Tuesday, October 13, 2026
spot_img

ಮದ್ದೂರಿನಲ್ಲಿ ಎಳನೀರು ಕಳ್ಳತನಕ್ಕೆ ವಿಫಲ ಯತ್ನ:ಟೆಂಪೊ ಚಾಲಕ ಸೆರೆ.ನಾಲ್ವರು ಪರಾರಿ

 

​ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಗರಕೆರೆ ಗ್ರಾಮದ ಮದ್ದೂರು ಹೊಳೆಯ ಪಕ್ಕದಲ್ಲಿ, ವೈದ್ಯನಾಥಪುರಕ್ಕೆ ತೆರಳುವ ದಾರಿಯ ಇಕ್ಕೆಲಗಳ ತೋಟಗಳಲ್ಲಿ ಸುಮಾರು 400 ಎಳನೀರುಗಳನ್ನು ಕಳವು ಮಾಡುತ್ತಿದ್ದ ಗುಂಪೊಂದನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕಳವು ಮಾಡಿದ ಎಳನೀರುಗಳನ್ನು ಸಾಗಿಸಲು ತಂದಿದ್ದ ಟೆಂಪೋ ಸಮೇತ ಚಾಲಕನನ್ನು ಊರ ಮಂದಿ ಸೆರೆಹಿಡಿದಿದ್ದು, ಆತನ ಜೊತೆಯಲ್ಲಿದ್ದ ಇತರ ನಾಲ್ವರು ಕತ್ತಲಲ್ಲಿ ಪರಾರಿಯಾಗಿದ್ದಾರೆ.
​
ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ರೈತರು ತಮ್ಮ ಗದ್ದೆ ಹಾಗೂ ತೋಟಗಳಿಗೆ ನೀರು ಹಾಯಿಸಲು ಹೋದ ಹೊತ್ತಿನಲ್ಲಿ, ಖದೀಮರು ಎಳನೀರು ಕೀಳುತ್ತಿರುವುದು ಬೆಳಕಿಗೆ ಬಂದಿದೆ. ಹತ್ತಾರು ರೈತರ ತೋಟಗಳಿಗೆ ನುಗ್ಗಿ ಈ ಕೃತ್ಯ ಎಸಗಲಾಗಿದೆ. ತಕ್ಷಣವೇ ಎಚ್ಚೆತ್ತ ಊರಮಂದಿ ಕಾರ್ಯಾಚರಣೆ ನಡೆಸಿ, ವಾಹನದ ಚಾಲಕನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಕತ್ತಲಿನ ಲಾಭ ಪಡೆದ ನಾಲ್ವರು ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕಳೆದ ವಾರವಷ್ಟೇ ನಗರಕೆರೆ ಹಾಗೂ ಪಕ್ಕದ ಸೋಂಪುರ ಗ್ರಾಮಗಳಲ್ಲಿ ರಾತ್ರಿ ವೇಳೆ ಮನೆಗಳಿಗೆ ನುಗ್ಗಲು ಕಳ್ಳರು ಯತ್ನಿಸಿದ ಘಟನೆಗಳು ನಡೆದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದ್ದವು. ಆದರೆ, ಈ ಹಿಂದಿನ ಘಟನೆ ಹಾಗೂ ಪ್ರಸ್ತುತ ನಡೆದಿರುವ ಎಳನೀರು ಕಳ್ಳತನದ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿರುವ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ.

​ಸತತವಾಗಿ ನಡೆಯುತ್ತಿರುವ ಇಂತಹ ಕಳ್ಳತನ ಹಾಗೂ ಮನೆಗಳ್ಳತನದ ಯತ್ನಗಳಿಂದಾಗಿ ನಗರಕೆರೆ ಮತ್ತು ಸುತ್ತಮುತ್ತಲಿನ ಊರ ಮಂದಿಯಲ್ಲಿ ತೀವ್ರ ಆತಂಕ ಮನೆಮಾಡಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಕಳ್ಳರ ಪಾಲಾಗುತ್ತಿರುವುದು ರೈತರ ಕಂಗಾಲಿಗೆ ಕಾರಣವಾಗಿದೆ.
​
ಮದ್ದೂರು ಠಾಣಾ ಪೊಲೀಸರು ಈ ಕೂಡಲೇ ಎಚ್ಚೆತ್ತುಕೊಂಡು ಶೀಘ್ರ ತನಿಖೆ ಕೈಗೊಳ್ಳಬೇಕು. ಟೆಂಪೋ ಚಾಲಕನ ವಿಚಾರಣೆ ನಡೆಸಿ, ಪರಾರಿ ಆಗಿರುವ ಉಳಿದ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಹಾಗೂ ಹಳ್ಳಿಗಳಲ್ಲಿ ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು ಎಂದು ಊರಮಂದಿಯ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!