ಮಂಡ್ಯ: ಮೇ 11. ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ. ರಾಜಕೀಯದಲ್ಲಿ ಪಿಎಚ್ ಡಿ ಮಾಡಿರುವ ನನಗೆ ಸೋಲಿನ ಭಯವಿಲ್ಲ, ಅತ್ಯಂತ ಬಹುಮತದಿಂದ ಗೆಲುವು ಸಾಧಿಸಿತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ, ಶಾಸಕ ಸಿ.ಎಸ್.ಪುಟ್ಟರಾಜು
ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಹಣೆಬರಹ ಬರೆದಿದ್ದು, ಮೇ.13ಕ್ಕೆ ಹಣೆಬರಹ ಗೊತ್ತಾಗುತ್ತದೆ. ನನಗೆ ಹಲವು ಚುನಾವಣೆಗಳನ್ನು ನಡೆಸಿದ ಅನುಭವವಿದೆ. ಎರಡು ಬಾರಿ ಸೋತಿದ್ದೇನೆ. ಮೂರು ಬಾರಿ ಗೆದ್ದಿದ್ದೇನೆ. ಹೀಗಾಗಿ ಸೋಲುವ ಮಾತೇ ಇಲ್ಲ ಏನಾದರೂ ಫಲಿತಾಂಶ ತಲೆಕೆಳಗಾದರೆ ಮಾತ್ರ 25ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಇಲ್ಲದಿದ್ದರೆ ಲೀಡ್ ಮತ್ತಷ್ಟು
ಹೆಚ್ಚಲಿದೆ ಎಂದರು.
ವಿಜಯಾನಂದ ಅವರಿಗೆ ಅನ್ಯಾಯ ಮಾಡಿಲ್ಲ : ನಾನು ಕೆ.ವಿ.ಶಂಕರೇಗೌಡರ ಮೊಮ್ಮಗ ವಿಜಯಾನಂದ ಅವರಿಗೆ ಯಾವ ಅನ್ಯಾಯ ಮಾಡಿಲ್ಲ. ಅವರಿಗೆ ಟಿಕೆಟ್ ತಪ್ಪಿಸಿಲ್ಲ. ಬಿದ್ದುಹೋಗಿದ್ದ ಜೆಡಿಎಸ್ ಪಕ್ಷವನ್ನು ಕಟ್ಟಿದ
ಬಿ.ಆರ್.ರಾಮಚಂದ್ರು ಅವರಿಗೆ ಪಕ್ಷ ಬಿ ಫಾರಂ ನೀಡಿದೆ. ಇದರಲ್ಲಿ ನನ್ನ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.
ಹಲ್ಲು ಬಿಗಿ ಹಿಡಿದು ಮಾತಾಡಲಿ : ನಮ್ಮ ಕುಟುಂಬ ಹಾಗೂ ಕೆ.ವಿ.ಶಂಕರೇಗೌಡರ ಕುಟುಂಬದ ಸಂಬಂಧ ಚೆನ್ನಾಗಿದೆ. ಅವರ ತಾತ ಕೆ.ವಿ.ಶಂಕರೇಗೌಡರು
ನಮ್ಮಪ್ಪನ ಜತೆಯಲ್ಲಿದ್ದವರು. ಅವರ ಅಪ್ಪ ಸಚ್ಚಿದಾನಂದ ನನ್ನ ಜತೆ ಚೆನ್ನಾಗಿದ್ದರು. ಕೆವಿಎಸ್ ಅವರದ್ದು ರಾಜಕೀಯವಾಗಿ ಇತಿಹಾಸವಿರುವ ಕುಟುಂಬವಾಗಿದೆ. ಹೀಗಾಗಿ ವಿಜಯಾನಂದ ಹಲ್ಲು ಬಿಗಿ ಹಿಡಿದು ಮಾತಾಡಬೇಕು.
