ಮಂಡ್ಯ:ಮಾ:೨೭.ಮಂಡ್ಯದ ಕೃಷಿ ವಿಶ್ವವಿದ್ಯಾಲಯವು ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ ಜಿಲ್ಲೆಗಳನ್ನೊಳಗೊಂಡಂತಿದ್ದು, ಹಾಸನದ ರಾಜಕಾರಣಿಗಳು ಹಾಸನ ಕೃಷಿ ಕಾಲೇಜು ಮಾನ್ಯತೆಯನ್ನು ಬೆಂಗಳೂರಿ ಕೃಷಿ ವಿವಿಯಲ್ಲೇ ಉಳಿಸಬೇಕೆಂದು ಪಟ್ಟು ಹಿಡಿದಿರುವುದು ಸರಿಯಲ್ಲ ಎಂದು ಕರ್ನಾಟಕ ಸಂಘದ ಅಧ್ಯಕ್ಷ, ಹಿರಿಯ ಸಾಹಿತ್ಯ ಚಿಂತಕ ಪ್ರೊ.ಜಯಪ್ರಕಾಶ್‌ಗೌಡ ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಮಂಡ್ಯ ವಿ.ಸಿ ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆ ಮಾಡಿರುವುದು ಅಭಿನಂದನಾರ್ಹ, ಹಾಸನದ ರಾಜಕಾರಣಿಗಳು ಬೆಂಗಳೂರು ವಿವಿಯಲ್ಲೆ ಕೃಷಿ ಕಾಲೇಜು ಮಾನ್ಯತೆ ಮುಂದುವರೆಸಲು ಶಾಸನ ಸಭೆಯಲ್ಲಿ ಪ್ರತಿಪಾದಿಸಿ, ರಾಜ್ಯಪಾಲರಿಗೆ ಮನವಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕೃಷಿ ವಿವಿ ಸ್ಥಾಪನೆಗೂ ಮುನ್ನವೇ ಕೋಲ್ಮನ್ ಅವರು ವಿ.ಸಿ.ಫಾರ್ಮನ್ನು ಸಂಶೋಧನಾ ಕೇಂದ್ರವನ್ನಾಗಿ ರೂಪಿಸಿ ಆಗಲೇ ೬೦೦ ಎಕರೆ ಭೂ ಪ್ರದೇಶ ನೀಡಿದ ಮೈಸೂರು ಅರಸರನ್ನು ಮರೆಯುವಂತಿಲ್ಲ. ಮಂಡ್ಯದ ವಿ.ಸಿ ಫಾರಂನಲ್ಲಿ ನಡೆದಿರುವ ಸಂಶೋಧನೆಗೆ ವಿಶ್ವಮಾನ್ಯತೆ ದೊರೆತಿದ್ದು, ಜಾಗತಿಕ ಪೆಟೆಂಟ್ ಕೂಡಾ ಲಭಿಸಿದೆ ಎಂದು ಹೇಳಿದರು.
ಇಂತಾದರೂ ಹಾಸನ ಕೃಷಿ ಕಾಲೇಜನ್ನು ಮಂಡ್ಯ ಕೃಷಿ ವಿವಿ ವ್ಯಾಪ್ತಿಗೆ ತರದೇ ಹಾಸನ ಜಿಲ್ಲೆಯನ್ನು ಮಂಡ್ಯ ಕೃಷಿ ವಿವಿಯ ಹೊರಗುಳಿಯುವಂತೆ ಮಾಡಲು ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿಯೇ ಮನವಿ ಸಲ್ಲಿಸಲು ಮುಂದಾಗಿರುವುದು ಅಘಾತವನ್ನುಂಟು ಮಾಡಿದೆ ಎಂದರು.
ಹೆಚ್.ಡಿ.ದೇವೇಗೌಡರು, ಮಂಡ್ಯದಿಂದ ಗೆದ್ದು ಕೇಂದ್ರ ಮಂತ್ರಿಯಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದ ಬಗ್ಗೆ ಅತ್ಯಂತ ಪ್ರಶಂಸನೀಯವಾಗಿ ಮಾಡುಗಳನ್ನಾಡಿದ್ದಾರೆ. ಹಾಸನ ಮತ್ತು ಮಂಡ್ಯ ತಮ್ಮೆರಡು ಕಣ್ಣುಗಳೆಂದು, ರಾಜಕೀಯ ಪುನರ್‌ಜನ್ಮ ನೀಡಿದ್ದು ಮಂಡ್ಯ ಜಿಲ್ಲೆ ಅಂತಲೂ ಹಾಡಿ ಹೊಗಳಿದ್ದಾರೆ. ಹೀಗಿರುವಾಗಿ ಹಾಸನ ಕೃಷಿ ಕಾಲೇಜು ಮಂಡ್ಯ ಕ್ಕೆ ಸೇರ್ಪಡೆಗೊಳಿಸುವುದನ್ನು ತಡೆಯುವುದು ಮಂಡ್ಯಕ್ಕೆ ಮಾಡುವ ಅಪಚಾರ ಎಂದು ಬಣ್ಣಿಸಿದರು.
ರಾಜಕೀಯವಾಗಿ ಮಂಡ್ಯ ಜಿಲ್ಲೆ ದೇವೇಗೌಡರ ಕುಟುಂಬ ಪೋಷಿಸುತ್ತಿದ್ದು, ಈ ಸಂಬಂಧ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರ ನಿಲುವನ್ನು ಪ್ರಶ್ನಿಸಬೇಕಿದೆ. ಶೀಘ್ರವಾಗಿ ಈ ಸಂಬಂಧ ಮಾತನಾಡಿ, ಹಾಸನದ ರಾಜಕಾರಣಿಗಳ ಬಾಯಿ ಮುಚ್ಚಿಸಿ, ನಿಲುವು ಘೋಷಿಸುವಂತೆ ಒತ್ತಾಯಿಸಿದರು.
ಮಂಡ್ಯ ವಿಶ್ವವಿದ್ಯಾಲಯ ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸುವ ಸರ್ಕಾರದ ಪ್ರಸ್ತಾವನೆಗೆ ವಿರುದ್ಧವಾಗಿ ಶಾಸಕ ರವಿಕುಮಾರ್‌ಗೌಡ ಬದ್ದತೆ ಹಾಗೂ ಒಲವು ಪ್ರಶಂಸನೀಯ, ಅದನ್ನು ಉಳಿಸಿ ಬೆಳೆಸುವ ಅಗತ್ಯ ಎಲ್ಲರ ಮೇಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎರಡೂ ವಿವಿಗಳನ್ನು ಉಳಿಸಿ ಬೆಳೆಸಲು ತೊಡಗಿಕೊಳ್ಳುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಕೆ.ಆರ್.ಪೇಟೆ ಕಸಾಪ ಮಾಜಿ ಅಧ್ಯಕ್ಷ ಸೋಮಶೇಖರ್ ಇದ್ದರು.