ನೌಕರನ ಮೇಲೆ ಉಪ ವ್ಯವಸ್ಥಾಪಕ ಹಲ್ಲೆ : ದಲಿತ ಸಂಘಟನೆಗಳ ಪ್ರತಿಭಟನೆ
ಮಳವಳ್ಳಿ :- ಜಿಲ್ಲಾ ಸಹಕಾರ ಬ್ಯಾಂಕ್ ಶಾಖೆಯಲ್ಲಿ ದಲಿತ ಸಮುದಾಯದ ಸಿಬ್ಬಂದಿ ಮೇಲೆ ಅಧಿಕಾರಿ ಹಲ್ಲೆ ಮಾಡಿದ್ದು, ತಪ್ಪಿತಸ್ಥ ಶಾಖಾ ಉಪ ವ್ಯವಸ್ಥಾಪಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು..
ಪಟ್ಟಣದ ಕೊಳ್ಳೇಗಾಲ ರಸ್ತೆಯ ಡಿಸಿಸಿ ಬ್ಯಾಂಕ್ ಶಾಖೆ ಮುಂದೆ ಜಮಾಯಿಸಿ ದಲಿತ ನೌಕರರ ಮೇಲೆ ದೌರ್ಜನ್ಯ ನಡೆದಿರುವುದನ್ನು ಖಂಡಿಸಿದರು.
ಬ್ಯಾಂಕ್‌ನಲ್ಲಿ ವಿಚಾರವೊಂದರ ಚರ್ಚೆ ವೇಳೆ ದಲಿತ ಸಮುದಾಯಕ್ಕೆ ಸೇರಿದ ನಂದಕುಮಾರ್ ಎಂಬ ಸಿಬ್ಬಂದಿ ಮೇಲೆ ಶಾಖಾ ಉಪ ವ್ಯವಸ್ಥಾಪಕ ಮುಜಾಮಿನ್ ಷರೀಫ್ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ಎಂ.ಆರ್.ಮಹೇಶ್ ಕುಮಾರ್ ಮಾತನಾಡಿ, ದಲಿತ ಸಮುದಾಯದ ನೌಕರನಿಗೆ ಉಪ ವ್ಯವಸ್ಥಾಪಕ ಮುಜಾಮಿನ್ ಷರೀಫ್
ಚಪ್ಪಲಿಯಿಂದ ಹೊಡೆದು ಅವಮಾನಿಸಿದ್ದಾರೆ. ಇಂಥ ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಅಲ್ಲದೆ ಘಟನಾ ಸ್ಥಳದಲ್ಲಿ ವ್ಯವಸ್ಥಾಪಕರು ಇದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಹಲ್ಲೆ ನಡೆಸಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸುವ ಜೊತೆಗೆ ವ್ಯವಸ್ಥಾಪಕರ ಮೇಲೆ ಶಿಸ್ತು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ ಭೇಟಿ ನೀಡಿ ಪರಿಶೀಲಿಸಿ ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿದರು.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು ಪ್ರಕರಣ ಕುರಿತು ಶುಕ್ರವಾರ ಸಂಜೆಯೇ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, 24 ಗಂಟೆಯೊಳಗೆ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಇದೆ ವೇಳೆ ಅಧ್ಯಕ್ಷರು ಬ್ಯಾಂಕ್‌ಗೆ ಭೇಟಿ ನೀಡಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ವ್ಯವಸ್ಥಾಪಕಿ ವನಜಾಕ್ಷಿ ಅವರಿಗೆ ಸೂಚನೆ ನೀಡಿದರು.
ಬ್ಯಾಂಕ್ ನಿರ್ದೇಶಕ ಅಶ್ವಿನ್ ಕುಮಾರ್, ಮುಖಂಡ ಸಿ.ಮಾಧು, ಪುರಸಭೆ ಸದಸ್ಯ ಎಂ.ಆರ್.ರಾಜಶೇಖರ್, ಮುಖಂಡರಾದ ಕಿರಣ್ ಶಂಕರ್, ಯತೀಶ್, ಪ್ರೋ.ರಂಗಸ್ವಾಮಿ, ಮಹದೇವ ಪ್ರಸಾದ್, ಸಿದ್ದರಾಜು.ಎಂ.ಆರ್ .ಪ್ರಸಾದ್, ದುಗ್ಗನಹಳ್ಳಿ ನಾಗರಾಜು, ಲಿಂಗದೇವರು, ಸಂದೇಶ, ಲೋಕೇಶ್, ಷರೀಫ್, ಮರಿಸ್ವಾಮಿ,ವಿಜಯ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.