ ಪ್ರಾರಂಭಿಸಲಾಗುತ್ತದೆ. ತ್ವರಿತ ಮತ ಎಣಿಕೆ ಪ್ರಕ್ರಿಯೆ ಸುಗಮಗೊಳಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨ ಕೊಠಡಿಗಳಲ್ಲಿ ಒಟ್ಟು ೧೪ ಟೇಬಲ್‌ಗಳನ್ನು ಮತ ಎಣಿಕೆಗಾಗಿ ವ್ಯವಸ್ಥೆಗೊಳಿಸಲಾಗಿದೆ. ಎಣಿಕೆ ಕಾರ್ಯಕ್ಕೆ ಪ್ರತಿ ಟೇಬಲ್‌ಗೆ ತಲಾ ಒಬ್ಬ ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಮತ್ತು ಮೈಕ್ರೋ ಅಬ್ಸರ್‌ವರ್‌ಗಳನ್ನು ಹಾಗೂ ಒಟ್ಟಾರೆ ೧೨೦ ಅಧಿಕಾರಿ/ಸಿಬ್ಬಂದಿಗಳನ್ನು ಎಣಿಕೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ರ‍್ಯಾಂಡಮೈಜೆಷನ್ ಪ್ರಕ್ರಿಯೆ ಮುಖಾಂತರ ವಿಧಾನಸಭಾ ಕ್ಷೇತ್ರ ಹಾಗೂ ಟೇಬಲ್ ಸಂಖ್ಯೆಯನ್ನು ಹಂಚಿಕೆ ಮಾಡಲಾಗುವುದು.ಒಟ್ಟು ೧೫ ರಿಂದ ೨೦ ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತ ಎಣಿಕೆ ನಂತರ ಎಣಿಕೆ ವೀಕ್ಷಕರ ಅಭ್ಯರ್ಥಿಗಳ/ ಏಜೆಂಟರುಗಳ ಸಮಕ್ಷಮದಲ್ಲಿ ಲಾಟರಿ ಚೀಟಿ ಎತ್ತುವುದರ ಮೂಲಕ ಐದು ವಿವಿ ಪ್ಯಾಟ್‌ಗಳನ್ನು ಆಯ್ಕೆ ಮಾಡಿ ವಿವಿ ಪ್ಯಾಟ್‌ನಲ್ಲಿರುವ ಸ್ಲಿಪ್‌ಗಳನ್ನು ಇವಿಎಂ ಯಂತ್ರಗಳಲ್ಲಿ ಚಲಾವಣೆಯಾಗಿರುವ ಮತಗಳೊಂದಿಗೆ ತಾಳೆ ಮಾಡಲಾಗುವುದು ಎಂದರು.

ಎಣಿಕೆ ಕೇಂದ್ರಕ್ಕೆ ಮೊಬೈಲ್ ನಿಷೇಧ:ಭಾರತ ಚುನಾವಣಾ ಆಯೋಗದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಒಟ್ಟು ೭ ಎಣಿಕೆ ವೀಕ್ಷಕರನ್ನು ನೇಮಿಸಲಾಗಿದೆ.ಎಣಿಕೆ ಕೇಂದ್ರದೊಳಗೆ ಮೊಬೈಲ್ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಪೋಟಕ ಸಾಮಗ್ರಿಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪ್ರತಿ ಟೇಬಲ್‌ಗೆ ಸಿ.ಸಿ ಕ್ಯಾಮರ ಅಳವಡಿಸಲಾಗಿದೆ ಎಂದು ತಿಳಿಸಿದರು.

ಮದ್ಯ ನಿಷೇಧ, ಒಣ ದಿನ ಘೋಷಣೆ:
ಮತ ಎಣಿಕೆ ದಿನವಾದ ಮೇ.೧೩ ರ ಶನಿವಾರ ಬೆಳಿಗ್ಗೆ ೬ ಗಂಟೆಯಿಂದ ಮೇ.೧೪ ರ ಭಾನುವಾರ ಬೆಳಗ್ಗೆ ೧೦ ಗಂಟೆಯವರೆಗೆ ಮಂಡ್ಯ ಜಿಲ್ಲೆಯಾದ್ಯಂತ ಒಣದಿನವನ್ನಾಗಿ ಘೋಷಿಸಲಾಗಿದೆ ಎಂದರು.

