Saturday, August 22, 2026
spot_img

ಮಂಡ್ಯದಲ್ಲಿ ರಾಜಕಾಲುವೆ ಒತ್ತುವರಿ:ನಿಸ್ಸಾಹಯಕವಾಯಿತೆ ನಗರಸಭೆ!

ಮಂಡ್ಯದಲ್ಲಿ 67 ಆಸ್ತಿ ಮಾಲೀಕರಿಂದ ರಾಜಕಾಲುವೆ ಒತ್ತುವರಿ

 

ಮೊನ್ನೆ ಮೊನ್ನೆಯಷ್ಟೆ ಹೆದ್ದಾರಿಯ ಬದಿಗಳಲ್ಲಿ ಹೊಟ್ಟೆಪಾಡಿಗೆ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದ ಪುಟ್ಪಾತ್ ವ್ಯಾಪಾರಿಗಳ ಮೇಲೆ ಅಬ್ಬರಿಸಿ ಬೊಬ್ಬಿರಿದಿದ್ದ ಮಂಡ್ಯ ನಗರಸಭೆಯ ಅಧಿಕಾರಿಗಳು ರಾಜಕಾಲುವೆ ಒತ್ತುವರಿದಾರರ ಎದುರು ಅಸಹಾಯಕತೆಯ ಸೋಗು ತೋರುತ್ತಿದ್ದಾರೆ.

ಹೌದು ಮಂಡ್ಯ
ನಗರಸಭೆ ವ್ಯಾಪ್ತಿಯೊಳಗೆ 67 ಆಸ್ತಿ ಮಾಲೀಕರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ, ಎರಡೂ ದೊಡ್ಡ ಚರಂಡಿಗಳೂ(ಈ ಹಿಂದಿನ ರಾಜಕಾಲುವೆಗಳೇ ಈಗ ಚರಂಡಿಯಾಗಿವೆ) ಅಲ್ಲಲ್ಲಿ ಒತ್ತುವರಿಯಾಗಿವೆ. ಪ್ರಭಾವಿ ರಾಜಕಾರಣಿಗಳು, ಮುಖಂಡರೇ ಅತಿಕ್ರಮಣ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ಅಂತಿಮ ನೋಟಿಸ್ ಗಳನ್ನು ನೀಡಿದ್ದರೂ ಇದುವರೆಗೂ ಅತಿಕ್ರಮಣವನ್ನು ತೆರವುಗೊಳಿಸಿಲ್ಲ.

ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿರುವ 67 ಆಸ್ತಿ ಮಾಲೀಕರ ಪೈಕಿ 18 ಮಂದಿ ಆಸ್ತಿ ಮಾಲೀಕರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖ ಲಿಸಿದ್ದಾರೆ. ಇಬ್ಬರು ಆಸ್ತಿ ಮಾಲೀಕರು ಮೈಸೂರಿನ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ಪ್ರಕ ರಣ ದಾಖಲಿಸಿ ತಡೆಯಾಜ್ಞೆ ತಂದಿದ್ದಾರೆ. ಇವೆಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದಾಗಿ ತಿಳಿದುಬಂದಿದೆ.

ಒತ್ತುವರಿ ತೆರವಿಗೆ ಡೋಂಟ್ ಕೇರ್ ಎಂದ ಪ್ರಭಾವಿ ರಾಜಕಾರಿಣಿ

ಶಂಕರನಗರ ವ್ಯಾಪ್ತಿಯಲ್ಲಿ ಪ್ರಭಾವಿ ರಾಜಕೀಯ ಮುಖಂಡ ರೊಬ್ಬರು ಖಾತೆ ಸಂಖ್ಯೆ ಡಿ4/1725/3956 ರಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ವನ್ನು ನಿರ್ಮಿಸಿದ್ದಾರೆ. ಇದರಿಂದ ನೀರಿನ ಮುಕ್ತ ಹರಿವಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಬೆಂಗ ಳೂರಿನ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಇದರ ಬಗ್ಗೆ ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ರಾಜಕಾಲುವೆಯ ನಾಲಾದಲ್ಲಿ ಸಮೀಕ್ಷೆ ನಡೆಸಿದಾಗ ಕಾಲುವೆ ವ್ಯಾಪ್ತಿಯ ಭೂಮಿಯ ಒಂದು ಭಾಗದಲ್ಲಿ ಅತಿಕ್ರಮಣವಾಗಿರುವುದು ಕಂಡುಬಂದಿದೆ.