ಮೇಲುಕೋಟೆ ಕ್ಷೇತ್ರದಲ್ಲಿರುವ ವಿಜಯಾನಂದ ಅವರ ಅಪ್ಪನ ಹಾಗೂ ತಾತನ ಅಭಿಮಾನಿಗಳು ನನ್ನ ಅಭಿಮಾನಿಯಾಗಿದ್ದಾರೆ. ಹೀಗಾಗಿ ಮೇಲುಕೋಟೆ ಕ್ಷೇತ್ರದಲ್ಲಿ ವಿಜಯಾನಂದ ಅವರದ್ದು ಏನೇನು ನಡೆಯದು ಎಂದು ಛೇಡಿಸಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನಾರಾಯಣಪುರ ಗ್ರಾಮದ ಮತಗಟ್ಟೆ ಬಳಿ ತಾವು ವ್ಯಕ್ತಿಗಳಿಬ್ಬರಿಗೆ ಕಪಾಳಮೋಕ್ಷ ನಡೆಸಿದ್ದೇನೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಪಡಿಸಿದ ಪುಟ್ಟರಾಜು, ನಿನ್ನೆ ನಾರಾಯಣಪುರ ಮತಗಟ್ಟೆ ಬಳಿ ರಘು ಎಂಬಾತ ವ್ಯಕ್ತಿಯೊಬ್ಬನನ್ನು ಕೆಡವಿಕೊಂಡು ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯ ಕುತ್ತಿಗೆ ಪಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇನೆ ಅಷ್ಟೆ, ಆದರೆ ಇದನ್ನೇ ಶಾಸಕರು ಕಪಾಳಮೋಕ್ಷ ಮಾಡಿದರೆಂದು ಕೆಲವರು ಬಿಂಬಿಸಿರುವುದು ಸರಿಯಲ್ಲ, ಒಂದು ವೇಳೆ ನಾನು ಕಪಾಳಮೋಕ್ಷ ನಡೆಸಿದ್ದೇ ಸತ್ಯವಾದರೆ ಅದರ ವಿಡಿಯೋ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಕ್ಷೇತ್ರದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಸರಿಯಲ್ಲ. ನಾನು ಹಲವಾರು ಚುನಾವಣೆಗಳನ್ನು ಎದುರಿಸಿದ್ದೇನೆ. ಜತೆಗೆ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ನನ್ನ ನಡುವೆ ಆರೋಗ್ಯಕರವಾಗಿ ರಾಜಕೀಯ ಪೈಪೋಟಿ ಇತ್ತು. ಆದರೂ ಶಾಂತಿಯುತವಾಗಿ ಚುನಾವಣೆಗಳು ನಡೆಸುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಚುನಾವಣೆಯಲ್ಲಿ ಕೆಲವು ರೌಡಿ ಶೀಟರ್ ಗಳು ಕಾಣಿಸಿಕೊಂಡು ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿವೆ. ಇಂತಹ ರೌಡಿ ಶೀಟರ್ ಗಳನ್ನು ಗಡಿಪಾರು ಮಾಡುವಂತೆ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಂತಹವರನ್ನು ಗಡಿಪಾರು ಮಾಡಿಲ್ಲ, ಒಂದು ಕಡೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದ ಅವರು, ಜಿ.ಮಲ್ಲಿಗೆರೆಯಲ್ಲಿ ಜೆಡಿಎಸ್ ಗೆ ಮತ ಹೋಗುತ್ತಿದೆ ಎಂಬ ಕಾರಣಕ್ಕೆ ಪ್ರಚೋದನೆಗೆ ಮುಂದಾದ
ದರ್ಶನ್ ಪುಟ್ಟಣ್ಣಯ್ಯ ಅವರು ಗೌರವಯುತವಾದ ರಾಜಕಾರಣ ನಡೆಸಬೇಕೆಂದರು.
ದರ್ಶನ್ ಪುಟ್ಟಣ್ಣಯ್ಯಗೆ ಅನುಭವದ ಕೊರತೆ ಇದೆ. ಅವರು ಕ್ಷೇತ್ರದಲ್ಲಿ ಇಲ್ಲಸಲ್ಲದ ಗಲಾಟೆ ಎಬ್ಬಿಸುತ್ತಿದ್ದಾರೆ.
ಒಂದು ವೇಳೆ ನನ್ನ ನಡಾವಳಿಕೆ ತಪ್ಪಿದ್ದರೆ ಸರಿ ಮಾಡಿಕೊಳ್ಳುವೆ. ಬೇಕಿದ್ದರೆ ಬಹಿರಂಗ ವೇದಿಕೆಗೆ ದರ್ಶನ್ ಪುಟ್ಟಣ್ಣಯ್ಯ ಚರ್ಚೆಗೆ ಬರಲಿ ಎಂದು ಪಂಥ್ವಾಹಾನ ನೀಡಿದರು.
ದರ್ಶನ್ ಪುಟ್ಟಣ್ಣಯ್ಯ ಸೋಲಿನ ಹತಾಶೆಯಿಂದ ಈ ರೀತಿ ಕಾರ್ಯಕರ್ತರನ್ನು ಪ್ರಚೋದನೆ ಮಾಡಿ ಗಲಾಟೆ ಎಬ್ಬಿಸುತ್ತಿದ್ದಾರೆ. ಫಲಿತಾಂಶ ಬಂದ ನಂತರ ಸಮಾಧಾನ ವರ್ತಿಸಬೇಕು. ಜತೆಗೆ ವಿದ್ಯಾವಂತರಾದ ಅವರು ಗೌರವಯುತವಾಗಿ ನಡೆದುಕೊಳ್ಳುಬೇಕು. ನಾನು ಎಸ್ ಎಸ್ ಎಲ್ ಸಿ ಪಾಸ್ ಅಷ್ಟೆ. ಆದರೂ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದೀನಿ. ಅವರು ಸೋತ ನಂತರ ಅಮೇರಿಕಾಕ್ಕೆ ಹೋಗ್ತಾರೆ. ನಾನು ಚಿನಕುರಳಿ, ಮೈಸೂರು ಅಥವಾ ಬೆಂಗಳೂರಿನಲ್ಲಿರುತ್ತೇನೆ. ಮಧ್ಯೆ ಕಾರ್ಯಕರ್ತರು ನೋವು ಅನುಭವಿಸಬೇಕಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಶಿವಳ್ಳಿ ಅಣ್ಣೇಗೌಡ ಉಪಸ್ಥಿತರಿದ್ದರು.