ಮಂಡ್ಯ: ಜೂ.೨೫. ರಾಜ್ಯ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿಗಳ ಪೈಕಿ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಹೆಚ್ಚು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಸರಕಾರದ ವಿರುದ್ದ ಕೆಲಶಕ್ತಿಗಳು ಈ ಯೋಜನೆಯ ಮೇಲೆ ಕಲ್ಲುಹಾಕಲು ತಮ್ಮದೆ ಅಪಪ್ರಚಾರದ ಮಾರ್ಗ ಹಿಡಿದಿವೆ.ಬಸ್ಸಿನಲ್ಲಿ ಯಾವುದೆ ಗಲಾಟೆ ನಡೆದರೂ ಅದನ್ನು ಶಕ್ತಿ ಯೋಜನೆಯೆ ಕಾರಣ ಎನ್ನುವುದು.ಯಾವುದೋ ಹಳೇಯ ಗಲಾಟೆ ವೀಡಿಯೋ ಹಾಕಿ ಶಕ್ತಿ ಯೋಜನೆಯಿಂದ ಈ ಗಲಾಟೆ ಆಗುತ್ತಿದೆ ಎಂದು ಸಾಮಾಜಿಕ ತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಇದೇ ಮಾದರಿಯಲ್ಲಿ ಮಂಡ್ಯ ಜಿಲ್ಲೆಯ ಹುಳ್ಳೇನಹಳ್ಳಿಯಲ್ಲಿ ಕಿಟಕಿ ಬಾಗಿಲಿನಿಂದ ಮಹಿಳೆಯೊಬ್ಬಳು ಬಸ್ ಹತ್ತಲು ಹೋಗಿ ಕೈ ಮುರಿದುಹೋಗಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ.ಈ ಕುರಿತು ಕರಾರಸಾಸಂ ಸ್ಪಷ್ಟನೆ ನೀಡಿದೆ ಓದಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಬಸ್ ನಲ್ಲಿ ಕಿಟಕಿ ಮೂಲಕ ಹತ್ತೋವಾಗ ನಡೆದಿರುವ ಘಟನೆ ಎಂದು ಬಿಂಬಿಸಿ ಅಪಘಾತದ ವಿಡಿಯೋವನ್ನು ತಪ್ಪಾಗಿ ತೋರಿಸುತ್ತಿರುವ ಬಗ್ಗೆ ಸ್ಪಷ್ಟೀಕರಣ
ದಿನಾಂಕ 18/06/2023 ರಂದು ಕ.ರಾ.ರ.ಸಾ.ನಿಗಮ, ಚಾಮರಾಜನಗರ ವಿಭಾಗದ ನಂಜನಗೂಡು ಘಟಕದ ವಾಹನ ಸಂಖ್ಯೆ KA-10-F-151 ಅನುಸೂಚಿ ಸಂಖ್ಯೆ34 ರಲ್ಲಿ ನಂಜನಗೂಡಿನಿಂದ ಟಿ.ನರಸೀಪುರ ಕ್ಕೆ ಕಾರ್ಯಚರಣೆ ಮಾಡುತ್ತಿರುವಾಗ, ಮಧ್ಯಾಹ್ನ ಸಮಯ ಸುಮಾರು 1.45 ರಲ್ಲಿ ಬಸವರಾಜಪುರದ ಹತ್ತಿರ ಎದುರು ದಿಕ್ಕಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಲಾರಿ ಸಂಖ್ಯೆ TN-77-Q-8735 ಯ ಚಾಲಕನು ಸಂಸ್ಥೆಯ ವಾಹನದ ಬಲಹಿಂಬದಿಯ ಕಿಟಕಿಯ ಬಳಿ ಢಿಕ್ಕಿ ಮಾಡಿ ಅಪಘಾತವಾಗಿರುತ್ತದೆ. ಈ ಅಪಘಾತದಲ್ಲಿ ಕಿಟಕಿಗಳ ಬಳಿ ಇರುವ ಆಸನಗಳಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿರುತ್ತದೆ. ಶ್ರೀಮತಿ ಶಾಂತ ಕುಮಾರಿ, W/O ಲೇ!! ಬಸವರಾಜು, 33 ವರ್ಷ, ಮಾಗುಡಿಲು, ಹೆಚ್.ಡಿ.ಕೋಟೆ ತಾಲೂಕು ಇವರಿಗೆ ಬಲಗೈ ತುಂಡಾಗಿದೆ ಹಾಗೂ ಶ್ರೀಮತಿ ರಾಜಮ್ಮ, W/O ನಾಗರಾಜ ನಾಯಕ, 50 ವರ್ಷ, ಹುಲ್ಲಹಳ್ಳಿ, ನಂಜನಗೂಡು ತಾಲೂಕು ಇವರಿಗೆ ಬಲಗೈ ತೀವ್ರ ಪೆಟ್ಟಾಗಿರುತ್ತದೆ. ಸಂಸ್ಥೆಯ ಅಧಿಕಾರಿಗಳು ಸ್ಥಳಪರಿಶೀಲನೆ ನಡಿಸಿದ್ದು, ಗಾಯಾಳುಗಳನ್ಬು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯ ಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಉತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿರುತ್ತದೆ.
ಲಾರಿ ಚಾಲಕನ ವಿರುಧ್ಧ ಬಿಳಿಗೆರೆ ಪೋಲೀಸ್ ಠಾಣೆಯಲ್ಲಿ ಎಫ್‌ಐ.ಆರ್ ದಾಖಲಾಗಿರುತ್ತದೆ.
ಈ ಅಪಘಾತದಲ್ಲಿ ಸಂಸ್ಥೆಯ ಚಾಲಕರ ತಪ್ಪಿರುವುದಿಲ್ಲ. ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ನಿಗಮವು ಭರಿಸುತ್ತಿದೆ.
ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿರುವ ಹಾಗೆ ಕಿಟಿಕಿಯ ಮೂಲಕ ಬಸ್ಸನ್ನು ಹತ್ತುವಾಗ ನಡೆದಿರುವ ಘಟನೆ ಇದಾಗಿರುವುದಿಲ್ಲ ಎಂದು ಮಂಡ್ಯ ವಿಭಾಗ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
