2018 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವಾಗ ರಾಜ್ಯದ ಸಾಲ 2,85, 238 ಕೋಟಿ ರೂಪಾಯಿಯಾಗಿತ್ತು. ಮೊನ್ನೆ ಮುಖ್ಯಮಂತ್ರಿ ಬೊಮ್ಮಾಯಿ ಕೆಳಗಿಳಿಯುವಾಗ ಈ ಸಾಲದ ಮೊತ್ತ 5, 18 366 ಕೋಟಿಗೆ ಏರಿದೆ. ಅಂದರೆ ಈಗಿನ ಸಿದ್ದರಾಮಯ್ಯರಂತೆ ಯಾವ ಉಚಿತವನ್ನೂ ನೀಡದೆ ಕಳೆದ ಐದು ವರ್ಷಗಳಲ್ಲಿ ಬೊಮ್ಮಾಯಿ ಸರ್ಕಾರ ಮಾಡಿರುವ ಸಾಲ 2, 33, 124 ಕೋಟಿ ರೂಪಾಯಿ. ಇನ್ನೊಂದು ಲೆಕ್ಕಾಚಾರವನ್ನೂ ಹೇಳುತ್ತೇನೆ.
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಂದಿನಿಂದ ಈವರೆಗೆ ವಸೂಲಾಗದ ಸಾಲ ಎಂದು ಹೇಳಿ 11 ಲಕ್ಷ 17 ಸಾವಿರ ಕೋಟಿ ರೂಪಾಯಿಯನ್ನು ರೈಟ್ ಆಫ್ ಮಾಡಲಾಗಿದೆ. ರೈಟ್ ಆಫ್ ನ ಬಗ್ಗೆ ವಾದಗಳ ಕಸರತ್ತುಗಳೇನೇ ಇರಲಿ, ಅದು ಎಂದೆಂದೂ ವಸೂಲಾಗದ ಸಾಲವಾಗಿಯೇ ಉಳಿಯುವುದು ಮತ್ತು ಮನ್ನಾ ಆಗುವುದೇ ರೈಟ್ ಆಫ್ ನ ಅಂತಿಮ ಫಲಿತಾಂಶ. ಹಾಗಂತ, ಹೀಗೆ ಸಾಲ ಪಡೆಕೊಂಡು ಕೊನೆಗೆ ಮನ್ನಾ ಮಾಡ್ಕೊಂಡವರು ಕೂಲಿ ನಾಲಿ ಮಾಡಿ, ಬಿಪಿಎಲ್ ಕಾರ್ಡ್ ನಲ್ಲಿ ಅಕ್ಕಿ ಬೆಳೆ ಗೋದಿಗಳನ್ನು ಪಡಕೊಂಡು ಬದುಕುವ ಬಡಪಾಯಿಗಳಲ್ಲ. ಸೂಟು ಬೂಟು ಹಾಕೊಂಡು, ದುಬಾರಿ ಕಾರುಗಳಲ್ಲಿ ತಿರುಗಾಡಿಕೊಂಡು, ವಿಮಾನಗಳಲ್ಲಿ ರೊಯ್ಯನೆ ಹಾರುವವರು. ಇವರಲ್ಲಿ ಬಹುತೇಕರೂ ಈಗ ವಿದೇಶಕ್ಕೆ ಹೋಗಿ ಆರಾಮವಾಗಿದ್ದಾರೆ. ಹಾಗಂತ ಸಿದ್ದರಾಮಯ್ಯ ಘೋಷಿಸಿರುವ ಉಚಿತಕ್ಕೆ ವಾರ್ಷಿಕವಾಗಿ 59,000 ಕೋಟಿ ರೂಪಾಯಿ ಬೇಕು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಉದ್ಯಮಿಗಳಿಗೆ ಮಾಡಲಾದ 11.17 ಲಕ್ಷ ಕೋಟಿ ರೂಪಾಯಿ ರೈಟ್ ಆಫ್ ಅನ್ನು ವಸೂಲು ಮಾಡಿದರೆ ಈ ಉಚಿತವನ್ನು 20 ವರ್ಷಗಳವರೆಗೆ ಯಾವುದೇ ಹೊರೆಯಿಲ್ಲದೆ ಬಡ ಜನರಿಗೆ ಕೊಡುವುದಕ್ಕೆ ಸಿದ್ದರಾಮಯ್ಯರಿಗೆ ಸಾಧ್ಯವಾಗಬಹುದು.
ಬಡವರಿಗೆ ಉಚಿತವನ್ನು ಕೊಟ್ಟರೆ ಆಕಾಶವೇ ತಲೆಗೆ ಬಿದ್ದಂತೆ ಮಾತಾಡೋರು, ಉಳ್ಳವರಿಗೆ ಅದನ್ನೇ ರೈಟ್ ಆಫ್ ಹೆಸರಲ್ಲಿ ಕೊಡುವಾಗ ಯಾಕೆ ಸಮರ್ಥನೆಗೆ ಇಳಿಯುತ್ತಾರೆ? ಇವರಿಗೆ ಬಡವರ ಮೇಲೆ ದ್ವೇಷವೋ ಅಥವಾ ಬೌದ್ಧಿಕ ದಾರಿದ್ರವೋ?
ಏ ಕೆ ಕುಕ್ಕಿಲ .