ಈ ವಿಷಯವಾಗಿ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿ ಅವರಿಂದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದ್ದರು ಯಾರೊಬ್ಬರು ಮೂಲ ದಾಖಲೆ ಸಲ್ಲಿಸಿಲ್ಲ.

ಅಶೋಕನಗರದಲ್ಲಿ ಪ್ರಾರಂಭಗೊಂಡು ಓಲ್ಡ್ ಟೌನ್ ಮೂಲಕ ನಾಲಬಂದವಾಡಿ ಹತ್ತಿರ ಹೆಬ್ಬಳ್ಳಕ್ಕೆ ಸೇರಿರುವ ದೊಡ್ಡ ಮೋರಿ ನಕಾಶೆ (ಎಡಚಿತ್ರ), ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಆರಂಭಗೊಂಡು ಶಂಕರನಗರ, ಗಾಂಧಿನಗರ, ಹೊಸಹಳ್ಳಿ ಕೆರೆ , ಹಾಲಹಳ್ಳಿ ಕೆರೆ ಮೂಲಕ ಗುತ್ತಲು ಕೆರೆ ಸೇರುವ ದೊಡ್ಡ ಮೋರಿ ನಕಾಶೆ

ಗಳನ್ನು ಪಡೆದು ಪರಿಶೀಲಿಸಿದಾಗ ಕಟ್ಟಡವನ್ನು ರಾಜ ಕಾಲುವೆಯ ಭೂಮಿಯಲ್ಲಿ ಕಾನೂನುಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಿರುವುದು ಕಂಡುಬಂದಿದೆ. ಬಳಿಕ ಆ ಜಾಗ ದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಖಾಲಿ ಮಾಡುವಂತೆ 15 ದಿನಗಳ ಗಡುವು ನೀಡಿ ಐದು ತಿಂಗಳಾದರೂ ಇದುವರೆಗೆ ತೆರವುಗೊಳಿಸಿಲ್ಲ. ಕಟ್ಟಡಗಳನ್ನು ತೆರವು ಗೊಳಿಸದಿದ್ದರೆ ನಗರಸಭೆಯಿಂದಲೇ ತೆರವುಗೊಳಿಸ ಲಾಗುತ್ತದೆ. ವೆಚ್ಚವನ್ನು ಆಸ್ತಿ ಮಾಲೀಕರಿಂದಲೇ ವಸೂಲಿ ಮಾಡುವ ಎಚ್ಚರಿಕೆ ನೀಡಿದ್ದರೂ ಡೋಂಟ್ ಕೇರ್‌ಎನ್ನುತ್ತಾ ಅಲ್ಲೇ ಮುಂದುವರೆದಿದ್ದಾರೆ.

ಡಿಜಿಪಿಎಸ್ ಉಪಕರಣದಿಂದ ಸಮೀಕ್ಷೆ: ಮಂಡ್ಯ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಬಳಿ ಇರುವ ದೊಡ್ಡ ಚರಂಡಿಗಳ ನಕ್ಷೆಯಲ್ಲಿ ದಾ ಖಲಿಸಿರುವ ಆಸ್ತಿ ಗುರುತುಗಳನ್ನು ಡಿಜಿಪಿಎಸ್ ಉಪ ಕರಣದ ಮೂಲಕ ಸಮೀಕ್ಷೆ ನಡೆಸಿ ಸಮೀಕ್ಷೆಯಲ್ಲಿರುವ ಅಂಶಗಳ ಆಧಾರದ ಮೇಲೆ ಕ್ಯಾಡ್ ಮುಖಾಂತರ

ಮ್ಯಾಪ್ ತಯಾರಿಸಿ ಇದನ್ನು ಉಪಗ್ರಹಗಳನ್ನು ಉಪಯೋಗಿಸಿ ವೀಕ್ಷಿಸುವಂತಹ ಗೂಗಲ್ ಮ್ಯಾಪ್ ಮೇಲೆ ಇಂಪೋಸ್ ಮಾಡಿ ಒತ್ತುವರಿಯಾಗಿರುವ ಸರ್ವೇ ನಂಬರ್‌ಗಳನ್ನು ತಿಳಿಸಲಾಗಿದೆ.

