*ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ.*
*ಅನುದಾನಿತ ಶಿಕ್ಷಕ, ನೌಕರರಿಂದ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ*
ಮಂಡ್ಯ: ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಮರುಜಾರಿಗೆ ಒತ್ತಾಯಿಸಿ, ಇದೇ ನವೆಂಬರ್ 16 ರಿಂದ 23 ರವರೆಗೆ ಮೈಸೂರು ನಗರದ ಸುತ್ತೂರು ಕ್ಷೇತ್ರ ಶಾಖಾಮಠದಿಂದ ಬೆಂಗಳೂರಿನವರೆಗೆ ಬನ್ನೂರು, ಕಿರುಗಾವಲು, ಮಳವಳ್ಳಿ, ಮುಖ್ಯಮಂತ್ರಿಗಳ ಸ್ವ ಕ್ಷೇತ್ರ ಕನಕಪುರ ಮಾರ್ಗವಾಗಿ ಸುಮಾರು 160 ಕಿಮೀ ಬೆಂಗಳೂರು ಫ್ರೀಡಂ ಪಾರ್ಕ್ ತಲುಪುವವರೆಗೆ ರಾಜ್ಯದ ಎಲ್ಲಾ ಅನುದಾನಿತ ನೌಕರರು ಪಾದಯಾತ್ರೆ ನಡೆಸಲಿದ್ದಾರೆ ಎಂದು ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಿವಣ್ಣಮಂಗಲ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಪಾದಯಾತ್ರೆ ನಂತರ
ಅನುದಾನಿತ ಶಾಲಾ ಕಾಲೇಜುಗಳ ನೌಕರರ ಮುಖ್ಯ ಬೇಡಿಕೆಗಳಾದ,
ಅನುದಾನರಹಿತ ಸೇವಾ ಅವಧಿಯನ್ನು ಪರಿಗಣಿಸಿ ಹಳೆಯ ಪಿಂಚಣಿ ನೀಡಬೇಕೆಂಬ ಹೈಕೋರ್ಟ್ ಆದೇಶವನ್ನು ಯಥಾವತ್ ಜಾರಿಗೆ ತರುವುದು ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಮೆಲ್ಮನವಿ ಸಲ್ಲಿಸುವುದನ್ನು ಕೈ ಬಿಡುವುದು, ಆಡಳಿತಪಕ್ಷ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಹಾಕಿಕೊಂಡಿರುವಂತೆ ಎಲ್ಲಾ ಅನುದಾನಿತ ನೌಕರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವುದು, ಎಲ್ಲಾ ಅನುದಾನಿತ ನೌಕರರಿಗೂ ಸರ್ಕಾರಿ ನೌಕರರಿಗೆ ಸರಿಸಮನಾಗಿ ಆರೋಗ್ಯಸಂಜೀವಿನಿ ವಿಮೆಯನ್ನು ಜಾರಿಗೆ ತರುವುದು, ಅನುದಾನಿತರ ಇನ್ನಿತರ ಜ್ವಲಂತ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವುದು (ವೇತನ ವೇತನ ತಡೆಹಿಡಿಯುವಿಕೆ, ಮಾನ್ಯತೆ ನವೀಕರಣ ಇತ್ಯಾದಿ) ಮುಂತಾದ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು, ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಹಾಗೂ 2006 ಪೂರ್ವದ ಪಿಂಚಣಿ ವಂಚಿತರ ವೇದಿಕೆ ಸಂಘಟನೆಗಳು ಒಟ್ಟಾಗಿ ಬೇಡಿಕೆಗಳು ಈಡೇರುವವರೆಗೂ
ಅನಿರ್ದಿಷ್ಟಾವಧಿ ಹೋರಾಟವನ್ನು ಮಾಡುತ್ತಿದ್ದು, ರಾಜ್ಯದ ಎಲ್ಲಾ ಅನುದಾನಿತ ನೌಕರರು ಅದರಲ್ಲೂ ಮಂಡ್ಯ ಜಿಲ್ಲೆಯ ಅನುದಾನಿತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ನಂತರ ಮಾತನಾಡಿದ ಮಂಡ್ಯ ಜಿಲ್ಲಾಧ್ಯಕ್ಷ ಶಿವಲಿಂಗೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಸತೀಶ್ ಬಾಬುರವರು, ಈಗಾಗಲೇ ರಾಜ್ಯದ ಬಜೆಟ್ ಸಿದ್ಧತೆ ಪ್ರಾರಂಭವಾಗಿದ್ದು, ಈ ಸರ್ಕಾರದ ಪೂರ್ಣ ಪ್ರಮಾಣದ ಕಡೆಯ ಬಜೆಟ್ ಇದಾಗಿದ್ದು, ಈ ಬಾರಿ ಮೈಮರೆತರೆ ಪುನಃ ಹಳೆಯ ಪಿಂಚಣಿ ಕನಸನ್ನು ಬಿಟ್ಟುಬಿಡಬೇಕಾಗುತ್ತದೆ, ಆದ್ದರಿಂದ ಪ್ರತಿಯೊಬ್ಬ ನೌಕರನು ಈ ಹೋರಾಟದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ತಿಳಿಸಿದ್ದಾರೆ.


