ಹಾವೇರಿ:ಜೂ೨೭. ಫೋರೆನ್ಸಿಕ್ ವರದಿಯನ್ನು ತಿರುಚಿ ಆಸ್ಪತ್ರೆ ಖಾಸಗಿ ಆಸ್ಪತ್ರೆ ಪರವಾಗಿ ವರದಿ ನೀಡಲು ಹಣಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವಾಗಲೇ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನ್ಯಾಯವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮತ್ತೊಬ್ಬ ವ್ಯಕ್ತಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ನಗರದ ಚಿರಾಯು ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.
ಸಹಾಯಕ ಪ್ರಾಧ್ಯಾಪಕ ಗುರುರಾಜ ಭೀಮರಾವ ಬಿರಾದಾರ ಹಾಗೂ ಖಾಸಗಿ ವ್ಯಕ್ತಿ ಹಾವೇರಿ ನಗರದ ಇಜಾರಿ ಲಕಮಾಪುರದ ಚನ್ನಬಸಯ್ಯ ಶಂಕ್ರಯ್ಯ ಕುಲಕರ್ಣಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು.
ನಗರದ ಚಿರಾಯು ಆಸ್ಪತ್ರೆಯಲ್ಲಿ ಏ. 29ರಂದು ವಂದನಾ ತುಪ್ಪದ ಎಂಬ ಬಾಲಕಿ ಮೃತಪಟ್ಟಿದ್ದಳು. ಈ ಕುರಿತು ಬಾಲಕಿ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ದೂರು ಸಲ್ಲಿಸಿದ್ದು, ಈ ಕುರಿತು ಮೃತ ಬಾಲಕಿ ಎಫ್ ಎಸ್‌ಎಲ್ ವರದಿ ಕೋರಿ ಚಿರಾಯು ಆಸ್ಪತ್ರೆಯ ವ್ಯವಸ್ಥಾಪಕ ಮಲ್ಲೇಶಪ್ಪ ಮಾಸಣಗಿ ಅವರು, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನ್ಯಾಯ ವೈದ್ಯ ಶಾಸ್ತ್ರ ವಿಭಾಗವನ್ನು ಕೋರಿದ್ದರು. ಆದರೆ ಆಸ್ಪತ್ರೆಯ ಪರವಾಗಿ ಎಫ್‌ಎಸ್‌ಎಲ್ ವರದಿ ನೀಡುವುದಾಗಿ ತಿಳಿಸಿದ ಆರೋಪಿತರು ಚಿರಾಯು ಆಸ್ಪತ್ರೆಯ ವ್ಯವಸ್ಥಾಪಕ ಮಲ್ಲೇಶಪ್ಪ ಮಾಸಣಗಿ ಅವರಲ್ಲಿ ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಾತುಕತೆ ನಡೆಸಿ ಅಂತಿಮವಾಗಿ ₹3
ಲಕ್ಷಕ್ಕೆ ನಿಗದಿ ಮಾಡಿಕೊಂಡು, ಈ ಬಗ್ಗೆ ಮಲ್ಲೇಶಪ್ಪ ಮಾಸಣಗಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಖಾಸಗಿ ಆಸ್ಪತ್ರೆಯ ಪರವಾಗಿ ಎಫ್‌ಎಸ್‌ಎಲ್ ವರದಿ ನೀಡಲು ಹಾಗೂ ಮಾತುಕತೆಯಂತೆ ಲಂಚದ ಹಣ ಪಡೆಯಲು ಆರೋಪಿತರು ಚಿರಾಯು ಆಸ್ಪತ್ರೆಗೆ ಶುಕ್ರವಾರ ಆಗಮಿಸಿ ಲಂಚದ ಹಣ ರೂ 3 ಲಕ್ಷ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಧುಸೂದನ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ದಾದಾವಲಿ ಕೆ.ಎಚ್., ಮಂಜುನಾಥ ಪಂಡಿತ್, ಬಸವರಾಜ ಹಳಬಣ್ಣನವರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಇಬ್ಬರನ್ನೂ ಸಹ ದಸ್ತಗಿರಿ ಮಾಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.