ಹೊರಗುತ್ತಿಗೆ ನೌಕರರಿಗೆ ಮತ್ತೆ ಕೈಕೊಟ್ಟ ಸಿದ್ದರಾಮಯ್ಯ!
ಮೇ ೧ರ ವಿಶ್ವ ಕಾರ್ಮಿಕರ ದಿನಾಚರಣೆಯಂದು ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಬಗೆಯ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿಗ ಸಿದ್ದರಾಮಯ್ಯನವರ ಘೋಷಣೆ ಮತ್ತೊಮ್ಮೆ ಹುಸಿಯಾಗುವುದರೊಂದಿಗೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿ ಖಾಯಂ ನಿರೀಕ್ಷೆ ಮರಳಿ ನಿರೀಕ್ಷೆಯಾಗಿಯೆ ಉಳಿದಂತಾಗಿದೆ.
ರಾಜ್ಯದಲ್ಲಿ ೨೦೧೭ ರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರನ್ನು ನೇರಪಾವತಿಗೆ ತರಲಾಯಿತು.ನಂತರದಲ್ಲಿ ಕ್ರಮವಾಗಿ ೨೦೧೭ ೨೦೨೨ ೨೦೨೫ ರಲ್ಲಿ ಒಟ್ಟು ಮೂರು ಬಾರಿ ಕಸ ಗುಡಿಸುವ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಯಿತು.
ಆದರೆ ಪೌರಕಾರ್ಮಿಕರ ಜತೆಯಲ್ಲಿ ಸ್ವಚ್ಚತೆ ಹಾಗೂ ಕುಡಿಯುವ ನೀರು ವಿಭಾಗದಲ್ಲಿ ತೊಡಗಿಕೊಂಡ ಹತ್ತು ಸಾವಿರಕ್ಕು ಹೆಚ್ಚು ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಪದ್ದತಿಯಲ್ಲೆ ಉಳಿಸಲಾಯಿತು.
ಈ ಹೊರಗುತ್ತಿಗೆ ನೌಕರರನ್ನು ಕನಿಷ್ಟ ನೇರಪಾವತಿಗೆ ತರಲು ಸಹ ರಾಜ್ಯ ಸರಕಾರ ಯಾವುದೇ ಇಚ್ಚಾಶಕ್ತಿ ತೋರಲಿಲ್ಲ.
ಕಡೇಗೆ ಪೌರಕಾರ್ಮಿಕರ ಹೋರಾಟದಿಂದ ಪ್ರತ್ಯೇಕ ದಾರಿ ತುಳಿದ ಹೊರಗುತ್ತಿಗೆ ನೌಕರರು ಹತ್ತು ಹಲವು ಹೋರಾಟಗಳ ಮುಖಾಂತರ ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಯಾದರು.
ಇದರ ಪರಿಣಾಮ ರಾಜ್ಯ ಸರಕಾರ ಅನಿವಾರ್ಯವಾಗಿ ಎರಡು ಬಾರಿ ನೇರಪಾವತಿ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಮಂಡಿಸಿತು.ಆದರೆ ಮಂಜೂರಾದ ಹುದ್ದೆಗಳು ಲಭ್ಯವಿಲ್ಲದಿದ್ದರು ಬಿಬಿಎಂಪಿಯಲ್ಲಿ ಸೂಪರ್ ನ್ಯೂಮರರಿ ಹುದ್ದೆಗಳೆಂದು ಪರಿಗಣಿಸಿ ಹನ್ನೆರಡು ಸಾವಿರ ಪೌರಕಾರ್ಮಿಕರ ಖಾಯಂಗೆ ಅನುಮತಿ ಕೊಟ್ಟ ಹಣಕಾಸು ಇಲಾಖೆ ಅದೇ ಹೊರಗುತ್ತಿಗೆ ನೌಕರರ ನೇರಪಾವತಿಗೆ ಅನುಮತಿ ಕೊಡಲು ನಿರಾಕರಿಸಿತು.
ಈ ನಿರಾಕರಣೆಯ ಹಿಂದೆ ಗುತ್ತಿಗೆ ಏಜೆನ್ಸಿಗಳ ಲಾಭಿ ಜೊತೆಗೆ ಕೆಲ ಶಕ್ತಿಗಳು ಹೊರಗುತ್ತಿಗೆ ನೌಕರರು ನೇರಪಾವತಿಯಾಗದಂತೆ ನೋಡಿಕೊಂಡವು.ಪ್ರತಿ ಹೋರಾಟದ ಸಂಧರ್ಭದಲ್ಲು ಹೊರಗುತ್ತಿಗೆ ನೌಕರರ ಬೇಡಿಕೆಗಳು ಹಿಂದೆ ಸರಿಯುವಂತೆ ಮಾಡಿ ಕಸ ಗುಡಿಸುವ ಪೌರಕಾರ್ಮಿಕರಷ್ಟೆ ಖಾಯಂಗೊಳ್ಳುವಂತೆ ಮಾಡಿ ಹೊರಗುತ್ತಿಗೆ ನೌಕರರನ್ನು ಬಳಸಿಕೊಳ್ಳಲಾಯಿತು ಎಂಬುದು ಹೊರಗುತ್ತಿಗೆ ನೌಕರರ ಆಕ್ರೋಶವಾಗಿದೆ.
ಈ ಸಾರಿಯು ಸಹ ಹೊರಗುತ್ತಿಗೆ ನೌಕರರನ್ನು ತಮ್ಮ ಹಿತಾಸಕ್ತಿಗಳಿಗೆ ಬಳಸಿಕೊಂಡು ಹೊರಗುತ್ತಿಗೆ ನೌಕರರ ಕೈಗೆ ಚಿಪ್ಪು ಕೊಡಲಾಗಿದೆ ಎಂದು ಹೊರಗುತ್ತಿಗೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವತಃ ಸಿದ್ದರಾಮಯ್ಯ ಮಾಡಿದ ಘೋಷಣೆ ಹುಸೀಯಾಗುವುದರೊಂದಿಗೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಟ್ಟ ಅನುಭವವಾಗಿದೆ.ಮುಂದಿನ ದಿನಗಳಲ್ಲಿ ನೇರಪಾವತಿ ಮಾಡುವುದಾಗಿ ಸಿದ್ದರಾಮಯ್ಯ ಹೊರಗುತ್ತಿಗೆ ನೌಕರರ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಿದ್ದಾರೆ.
ಈ ಅನ್ಯಾಯದ ವಿರುದ್ದ ದೊಡ್ಡ ಮಟ್ಟದ ಹೋರಾಟವನ್ನು ನಡೆಸುವುದಾಗಿ ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ದಾವಣಗೆರೆಯ ವಿರೇಶ್ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.