ಮಂಡ್ಯದಲ್ಲಿ ದುರಂತ ಘಟನೆ: ರೈಲಿಗೆ ಸಿಲುಕಿ ವಿವಾಹಿತ ಮಹಿಳೆ ಮತ್ತು ಯುವಕ ಸಾವು!
ಮಂಡ್ಯ ನಗರದ ಹೊರವಲಯದಲ್ಲಿರುವ ವಿಸಿ ಫಾರಂ ರೈಲ್ವೆ ಗೇಟ್ ಸಮೀಪ ಶುಕ್ರವಾರ ಬೆಳಗ್ಗೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ವಿವಾಹಿತ ಮಹಿಳೆ ಹಾಗೂ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಸವಾಗಿದ್ದ ಸಹನಾ (25) ಮತ್ತು ರಾಹುಲ್ (23) ಎಂದು ಗುರುತಿಸಲಾಗಿದೆ.
ಸಹನಾ ಅವರು ಎಂಟು ವರ್ಷಗಳ ಹಿಂದೆ ವಿರೇಶ್ ಎಂಬ ಆಟೋ ಚಾಲಕನನ್ನು ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಹೆಣ್ಣು ಮಗು ಹಾಗೂ ಎರಡು ವರ್ಷದ ಗಂಡು ಮಗುವಿದೆ. ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ ಸಹನಾಗೆ, ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದ ರಾಹುಲ್ ಎಂಬ ಯುವಕನ ಪರಿಚಯವಾಗಿತ್ತು. ಈ ಪರಿಚಯ ಕ್ರಮೇಣ ಆತ್ಮೀಯತೆಗೆ ತಿರುಗಿದ್ದು, ಇಬ್ಬರ ನಡುವಿನ ಸಂಬಂಧದ ವಿಚಾರವಾಗಿ ಕುಟುಂಬದಲ್ಲಿ ಆಗಾಗ್ಗೆ ಮನಸ್ತಾಪ ಉಂಟಾಗುತ್ತಿತ್ತು ಎನ್ನಲಾಗಿದೆ.
ಈ ವಿಚಾರವಾಗಿ ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿತ್ತು. ಆದರೂ ದಂಪತಿ ನಡುವಿನ ವೈಮನಸ್ಸು ಮುಂದುವರಿದಿತ್ತು ಎನ್ನಲಾಗಿದೆ. ಕಳೆದ ಸೋಮವಾರವೂ ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಬಳಿಕ ಸಹನಾ ಬೆಂಗಳೂರಿನ ಮನೆಯಿಂದ ಹೊರಟು ಮಂಡ್ಯ ಜಿಲ್ಲೆಯ ಗುನ್ನಾಯಕನಹಳ್ಳಿಯಲ್ಲಿರುವ ಅಜ್ಜಿ ಮನೆಗೆ ತೆರಳಿದ್ದರು ಎನ್ನಲಾಗಿದೆ.
ಗುರುವಾರ ರಾಹುಲ್ ಕೂಡ ಗುನ್ನಾಯಕನಹಳ್ಳಿಗೆ ಬಂದಿದ್ದು, ಇಬ್ಬರೂ ಮುಂದಿನ ಕ್ರಮದ ಕುರಿತು ಚರ್ಚಿಸಿದ್ದರು. ಈ ನಡುವೆ ಕುಟುಂಬದ ಕಲಹ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಇಬ್ಬರೂ ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಮಂಡ್ಯದ ವಿಸಿ ಫಾರಂ ರೈಲ್ವೆ ಹಳಿ ಸಮೀಪ ಇಬ್ಬರೂ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸೂಚನೆ: ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಎದುರಾದಾಗ ಆತುರದ ನಿರ್ಧಾರ ಕೈಗೊಳ್ಳದೆ, ಕುಟುಂಬದವರು, ಆಪ್ತರು ಅಥವಾ ಸೂಕ್ತ ತಜ್ಞರ ನೆರವು ಪಡೆಯುವುದು ಅತ್ಯಂತ ಮುಖ್ಯ


