ಲಂಚ: ಪುರಸಭೆ ಮುಖ್ಯಾಧಿಕಾರಿ ಬಲೆಗೆ
ತೇರದಾಳ (ಬಾಗಲಕೋಟೆ ಜಿಲ್ಲೆ): ಮನೆಯ ಇ-ಸ್ವತ್ತು ಮಾಡಿಕೊಡಲು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಸಹಾಯಕರ ಮೂಲಕ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಇರ್ಫಾನ್ ಝಾರೆ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಹಸೀನಾ ಅಬ್ದುಲ್ ಕೊರಬು ಅವರು ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿ, ಹಲವು ದಿನಗಳಾದರೂ ನೀಡಿರಲಿಲ್ಲ. ನಂತರ ಇ-ಸ್ವತ್ತು ನೀಡಲು ಇರ್ಫಾನ್ ಅವರು, ಹೊರಗುತ್ತಿಗೆ ನೌಕರ ಇಬ್ರಾಹಿಂ ಮಹಾಲಿಂಗಪುರ ಮೂಲಕ ₹12 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.
‘ಮುಖ್ಯಾಧಿಕಾರಿ ಮತ್ತು ಇಬ್ರಾಹಿಂ ಅವರನ್ನು ಬುಧವಾರ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ. ದಾಳಿ ವೇಳೆ ಮತ್ತೊಬ್ಬ ಹೊರಗುತ್ತಿಗೆ ನೌಕರ ಶಿವಾನಂದ ಕಾಂಬಳೆ ಸ್ಥಳದಲ್ಲಿದ್ದರು. ಅವರ ಪಾತ್ರದ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ


