**ಪೌರಕಾರ್ಮಿಕರ ವೃತ್ತಿ ಸುರಕ್ಷತೆ, ಜೀವನ ಸುಧಾರಣೆಗೆ ಕ್ರಮ ಕೈಗೊಳ್ಳಿ**
**ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘ ಮನವಿ**
ಮೈಸೂರು, ನ.5– ರಾಜ್ಯದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರು, ಮ್ಯಾನ್ಹೋಲ್ ಸ್ಕ್ಯಾವೆಂಜರ್ಸ್ ಕ್ಷೇಮಾಭಿವೃದ್ಧಿ ನಿಟ್ಟಿನಲ್ಲಿ ಸಮಗ್ರ ಅಧ್ಯಯನ ನಡೆಸಿ, ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಸಲ್ಲಿಸಲು ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘವು ರಾಜ್ಯ ಸಫಾಯಿ ಕರ್ಮಚಾರಿ ಆಯೋಗವನ್ನು ಒತ್ತಾಯಿಸಿದೆ.
ಈ ಸಂಬಂಧ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಹಾಗೂ ಪ್ರಧಾನ ಕಾರ್ಯದರ್ಶಿ ದಿನೇಶ್ಕುಮಾರ್, ಪೌರಕಾರ್ಮಿಕರ ವೃತ್ತಿ ಸುರಕ್ಷತೆ ಹಾಗೂ ಜೀವನ ಸುಧಾರಣೆ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಒಂದಷ್ಟು ಸಲಹೆ ನೀಡಿದ್ದಾರೆ.
ವಿಶೇಷ ನೇಮಕಾತಿ ಅಡಿಯಲ್ಲಿ ನೇರ ನೇಮಕಾತಿಗೊಂಡಿರುವ ಖಾಯಂ ಪೌರಕಾರ್ಮಿಕರಿಗೆ ಸ್ಥಳೀಯ ನಿಧಿ ಹಾಗೂ ಸರ್ಕಾರದ ಹಣಕಾಸು ನಿಧಿ 70:30 ಅನುದಾನದ ಬದಲಾಗಿ ಖಜಾನೆಯಿಂದಲೇ ನೇರವಾಗಿ ವೇತನ ಜಾರಿಗೊಳಿಸಬೇಕು. ಹೊರಗುತ್ತಿಗೆಯಡಿ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಲೋಡರ್ಸ್, ಕ್ಲೀನರ್ಸ್, ಮನೆ ಮನೆ ಕಸ ಸಂಗ್ರಹಿಸುವ ಆಟೋ ಚಾಲಕರನ್ನು ಒಳಗೊಂಡಂತೆ ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಸಫಾಯಿ ಕರ್ಮಚಾರಿಗಳನ್ನು ಕಡ್ಡಾಯವಾಗಿ ನೇರ ಪಾವತಿ ವ್ಯವಸ್ಥೆಗೆ ಒಳಪಡಿಸಬೇಕು. ಇತರೇ ನೌಕರರಿಗೆ ನೀಡುತ್ತಿರುವ ಕನಿಷ್ಠ ವೇತನ ಹೊರತುಪಡಿಸಿ ಸ್ವಚ್ಛತಾ ಸಫಾಯಿ ಕರ್ಮಚಾರಿಗಳಿಗೆ ಪ್ರತ್ಯೇಕವಾಗಿ ಕನಿಷ್ಠ ವೇತನ 35,000 ರೂ. ನಿಗದಿ ಮಾಡಬೇಕು.
