ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಮಿತಿ ರಚನೆ
ಬೆಂಗಳೂರು: ‘ರಾಜ್ಯದಲ್ಲಿ ಅವಧಿ ಮುಗಿದು ಚುನಾವಣೆ ನಡೆಯಬೇಕಿರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವಾರ್ಡ್ವಾರು ಮೀಸಲಾತಿ ನಿಗದಿಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
‘ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ವಾರು ಮೀಸಲಾತಿಯ ಅಂತಿಮ ಅಧಿಸೂಚನೆಯನ್ನು ತುರ್ತಾಗಿ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೇರಿದಂತೆ ಇತರೆ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಅನು ಶಿವರಾಮನ್ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿ, ‘ವಾರ್ಡ್ವಾರು ಮೀಸಲಾತಿ ನಿಗದಿಪಡಿಸಲು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿರುವ ಸಮಿತಿ ರಚಿಸಿ 2026ರ ಅಕ್ಟೋಬರ್ 3ರಂದು ಅಧಿಸೂಚನೆ ಹೊರಡಿಸಲಾಗಿದೆ’ ಎಂದು ತಿಳಿಸಿದರು.
‘ವಾರ್ಡ್ವಾರು ಮೀಸಲು ನಿಗದಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವ ಕಾರಣ ನ್ಯಾಯಪೀಠ ಈ ಅಂಶವನ್ನು ದಾಖಲಿಸಿಕೊಂಡು ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.
ಇದಕ್ಕೆ ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹೈಕೋರ್ಟ್ ವಕೀಲೆ ವೈಶಾಲಿ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದರಾದರೂ ಅಂತಿಮವಾಗಿ ನ್ಯಾಯಪೀಠ, ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಿತು. ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ವಾರು ಮೀಸಲಾತಿ ನಿಗದಿಗೆ ರಾಜ್ಯ ಸರ್ಕಾರ 2026ರ ಸೆಪ್ಟೆಂಬರ್ 16ರಂದು ಅಧಿಸೂಚನೆ ಹೊರಡಿಸಿತ್ತು.