ಆದರೆ, ಒತ್ತುವರಿಯಾಗಿರುವ ಆಸ್ತಿ ವಿವರಗಳ ನಿರ್ದಿಷ್ಟ ಅಳತೆ ಮಾಹಿತಿಗಳನ್ನು ನೀಡಿಲ್ಲ. ನಂತರದಲ್ಲಿ ಒತ್ತುವರಿ ಪ್ರದೇಶಗಳಿಗೆ ನಗರಸಭೆ ಮತ್ತು ಇತರೆ ಇಲಾಖೆಗಳ ನೆರವಿನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನಿರ್ದಿಷ್ಟ ಒತ್ತುವರಿಯಾಗಿರುವ ಉದ್ದ, ಅಗಲ, ವಿಸ್ತೀರ್ಣಗಳ ಸ್ವರೂಪ, ಒತ್ತುವರಿದಾರರ ಹೆಸರು, ವಿಳಾಸಗಳೊಡನೆ ಕರ್ನಾಟಕ ಪುರಸಭೆ ಕಾಯ್ದೆ 1964 ರೀತ್ಯಾ ಒತ್ತುವರಿ ತೆರವುಗೊಳಿಸಲು ನಗರಸಭೆಗೆ ಸೂಚಿಸಲಾಗಿತ್ತು. ಅದರಂತೆ ನಗರಸಭೆ ಅಧಿಕಾರಿಗಳು ಕ್ರಮ ವಹಿಸಿ ಆಸ್ತಿ ಮಾಲೀಕರಿಗೆ ನೋಟಿಸ್ ಕೂಡ ಜಾರಿಗೊಳಿಸಿದ್ದರು. ಒತ್ತುವರಿ ಮಾಡಿಕೊಂಡಿರುವ 67 ಆಸ್ತಿ ಮಾಲೀಕರಲ್ಲಿ 20 ಮಂದಿ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.

ರಾಜಕಾಲುವೆ ಮತ್ತು ಮಳೆ ನೀರು ಚರಂಡಿ ಒತ್ತುವರಿ ಮಾಡಿಕೊಂಡಿರುವ ಆಸ್ತಿ ಮಾಲೀಕರಿಗೆ ನಾವು ಈಗಾಗಲೇ ಅಂತಿಮ ನೋಟಿಸ್‌ ಕೂಡ ಜಾರಿಗೊಳಿಸಿದ್ದೇವೆ. ಆದರೆ, ಅದರಲ್ಲಿ ಹಲವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತಡೆಯಾಜ್ಞೆ ತಂದಿದ್ದಾರೆ. ಅದೀಗ ವಿಚಾರಣೆ ಹಂತದಲ್ಲಿರುವುದರಿಂದ ಸದ್ಯಕ್ಕೆ ಯಾವುದೇ ಕ್ರಮ ವಹಿಸಲಾಗುತ್ತಿಲ್ಲ. ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ಅದರಂತೆ ಕ್ರಮ ವಹಿಸುತ್ತೇವೆ.

ಯು.ಪಿ.ಪಂಪಾಶ್ರೀ ಆಯುಕ್ತರು, ನಗರಸಭೆ

 

 

ಎರಡು ಮಳೆ ನೀರು ಚರಂಡಿ ಒತ್ತುವರಿ: ಮಂಡ್ಯ

ನಗರಸಭೆ ವ್ಯಾಪ್ತಿಯಲ್ಲಿ ಗುರುತಿಸಿರುವ ಏಳು ದೊಡ್ಡ ಮೋರಿ (ಮಳೆ ನೀರು ಚರಂಡಿ)ಗಳಲ್ಲಿ ಎರಡು ಮಳೆ ನೀರು ಚರಂಡಿಗಳು ಒತ್ತುವರಿಯಾಗಿರುವುದು ಕಂಡುಬಂದಿದೆ. ಚಾಮುಂಡೇಶ್ವರಿ ನಗರದಲ್ಲಿ ಪ್ರಾರಂಭಗೊಂಡು ಶಂಕರನಗರ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ

