ನಾಗಮಂಗಲ ತಾಲೋಕು ಆಸ್ಪತ್ರೆ ತನಿಖೆಯಲ್ಲಿ ಸಾಬೀತಾದ ಖರೀದಿ ಹಗರಣ
ನಾಗಮಂಗಲ ತಾಲೋಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಖರೀದಿ ಹಗರಣ ಜಂಟೀ ತನಿಖಾ ಸಮಿತಿಯ ತನಿಖೆಯಲ್ಲಿ ಸಾಬೀತಾಗಿದೆ.
೨೦೨೨ ರಿಂದ ೨೦೨೪ ವರೆಗೆ ನಾಗಮಂಗಲ ತಾಲೋಕು ಆಸ್ಪತ್ರೆಯಲ್ಲಿ ಔಷಧ.ಸರ್ಜಿಕಲ್ ಉಪಕರಣಗಳ ಖರೀದಿ ಹೆಸರಿನಲ್ಲಿ ರೂ ೮೩ ಲಕ್ಷ ರೂಪಾಯಿಗಳ ಹಗರಣ ನಡೆಸಲಾಗಿದೆ ಎಂದು ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣ ಗೌಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್ ಗೆ ದೂರು ದಾಖಲಿಸಿದ್ದರು.
ದೂರಿನನ್ವಯ ಆರಂಭದಲ್ಲಿ ಜಂಟೀ ತನಿಖಾ ಸಮಿತಿಯನ್ನು ರಚಸಲಾಗಿತ್ತು.ತನಿಖೆಗೆ ಹೋದ ಸದರಿ ತನಿಖಾ ಸಮಿತಿ ತಾಲೋಕು ಆಸ್ಪತ್ರೆಯ ಆರೋಪಿತ ಅಧಿಕಾರಿಗಳೊಂದಿಗೆ ಖಾಸಗಿ ಡಾಬಾದಲ್ಲಿ ಇದ್ದುದ್ದು ಸಾರ್ವಜನಿಕರ ಕಣ್ಣಿಗೆ ಬಿದ್ದು ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಸಂಶಯ ಎದ್ದಿತು.
ಕಡೆಗೆ ಎಚ್ಚೆತ್ತ ಡಿಎಚ್ ಓ ಮೋಹನ್ .ಜಿಲ್ಲಾ ಸರ್ವೇಕ್ಷಣೆ ಅಧಿಕಾರಿ ಡಾ ಕುಮಾರ್ ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ.ಸೋಮಶೇಖರ ಸೇರಿದಂತೆ ಏಳು ಜನರ ತನಿಖಾ ತಂಡ ರಚಿಸಿ ದೂರಿನ ಸಂಬಂದ ತನಿಖೆಗೆ ಆದೇಶ ಮಾಡಲಾಗಿತ್ತು.
ದೂರಿನಲ್ಲಿ ಆರೋಪಿಸಲಾಗಿದ್ದ ವಿಷಯಗಳನ್ನು ತನಿಖಾ ಸಮಿತಿ ಎತ್ತಿಹಿಡಿದಿದ್ದು.ಈ ಅವಧಿಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾಗಿದ್ದ ಡಾ.ವೆಂಕಟೇಶ್. ಕಚೇರಿ ಅಧೀಕ್ಷಕ ಅಂಜನಪ್ಪ.ಪ್ರಥಮ ದರ್ಜೆ ಸಹಾಯಕ ಮೋಹನ್ ಹಿರಿಯ ಫಾರ್ಮಸಿ ಅಧಿಕಾರಿ ಪುಟ್ಟರಾಜು .ಫಾರ್ಮಸಿ ಅಧಿಕಾರಿ ಉಮಾ ಮೇಲೆ ಹಗರಣದ ಹೊಣೆ ಹೊರಿಸಿದೆ.
ತನಿಖೆಯಲ್ಲಿ ಮುಖ್ಯವಾಗಿ ನಿಯಮಾನುಸಾರ ಟೆಂಡರ್ ನಡೆಸದೆ ಬಿಡಿ ಬಿಡಿಯಾಗಿ ಕೆಲವೆ ದಿನಗಳ ಅಂತರದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಗಳು ಹಾಗೂ ಸರ್ಜಿಕಲ್ ಉಪಕರಣಗಳನ್ನು ಖರೀದಿಸಿ ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿರುವುದು.ಬಹುತೇಕ ಖರೀದಿಗಳಿಗೆ ನೀಡ್ ಅಸೆಸ್ ಮೆಂಟ್ ಸಮಿತಿಯ ಅನುಮೋದನೆ ಪಡೆಯದಿರುವುದು.ಖರೀದಿಗೆ ಸಂಬಂದಿಸಿದಂತೆ ಕೆಳಹಂತದಿಂದ ಬೇಡಿಕೆ ಪಟ್ಟಿ ಪಡೆಯದೆ ಖರೀದಿ ನಡೆಸಿರುವುದು.ಕೋಟೇಷನ್ ತೆರೆಯುವಾಗ ಲಕೋಟೆಯ ಮೇಲೆ ಆಡಳಿತ ವೈದ್ಯಾಧಿಕಾರಿಗಳ ಒಂದೇ ಸಹಿ ಇರುವುದನ್ನು ತನಿಖಾ ಸಮಿತಿ ಗುರುತಿಸಿದೆ.
