ಪಾಂಡವಪುರ
ಕಳೆದ ವರ್ಷ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾಡ್ಯ ಗ್ರಾಮದ ಬಳಿಯ ಆಲೆಮನೆಯೊಂದರಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಹೆಣ್ಣು ಭ್ರೂಣ
ಪತ್ತೆ ಹಾಗೂ ಹತ್ಯೆ ಪ್ರಕರಣ ಇನ್ನೂ ಚರ್ಚೆಯಲ್ಲಿರುವಾಗಲೇ ಮತ್ತೊಂದು ಪ್ರಕರಣ ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆಯ ವಸತಿಗೃಹದಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಭಾನುವಾರ ತಡರಾತ್ರಿ ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್ ಚಾಲಕನ ವಸತಿಗೃಹದ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ ಅವರು ಪೊಲೀಸರ ಜತೆ ದಾಳಿ ನಡೆಸಿದಾಗ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಹೊರಗುತ್ತಿಗೆ ಆಧಾರದಲ್ಲಿ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ಚಾಲಕನಾಗಿದ್ದ ಆನಂದ, ಡಿ ಗ್ರೂಪ್ ನೌಕರೆ ಆಗಿರುವ ಆತನ ಪತ್ನಿ ಅಶ್ವಿನಿ, ಅತ್ತೆ ಶಶಿಕಲಾ ಮತ್ತು ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು ಎನ್ನಲಾದ ಗಿರಿಜಾಂಭ ಬಂಧಿತರು.
ಇದೇ ವೇಳೆ ಗರ್ಭಪಾತ ಮಾಡಿಸಿಕೊಳ್ಳಲು ಬಂದಿದ್ದ ಮೈಸೂರು ಜಿಲ್ಲೆ ಡಿ.ಸಾಲುಂಡಿ ಗ್ರಾಮದ ಪುಷ್ಪಲತಾ ಅವರು ದಾಳಿ ವೇಳೆಗೆ ಮಾತ್ರೆ ತೆಗೆದುಕೊಂಡಿದ್ದು, ಅವರನ್ನು ವಶಕ್ಕೆ ಪಡೆದು ಉಪವಿಭಾಗೀಯ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿ ರಕ್ಷಿಸಲಾಗಿದೆ.
ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ: ಹೆಣ್ಣು ಭ್ರೂಣ ಹತ್ಯೆ ಘಟನೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ ವಸತಿ ಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಪಾಂಡವಪುರ ಉಪವಿಭಾಗಾಧಿಕಾರಿ ಮಾರುತಿ, ತಹಶೀಲ್ದಾರ್ ಶ್ರೇಯಸ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಿರ್ದಾಕ್ಷಿಣ್ಯ ಕ್ರಮ : ಡಿಸಿ ಡಾ.ಕುಮಾರ
ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಸೋಮವಾರ ಪಾಂಡವಪುರದ ಆರೋಗ್ಯ ಇಲಾಖೆಯ ವಸತಿಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಸತಿಗೃಹದಲ್ಲಿ ಭ್ರೂಣಹತ್ಯೆಗೆ ಸಂಬಂಧಿಸಿದ ಮಾತ್ರೆಗಳು ಸೇರಿದಂತೆ ಇತರೆ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಮೈಸೂರು ಜಿಲ್ಲೆಯ ಡಿ.ಸಾಲುಂಡಿ ಗ್ರಾಮದ ಮಹಿಳೆಯೊಬ್ಬರು ೧೫ ದಿನದ ಹಿಂದೆ ಬೇರೆಡೆ ಒಂಟಿಮನೆಯಲ್ಲಿ ಸ್ಕ್ಯಾನಿಂಗ್ ನಡೆಸಿ ಹೆಣ್ಣುಭ್ರೂಣ ಇರುವುದು ಖಚಿತವಾದ ಮೇಲೆ ಯಾರಿಂದಲೋ ಮಾಹಿತಿ ಪಡೆದು ಭಾನುವಾರ ಮಧ್ಯಾಹ್ನ ಈ ವಸತಿಗೃಹಕ್ಕೆ ಗರ್ಭಪಾತ ಮಾಡಿಸಿಕೊಳ್ಳಲು ಬಂದಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.
ಸದ್ಯಕ್ಕೆ ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಆನಂದ, ಪತ್ನಿ ಅಶ್ವಿನಿ, ಅತ್ತೆ ಶಶಿಕಲಾ, ಮತ್ತೊಬ್ಬ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ಇತರೆ ವೈದ್ಯರು ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೋಟ್
“ಮಾಹಿತಿ ಆಧಾರದ ಮೇಲೆ ವಸತಿಗೃಹದ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದೇವೆ. ಆ ವೇಳೆಗೆ ಗರ್ಭಪಾತಕ್ಕೆ ಬಂದಿದ್ದ ನಾಲ್ಕು ತಿಂಗಳ ಗರ್ಭಿಣಿಗೆ ಮಾತ್ರೆ ನುಂಗಿಸಲಾಗಿತ್ತು. ಗರ್ಭಪಾತ ಪ್ರಕ್ರಿಯೆ ಅಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ರವಾನಿಸಿ ಗರ್ಭಪಾತ ಮಾಡಿ ರಕ್ಷಣೆ ಮಾಡಲಾಗಿದೆ. ವಸತಿಗೃಹದಲ್ಲಿ ಭ್ರೂಣ ಪತ್ತೆ ಯಂತ್ರ ಇರಲಿಲ್ಲ. ಆಕೆ ಬೇರೆಡೆ ಸ್ಕ್ಯಾನಿಂಗ್ ಮಾಡಿಸಿದ್ದು, ಅದನ್ನು ಪತ್ತೆಹಚ್ಚಲಾಗುವುದು. ವಸತಿಗೃಹದಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದ ಮಾತ್ರೆ, ಸಿರಿಂಜ್, ಇತರೆ ಔಷಧಿ ಇದ್ದವು. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.”
-ಡಾ.ಕೆ.ಮೋಹನ್, ಡಿಎಚ್‌ಒ, ಮಂಡ್ಯ.