ಮತದಾನದಲ್ಲಿ ಜಿಲ್ಲೆ ಮೂರನೇ ಸ್ಥಾನ, ಮೇಲುಕೋಟೆ ಪ್ರಥಮ: ಜಿಲ್ಲೆಯಲ್ಲಿ ಶೇ.೮೫ ಕ್ಕಿಂತ ಹೆಚ್ಚು ಮತದಾನವಾಗಿದ್ದು ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ ೯೨ ಮತದಾನವಾಗಿದ್ದು ರಾಜ್ಯದಲ್ಲಿ ಪ್ರಥಮ ಸ್ಥಾನ ಹೊಂದಿದೆ. ಹಲವಾರು ಜಾಗೃತಿ ಕಾರ್ಯಕ್ರಮಗಳಿಂದ ಜಿಲ್ಲೆಯಲ್ಲಿ ರಾಜ್ಯ ಸರಾಸರಿಗಿಂತ ಹೆಚ್ಚು ಮತದಾನವಾಗಿದೆ. ಮೇ.೧೩ ರ ಬೆಳಿಗ್ಗೆ ೬-೩೦ ಕ್ಕೆ ಅಂಚೆ ಮತಪತ್ರಗಳ ಲೆಕ್ಕ ಸಿಕ್ಕಿದ ನಂತರ ಜಿಲ್ಲೆಯ ಅಂತಿಮ ಸರಾಸರಿ ತಿಳಿಯಲಿದೆ ಎಂದರು.

ಮತ ಕೇಂದ್ರದಲ್ಲಿ ಮತದಾನ ಮಾಡಿರುವ ವಿಡೀಯೋ ವೈರಲ್ ಆಗಿರುವುದು ಕಂಡುಬಂದಲ್ಲಿ ಆ ಮತಗಟ್ಟೆ ಕೇಂದ್ರದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ವೈರಲ್ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸೂಕ್ಷ್ಮ ಪ್ರದೇಶದ ಮೇಲೆ ನಿಗಾ-ಎಸ್.ಪಿ.ಯತೀಶ್ : ಮತ ಎಣಿಕೆ ಕೇಂದ್ರದಲ್ಲಿ ೩೦೦ ಜನ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಐದು ತುಕಡಿ ಕೆಎಸ್‌ಆರ್‌ಪಿ ಪಡೆಯನ್ನು ಬಳಸಿಕೊಳ್ಳಲಾಗುತ್ತಿದೆ. ಮತದಾನದ ಸಂದರ್ಭದಲ್ಲಿ ಬಸರಾಳಿನಲ್ಲಿ ಎರಡು , ನಾಗಮಂಗಲ ಗ್ರಾಮಾಂತರದಲ್ಲಿ ೨ ಹಾಗೂ ಕೆಸ್ತೂರಿನಲ್ಲಿ ಒಂದು ಗಲಭೆ ಪ್ರಕರಣ ಪ್ರಕರಣ ದಾಖಲಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ೨೦೦೦ ಅಧಿಕ ರೌಡಿಶೀಟರ್ ಗಳಿದ್ದು ಶಾಂತಿ ಸುವ್ಯವಸ್ಥೆಗೆ ಭಂಗ ತರಬಹುದಾದ ೨೧ ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.

ಫಲಿತಾಂಶ ಪ್ರಕಟಗೊಂಡ ನಂತರ ವಿಜಯೋತ್ಸವ ಆಚರಣೆ, ಮೆರವಣಿಗೆ ನಡೆಸುವುದು, ಪಟಾಕಿ ಸಿಡಿಸುವುದು ಮತ್ತಿತರ ಕೃತ್ಯಗಳನ್ನು ನಿಷೇಧಿಸಲಾಗಿದೆ. ರಾಜಕೀಯ ಮುಖಂಡರು,ಸಾರ್ವಜನಿಕರು ಶಾಂತಿ-ಸುವ್ಯವಸ್ಥೆ ದೃಷ್ಟಿಯಿಂದ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬೆಟ್ಟಿಂಗ್ ಧಂದೆಗೆ ತಡೆ: ಜಿಲ್ಲೆಯಲ್ಲಿ ಯಾರೂ ಕೂಡ ಇಂತಹವರೇ ಗೆಲ್ಲುತ್ತಾರೆ ಎಂಬುದಾಗಿ ಬೆಟ್ಟಿಂಗ್ ಕಟ್ಟಬಾರದು. ಹಾಗೊಂದು ವೇಳೆ ಬೆಟ್ಟಿಂಗ್ ಕಟ್ಟದರೆ ಆ ಹಣ ವಶಪಡಿಸಿಕೊಳ್ಳುವ ಜತೆಗೆ ಬೆಟ್ಟಿಂಗ್ ಕಟ್ಟಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಹೆಚ್. ನಿರ್ಮಲ, ಅಬಕಾರಿ ಆಯುಕ್ತೆ ಡಾ.ಮಹದೇವಿ ಬಾಯಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!