ಜಮೀನು ಕೆಲಸದ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ, ವೀಡಿಯೋ ಮಾಡಿ ಬ್ಲಾಕ್‌ಮೇಲ್: ಗ್ರಾಮ ಆಡಳಿತಾಧಿಕಾರಿ ಬಂಧನ
ನಾಗಮಂಗಲ: ಜಮೀನು ಕೆಲಸ ಮಾಡಿಕೊಡುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ವೀಡಿಯೋ ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಕದಬಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿಯನ್ನು ಬೆಳ್ಳೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ಮರಿಸ್ವಾಮಿ ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಕದಬಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿಯಾಗಿ (VAO) ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಗೊಂಡೇನಹಳ್ಳಿ ವೃತ್ತದಲ್ಲಿದ್ದಾಗ ಅಣಕನಹಳ್ಳಿ ಗ್ರಾಮದ ಸಂತ್ರಸ್ಥ ಮಹಿಳೆಯ ಪರಿಚಯವಾಗಿತ್ತು.
ಸಂತ್ರಸ್ಥ ಮಹಿಳೆ ಜಮೀನಿನ ಕೆಲಸದ ನಿಮಿತ್ತ ಸಹಾಯ ಕೇಳಲು ಬಂದಾಗ, ಕೆಲಸ ಮಾಡಿಕೊಡುವುದಾಗಿ ನಂಬಿಸಿದ ಮರಿಸ್ವಾಮಿ ಆಕೆಯನ್ನು ಮನೆಗೆ ಕರೆಸಿಕೊಂಡಿದ್ದನು. ಬಳಿಕ ಆಕೆಗೆ ಮತ್ತೇರಿಸುವ ಜ್ಯೂಸ್ ನೀಡಿ ಅತ್ಯಾಚಾರ ಎಸಗಿದ್ದನೆನ್ನಲಾಗಿದೆ. ಅಷ್ಟಕ್ಕೇ ನಿಲ್ಲಿಸದೆ, ಈ ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡು, ಅದನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಾ ನಿರಂತರ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ ೧೬ ರಂದು ಸಂತ್ರಸ್ತ ಮಹಿಳೆ ಅರಣಿ ಪಂಚಾಯಿತಿಯಲ್ಲಿ ಎಸ್‌ಐಆರ್ ಕೆಲಸದಲ್ಲಿ ನಿರತರಾಗಿದ್ದಾಗ, ಅಲ್ಲಿಗೆ ಬಂದ ಆರೋಪಿ ಮರಿಸ್ವಾಮಿ ಆಕೆಯ ಕುತ್ತಿಗೆಯಲ್ಲಿದ್ದ ೪೦ ಗ್ರಾಂ ಚಿನ್ನದ ಸರ ಹಾಗೂ ಹೊಂಡಾ ಡಿಯೋ ಸ್ಕೂಟರನ್ನು ಬಲವಂತವಾಗಿ ಕಸಿದುಕೊಂಡು ಹೋಗಿದ್ದನು. ಮಾರನೇ ದಿನ, ಅಂದರೆ ಸೆಪ್ಟೆಂಬರ್ ೧೭ ರಂದು ಮಂಜುಳ ಎಂಬುವರೊಂದಿಗೆ ಸೇರಿಕೊಂಡು ಸಂತ್ರಸ್ತೆಯ ಪತಿ ನಾಗೇಶ್ ಅವರ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ನಿರಂತರವಾಗಿ ಜೀವ ಬೆದರಿಕೆ ಹಾಕುತ್ತಾ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪಿಯ ವಿರುದ್ಧ ಸಂತ್ರಸ್ಥೆ ಧೈರ್ಯ ಮಾಡಿ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಗ್ರಾಮ ಆಡಳಿತಾಧಿಕಾರಿ ಮರಿಸ್ವಾಮಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.