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಮೃತರಾದರೆ ಠೇವಣಿ ವಿಮಾ ಯೋಜನೆ (ಇಡಿಎಲ್ಐ) ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಆದ್ದರಿಂದ ಕಾರ್ಮಿಕ ಭವಿಷ್ಯ ನಿಧಿ ಇಲಾಖೆಯಿಂದ ಇನ್ಶೂರೆನ್ಸ್ ಹಣ ಪಡೆಯಲು ತಮ್ಮ ಆಯೋಗದಿಂದ ಪ್ರಚಾರ ಮಾಡಬೇಕು. ಇತರ ಸರ್ಕಾರಿ ನೌಕರರಿಗೆ ನೀಡುವ ಮಾದರಿಯಲ್ಲಿ ಪೌರಕಾರ್ಮಿಕರಿಗೂ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ಜಾರಿಯಾಗಬೇಕು. ಪೌರಕಾರ್ಮಿಕರಿಗೆ ಪಿಕೆಜೆವೈ ಗೃಹ ಭಾಗ್ಯದ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಲು ನೀಡುತ್ತಿರುವ ಏಳೂವರೆ ಲಕ್ಷ 20 ಲಕ್ಷ ರೂ.ಗೆ ಏರಿಕೆಯಾಗಬೇಕು. 5000 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕ ಎಂಬುದರ ಬದಲಾಗಿ 1000 ಅಥವಾ 2000 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರನ್ನು ನೇಮಿಸಬೇಕು. ಆದೇಶದನ್ವಯ ವಿಶೇಷವಾಗಿ ಎಲ್ಲಾ ಗ್ರಾಪಂ ಪೌರಕಾರ್ಮಿಕರಿಗೆ ಪಿಎಫ್ ಸೌಲಭ್ಯ, ಗ್ರಾಮ ಠಾಣಾ ಜಮೀನುಗಳಲ್ಲಿ ಸ್ವಂತಮನೆ ನಿರ್ಮಿಸಿಕೊಡುವುದು, ನಿವೃತ್ತಿ ಅಥವಾ ಮೃತರಾದ ಕಾರ್ಮಿಕರ ಕುಟುಂಬಗಳಿಗೆ 20 ತಿಂಗಳ ಉಪದಾನದ ಬದಲಾಗಿ 30 ತಿಂಗಳ ಉಪದಾನ ಕಡ್ಡಾಯವಾಗಿ ನೀಡಲು ಕಾಯ್ದೆ ರೂಪಿಸಬೇಕು. ನಗರಪಾಲಿಕೆ, ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಪೌರ ಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಮನೆ ಮನೆ ಕಸ ಸಂಗ್ರಹಿಸುವ ಆಟೋ ಚಾಲಕರ ಡೇಟಾ ಪ್ರಕಟಿಸಬೇಕು. ನೇರ ಪಾವತಿಯ ಪೌರ ಕಾರ್ಮಿಕರು ಸೇವೆಯಲ್ಲಿರುವಾಗಲೇ ಮೃತರಾದರೆ ಅವಲಂಬಿತ ಕುಟುಂಬದ ಸದಸ್ಯರಿಗೆ ಅನುಕಂಪದ ಹುದ್ದೆ ಹಾಗೂ 10 ಲಕ್ಷ ಹಿಡಿಗಂಟನ್ನು ಪರಿಹಾರವಾಗಿ ನೀಡುವ ಆದೇಶವನ್ನು ಅನುಷ್ಠಾನಗೊಳಿಸ ಬೇಕು. ನಗರಪಾಲಿಕೆ ಮತ್ತು ನಗರಸಭೆಗಳಲ್ಲಿ ಶೇ.100ರಷ್ಟು ಖಾಯಂ ಮಾಡಬೇಕು. ಪೌರಕಾರ್ಮಿಕರಿಗೆ ಗುಂಪು ಮನೆಗಳು ಹಾಗೂ ಬಹುಮಹಡಿ ಕಟ್ಟಡ ಮಾದರಿ ಮನೆಗಳ ಬದಲಾಗಿ 20×30 ಮತ್ತು 30×40 ಅಳತೆಯ ನಿವೇಶನ ನೀಡಿ, ಇತರ ನಾಗರಿಕರಂತೆ ಪ್ರತ್ಯೇಕ ಮನೆಗಳನ್ನು ನಿರ್ಮಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಡಬೇಕು. ಮುಜರಾಯಿ ಇಲಾಖೆಯ ಧಾರ್ಮಿಕ ದತ್ತಿ ಸಂಸ್ಥೆಗಳ ದೇವಾಲಯಗಳಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಸಫಾಯಿ ಕರ್ಮಚಾರಿಗಳು ಸೇವೆಯಲ್ಲಿ ಇರುವಾಗಲೇ ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
–


