ಬೆಳಗಾವಿ: ಮೇಯರ್ ಸದಸ್ಯತ್ವ ರದ್ದು
ಸ್ವಂತ ಲಾಭಕ್ಕೆ ನಗರದ ಮಳಿಗೆ ದುರ್ಬಳಕೆ ಪಾಲಿಕೆ ಸದಸ್ಯನ ಸದಸ್ಯತ್ವವೂ ರದ್ದು
ಬೆಳಗಾವಿ: ಬೆಳಗಾವಿ ಮೇಯರ್
ಮಂಗೇಶ ಪವಾರ ಹಾಗೂ ಪಾಲಿಕೆ ಸದಸ್ಯ ಜಯಂತ ಜಾಧವ ಅವರ ಸದಸ್ಯತ್ವ ರದ್ದುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
‘ಪಾಲಿಕೆಯ ಬಿಜೆಪಿಯ ಸದಸ್ಯರಾದ ಜಯಂತ ಜಾಧವ (ವಾರ್ಡ್ ಸಂಖ್ಯೆ-23) ಮತ್ತು ಮಂಗೇಶ ಪವಾರ (ವಾರ್ಡ್ ಸಂಖ್ಯೆ-41) ಅವರು ನಗರದ ತಿನಿಸುಕಟ್ಟೆಯ ಮಳಿಗೆಗಳನ್ನು ತಮ್ಮ
ಪತ್ನಿಯರ ಹೆಸರಿನಲ್ಲಿ ಬಾಡಿಗೆಗೆ ಪಡೆದು, ಸ್ವಯಂ ಲಾಭ ಮಾಡಿಕೊಂಡಿದ್ದಾರೆ. ಈ ಅಕ್ರಮದ ಕಾರಣಕ್ಕಾಗಿ ಅವರ ಸದಸ್ಯತ್ವ ರದ್ದು ಮಾಡಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ 2024ರ ನವೆಂಬರ್‌ನಲ್ಲಿ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತ ಶೆಟ್ಟೆಣ್ಣವರ, ಸಂಜಯ ಇಬ್ಬರ ಸದಸ್ಯತ್ವ ರದ್ದುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್ ಮೊರೆ
ಹೋಗಿದ್ದರು. ಆದೇಶ ತಡೆಹಿಡಿದ ಹೈಕೋರ್ಟ್, 2025ರ ಮಾರ್ಚ್ ನಡೆದ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ಮಂಗೇಶ ಪವಾರ ಅವಿರೋಧವಾಗಿ ಮೇಯರ್ ಆಗಿ ಆಯ್ಕೆಯಾದರು.
ಈ ಪ್ರಕರಣದ ತನಿಖೆ ನಡೆಸಿ ಸೂಕ್ತ
ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ನ ಧಾರವಾಡ ಪೀಠ ಸರ್ಕಾರಕ್ಕೆ ಆದೇಶ ನೀಡಿತ್ತು. ವಿಚಾರಣೆ ನಡೆಸಿದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೀಪಾ ಚೋಳನ್. ಪ್ರಾದೇಶಿಕ ಆಯುಕ್ತರ ಆದೇಶವನ್ನೇ ಸಮರ್ಥನೆ ಮಾಡಿದ್ದಾರೆ.
‘ಈ ಇಬ್ಬರೂ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುವ ಮುನ್ನ ತಮ್ಮ ಪತ್ನಿಯರ ಹೆಸರಿನಲ್ಲಿ ವಾಣಿಜ್ಯ ಮಳಿಗೆ ಪಡೆದಿದ್ದರು. ಚುನಾಯಿತರಾದ ಬಳಿಕ ಅವುಗಳನ್ನು ಬಿಟ್ಟುಕೊಡಬೇಕಿತ್ತು. ಆದರೆ, ಇಬ್ಬರೂ ಕರ್ನಾಟಕ ಮುನ್ಸಿಪಲ್ ಕಾಯ್ದೆ (ಕೆಎಂಸಿ) ಉಲ್ಲಂಘಿಸಿದ್ದಾರೆ. ಇವರ ಸದಸ್ಯತ್ವ ರದ್ದು ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಅಕ್ರಮ ನಿರಂತರ:ಸ್ಥಳೀಯ ಸಂಸ್ಥೆಗಳ ಸದಸ್ಯರಾದವರು ತಮ್ಮ ಕುಟುಂಬದ ಅವಲಂಬಿತರ ಹೆಸರಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಸೇರಿದಂತೆ ಯಾವುದೆ ಅನುಕೂಲ ಪಡೆಯುವಂತಿಲ್ಲ.ಆದಾಗಿಯು ಕೆಲ ಸದಸ್ಯರು ತಮ್ಮ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ಗುತ್ತಿಗೆ ಸೇರಿದಂತೆ ಹಲವು ಅನುಕೂಲಗಳನ್ನು ಹೊಂದಿರುವುದು ಸರ್ವೆ ಸಾಮಾನ್ಯವಾಗಿದೆ.ಒಂದು ಕೈಯ್ಯಲ್ಲಿ ರಾಜಕೀಯ ಅಧಿಕಾರ ಮತ್ತೊಂದು ಕೈಯ್ಯಲ್ಲಿ ಗುತ್ತಿಗೆ ಹಿಡಿದಿರುವ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಈ ತೀರ್ಪು ಪಾಠವಾಗಲಿದೆ.