ಮಂಡ್ಯ: ೨೫.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಆರೋಪಗಳನ್ನು ದಾಖಲೆ ಸಮೇತ ಸಾಬೀತುಪಡಿಸಲಿ ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಕೇಳಲಿ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಅಂದಾನಿ ಸೋಮನಹಳ್ಳಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ್ ಕಂಠಿ ಓರ್ವ ಜಿ.ಪಂ ಮಾಜಿ ಅಧ್ಯಕ್ಷನಾಗಿ ಈ ರೀತಿಯಾಗಿ ಆಧಾರ ರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದರು.
ಅವರು ಸಾಕಷ್ಟು ಸಂದರ್ಭಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಲಕ್ಷಾಂತರ ರೂ ಹಣ ಪಡೆದಿದ್ದಾರೆ. ಇದಕ್ಕೆ ನನ್ನ ಬಳಿ ಸಾಕ್ಷ್ಯಗಳಿದ್ದು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲೆಸೆದರು.
ಮದ್ದೂರು ನಗರಸಭೆಗೆ ಹಲವು ಗ್ರಾಮಗಳನ್ನು ಸೇರಿಸುತ್ತಿರುವುದನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಮದ್ದೂರು ಶಾಸಕರ ಕುರಿತು ಮಾತನಾಡಿದ್ದರ ಸಂಬಂಧ ಶಾಸಕರ ಬಕೆಟ್ ಹಿಡಿಯುವ ಸುರೇಶ್ ಕಂಠಿ ಪತ್ರಿಕಾಗೋಷ್ಠಿ ನಡೆಸಿ, ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡಿರುವ ಕ್ರಮ ಸರಿಯಲ್ಲ ಎಂದು ಖಂಡಿಸಿದರು.
ಸುರೇಶ್ ಕಂಠಿ ಜಿಪಂ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಎಲ್ಲ ಹಾಸ್ಟೆಲ್ ಗಳು ಹಾಗೂ ಆರೋಗ್ಯ ಇಲಾಖೆಯಲ್ಲಿ ಮಾಮೂಲು ನಿಗದಿಪಡಿಸಿಕೊಂಡಿದ್ದರು.
ಇದಲ್ಲದೆ ಪ್ರೇಮ ಪ್ರಕರಣವೊಂದರಲ್ಲಿ ದಲಿತ ಯುವತಿಗೆ ನ್ಯಾಯ ಕೊಡಿಸುವುದಾಗಿ ಹೇಳಿ ಆಕೆಯಿಂದಲೂ ಹಣ ಪಡೆದು ಸುಳ್ಳು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿ ಕಡೆಗೆ ಮೇಲ್ಜಾತಿ ಯುವಕನ ಬಳಿಯು ಮೂರು ಲಕ್ಷ ಪಡೆದು ಯುವತಿಗೂ ನ್ಯಾಯ ಕೊಡಿಸದೆ ವಂಚಿಸಿದ್ದಾರೆಂದು ಅಂದಾನಿ ಆರೋಪಿಸಿದರು.
ಕೊಪ್ಪ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ ಅಪಘಾತ ಎಂದು ಬಿಂಬಿಸಿ ಪರಿಹಾರ ಕೊಡಿಸುವ ಹವಣಿಕೆಯಲ್ಲಿರುವ ಸುರೇಶ್ ಕಂಠಿ ವಿರುದ್ದ ಪೋಲಿಸ್ ವರಿಷ್ಡಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಅವರು ಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಮದ್ದೂರು ತಾ.ಅಧ್ಯಕ್ಷ ಶಂಕರ್, ಮೂರ್ತಿ, ಸಿದ್ದರಾಮು, ಸೋಮಶೇಖರ್ ಇದ್ದರು.