ಚರಂಡಿಗಳ ಮೂಲಕ ಗಾಂಧಿನಗರ ಹೊಸಹಳ್ಳಿ, ಹಾಲಹಳ್ಳಿ ಮೂಲಕ ಗುತ್ತಲು ಕೆರೆ ಸೇರುವಂತಹ ಮೂರು ಹಂತದ ಚರಂಡಿಗಳು ಹಾಗೂ ಅಶೋಕನಗರದಲ್ಲಿ ಪ್ರಾರಂಭಗೊಂಡು ಓಲ್ಡ್ ಟೌನ್ ಮೂಲಕ ನಾಲಬಂದವಾಡಿ ಹತ್ತಿರ ಹೆಬ್ಬಳ್ಳಕ್ಕೆ ಸೇರುವ ರಾಜಕಾಲುವೆಗಳು ಒತ್ತುವರಿಯಾಗಿರುವುದು ಕಂಡುಬಂದಿದೆ. ಇದರ ಜೊತೆಗೆ ತಾವರೆಗೆರೆಯಲ್ಲಿ ಪ್ರಾರಂಭಗೊಂಡು ಸ್ವರ್ಣಸಂದ್ರದ ಮೂಲಕ ಮೈಷುಗರ್‌ ಶಾಲೆ ಹಿಂಭಾಗದಲ್ಲಿ ಹಾದು ಹೆಬ್ಬಳ್ಳಕ್ಕೆ ಸೇರುವ ಒಂದು ದೊಡ್ಡ ಚರಂಡಿಯ ನಕಾಶೆಯು ಶಿಥಿಲವಾಗಿದ್ದು, ಅದನ್ನು ಪುನರ್‌ನಿರ್ಮಾಣ ಮಾಡಿಕೊಂಡು ಅಳತೆ ಮಾಡಬೇಕಾಗಿರುತ್ತದೆ ಎಂದು ವರದಿ ನೀಡಿದ್ದಾರೆ.

ಈ ನಡುವೆ ನಗರಸಭೆ ಸಹ ಪ್ರಭಾವಿಗಳ ಮತ್ತು ತೆರವಿಗೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ರಾಜಕಾಲುವೆಯ ಒತ್ತುವರಿ ಪ್ರಮಾಣವನ್ನು ನಮೂದಿಸದೆ ನಗರಸಭೆ ಅಡ್ಡ ಗೋಡೆ ಮೇಲೆ ದೀಪ ಇಟ್ಟು ಒತ್ತುವರಿದಾರರಿಗೆ ಅನುಕೂಲ ಮಾಡಿಕೊಟ್ಟಿದೆ ಎನ್ನಲಾಗಿದೆ.

ಇದಲ್ಲದೆ ನ್ಯಾಯಾಲಯದ ಯಾವುದೆ ಆದೇಶ ಪಡೆಯದ ಬಾಕೀ ಒತ್ತುವರಿದಾರರ ಮೇಲೂ ಯಾವುದೆ ಕ್ರಮ ಜರುಗಿಸಲು ನಗರಸಭೆ ಮುಂದಾಗಿಲ್ಲ.

ಇದರ ಪರಿಣಾಮವಾಗಿ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆ ಸಂದಿಗೊಂದಿಗಳಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ.

ನ್ಯಾಯಾಲಯದಲ್ಲಿ ಸಮರ್ಪಕವಾಗಿ ಪ್ರಕರಣ ನಿರ್ವಹಿಸಿ ರಾಜಕಾಲುವೆ ಒತ್ತುವರಿ ತೆರವುಗೊಳಿಸುವುದೆ ಇಲ್ಲವೆ ಉಳಿದ ಪ್ರಕರಣಗಳಂತೆ ನಗರಸಭೆ ಇದನ್ನು ಹಳ್ಳ ಹಿಡಿಸುವುದೆ ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!