ಮುಂದುವರಿದು ಬ್ರಾಂಡ್ ಹೆಸರಿನಲ್ಲಿ ಔಷಧಗಳ ಖರೀದಿ ಮಾಡುವಂತಿಲ್ಲವಾದರೂ ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಬ್ರಾಂಡ್ ಹೆಸರಿನಲ್ಲು ಸಹ ಔಷಧ ಖರೀದಿಸಲಾಗಿದೆ.ಕೆಲವೊಂದು ಕೋಟೆಷನ್ ಗಳಲ್ಲಿ ದಿನಾಂಕ ತಿದ್ದುಪಡಿ ಮಾಡಿರುವುದನ್ನು ತನಿಖಾ ಸಮಿತಿ ಪತ್ತೆ ಹಚ್ಚಿದೆ.ಕೆಲವೊಂದು ಖರೀದಿಯಲ್ಲಿ ಕಡತಗಳಲ್ಲಿ ಮೂಲ ಬಿಲ್ ಮತ್ತು ನಕಲು ಬಿಲ್ ಸಹ ಕಡತದಿಂದ ಕಾಣೆಯಾಗಿದ್ದು ಅಕ್ರಮಕ್ಕೆ ಪುಷ್ಟಿ ನೀಡಿದೆ.ಕೆಲವೊಂದು ಖರೀದಿ ಪ್ರಕಟಣೆ ಹಾಗೂ ದರಪಟ್ಟಿಯಲ್ಲಿ ದಿನಾಂಕಗಳನ್ನು ತಿದ್ದುಪಡಿ ಮಾಡಲಾಗಿದೆ. ಕೆಲವೊಂದು ಖರೀದಿಯಲ್ಲಿ ಸರಬರಾಜು ಮಾಡಿದ ಕಂಪನಿಗಳು ಅಸ್ತಿತ್ವದಲ್ಲಿಯೆ ಇಲ್ಲದ ಜಿಎಸ್ಟಿ ನಂಬರ್ ಗಳನ್ನು ಸಹ ಬಳಸಿವೆ.
ಕೆಲವು ಏಜೆನ್ಸಿಗಳು ಔಷಧ ಸರಬರಾಜಿನ ಜಿಎಸ್ ಟಿ ಇಲ್ಲದಿದ್ದರು ದರಪಟ್ಟಿಯಲ್ಲಿ ಆಯ್ಕೆಯಾಗಿವೆ.ಬಹುತೇಕ ಎಲ್ಲ ಖರೀದಿ ಪ್ರಕರಣಗಳಲ್ಲಿ ಜಿಎಸ್ ಟಿ ಸಂದಾಯ ಮಾಡದೆ ವಂಚಿಸಲಾಗಿದೆ.ಆದಾಯ ತೆರಿಗೆಯನ್ನು ಸಹ ಮೂಲದಲ್ಲಿ ಕಟಾಯಿಸದೆ ಸರಕಾರಕ್ಕೆ ವಂಚಿಸಲಾಗಿದೆ.
ತನಿಖಾ ಸಮಿತಿ ತನ್ನ ಶಿಫಾರಸ್ಸಿನಲ್ಲಿ ನಿಯಮಾನುಸಾರ ಟೆಂಡರ್ ನಡೆಸದೆ ಕೆಟಿಟಿಪಿ ಕಾಯ್ದೆ ಉಲ್ಲಂಘಿಸಲಾಗಿದೆ.ಜಿಎಸ್ ಟಿ ಹಾಗೂ ಆದಾಯ ತೆರಿಗೆ ಕಟಾಯಿಸದೆ ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗಿದೆ.ಸಂಬಂದಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ.
ಎರಡು ವರ್ಷಗಳ ಅವಧಿಯಲ್ಲಿ ೮೩ ಲಕ್ಷ ರೂಪಾಯಿಗಳ ಖರೀದಿ ಹಗರಣದ ತನಿಖಾ ವರದಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಕೈ ಸೇರಿದ್ದು ಯಾವ ಕ್ರಮ ಜರುಗಿಸುತ್ತಾರೋ ಕಾದು ನೋಡಬೇಕಿದೆ.