ಮಂಡ್ಯ: ಕನ್ನಂಬಾಡಿ ಕಟ್ಟೆ ಮುಖ್ಯದ್ವಾರದ ಬಳಿ ಹಣ ಮಾಡುವ ಉದ್ದೇಶದಿಮದ ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ಮಾಡಲು ಮುಂದಾಗಿದ್ದು, ಸದರಿ ಕ್ರಿಯಾಯೋಜನೆ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ
ಚಂದ್ರಶೇಖರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಕಾವೇರಿಗೆ ಆರತಿ ಎಂಬ ಹೆಸರು ಸೇರಿಸಿ ಕನ್ನಂಬಾಡಿ ಅಣೆಕಟ್ಟೆಯ ಪರಿಸರ, ನೈರ್ಮಲ್ಯಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಲಾಗುತ್ತಿದೆ. ಕಾವೇರಿ ಆರತಿಯ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಮೂಡುತ್ತಿದೆ ಎಂದರು.
ಸರ್ಕಾರ ಲಾಭ ಮಾಡಿ ಹಣ ಲೂಟಿ ಹೊಡೆಯುವ ಉದ್ದೇಶದಿಂದ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಅಚ್ಚುಕಟ್ಟು ವ್ಯಾಪ್ತಿಯ ಮುಖ್ಯನಾಲೆ, ಉಪನಾಲೆ, ಸೀಳುನಾಲೆ, ನಾಲಾ ಬದಿಯ ರಸ್ತೆಗಳು ತೀರ ಹದಗೆಟ್ಟಿದೆ. ನಾಲೆಯ ಕೊನೆಯ ಭಾಗಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ಕೆಲಸಕ್ಕೆ ಒತ್ತು ಕೊಡದೆ ಅನಾವಶ್ಯಕ ಯೋಜನೆಗೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿರುವುದು ಖಂಡನೀಯವಾಗಿದ್ದು, ಈ ಹಿನ್ನಲೆ ಏಪ್ರಿಲ್ ೧೭ರಂದು ರೈತ ಸಂಘ ಸಭೆ ನಡೆಸಿದ್ದು, ಮೇ.೦೬ರಂದು ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
*ಮೈಷುಗರ್* *ನಷ್ಟದಲ್ಲಿ* :ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು ಮಾತನಾಡಿ, ಮೈಷುಗರ್ನಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ೧೩ ಮರಗಳನ್ನು ಕಡಿಸಿ, ತಮ್ಮ ಮನೆಗೆ ಸಾಗಿಸಿಕೊಂಡಿದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮೈಷುಗರ್ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಘೋಷಿಸಿಕೊಂಡು ೩೩ ಕೋಟಿ ರೂ ನಷ್ಟದಲ್ಲಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ, ಮಾಧ್ಯಮ ಕಾರ್ಯದರ್ಶಿ ಸೋ.ಸಿ.ಪ್ರಕಾಶ್, ಮಲ್ಲೇಶ್, ಲಿಂಗರಾಜು, ಎಂ.ಕುಮಾರ್ ಇದ್ದರು.