Sunday, November 8, 2026
spot_img

ಉಳುಮೆ ಮಾಡದಿರುವ ಭೂಮಿ ತೋರಿಸಿ:ಮಂಡ್ಯ ಶಾಸಕರಿಗೆ ರೈತರ ಸವಾಲು

**ಮುದ್ದನಘಟ್ಟ ಗ್ರಾಮಸ್ಥರ ಆಕ್ರೋಶ: ಶಾಸಕರು ಸ್ಥಳಕ್ಕೆ ಬಂದು ಪರಿಶೀಲಿಸಲಿ, ಖಾಲಿ ಜಾಗ ತೋರಿಸಲಿ**

ಮಂಡ್ಯ: ತಾಲೂಕಿನ ಬಸರಾಳು ಸಮೀಪದ ಮುದ್ದನಘಟ್ಟ ಹಾಗೂ ಹೆಗ್ಗಡತಿಹಳ್ಳಿ ಗ್ರಾಮಗಳಲ್ಲಿ ಖಾಲಿ ಜಾಗವೇ ಇಲ್ಲ ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ. ಶಾಸಕರು ಹಾಗೂ ಜೆಡಿಎಸ್ ಮುಖಂಡರು ಸುಮ್ಮನೆ ದಾರಿ ತಪ್ಪಿಸುತ್ತಿದ್ದಾರೆ, ಶಾಸಕರೇ ಖುದ್ದಾಗಿ ಬಂದು ಪರಿಶೀಲನೆ ನಡೆಸಿ ಖಾಲಿ ಜಾಗ ಎಲ್ಲಿದೆ ಎಂಬುದನ್ನು ತೋರಿಸಲಿ ಎಂದು ದೇವರಾಜೇಗೌಡ, ಚಿಕ್ಕೇಗೌಡ, ರಮೇಶ್, ವಸಂತ್, ರಾಜು, ವೆಂಕಟೇಶ್, ಕುಮಾರ್ ಸೇರಿದಂತೆ ಹಲವು ಗ್ರಾಮಸ್ಥರು ಸವಾಲು ಹಾಕಿದರು.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮನ್ನು ಯಾರೂ ಪ್ರಚೋದಿಸುತ್ತಿಲ್ಲ, ಇನ್ನೊಬ್ಬರ ಮಾತು ಕೇಳಿ ಬದುಕು ಕಳೆದುಕೊಳ್ಳುವವರೂ ನಾವಲ್ಲ. ಈ ಭೂಮಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಕೈಗಾರಿಕೆಗೆ ಜಮೀನು ಹೋದರೆ ಎಲ್ಲಿಗೆ ಹೋಗುವುದು?” ಎಂದು ಆತಂಕ ವ್ಯಕ್ತಪಡಿಸಿದರು.

**ರೈತರ ಅಭಿಪ್ರಾಯ ಕೇಳಿಲ್ಲ:** ಯಾರೊಬ್ಬರೂ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ; ಶಾಸಕರು ಕುಳಿತಲ್ಲೇ ಉಪಗ್ರಹ ಚಿತ್ರ ತೋರಿಸಿ ಖಾಲಿ ಜಾಗ ಎನ್ನುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಜಿಲ್ಲಾಡಳಿತವು ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿಯ ಸರ್ವೆ ನಂಬರ್‌ಗಳನ್ನು ಕಂಪ್ಯೂಟರ್‌ನಲ್ಲಿ ಗೋಮಾಳ ಎಂದು ತೋರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜೆಡಿಎಸ್ ನಾಯಕರೂ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆತಂದು ಪರಿಶೀಲಿಸುವ ಕಾರ್ಯಕ್ಕೆ ಮುಂದಾಗಿಲ್ಲ, ರೈತರ ಅಭಿಪ್ರಾಯವನ್ನೂ ಪಡೆದಿಲ್ಲ. ಮಂಡ್ಯದಿಂದ ಕೇವಲ 30 ಕಿ.ಮೀ. ದೂರದ ಜಾಗಕ್ಕೆ ಬಂದು ನೋಡಿದರಷ್ಟೇ ವಾಸ್ತವ ಅರಿವಾಗುತ್ತದೆ ಎಂದು ಖಡಕ್ಕಾಗಿ ಹೇಳಿದರು.

ಶಾಸಕರು ಹೇಳುವಂತೆ 107 ಎಕರೆ ಖಾಲಿ ಜಾಗ ಎಲ್ಲಿಯೂ ಇಲ್ಲ, ಎಲ್ಲವೂ ಉಳುಮೆಯಾಗುತ್ತಿದೆ. ಬೆಳೆ ಬೆಳೆಯಲಾಗುತ್ತಿದೆ; ತೆಂಗಿನ ತೋಟ, ಮರಗಳಿವೆ, ಮನೆಗಳೂ ನಿರ್ಮಾಣವಾಗಿವೆ. ಇವನ್ನೆಲ್ಲ ನೋಡದೆ ಖಾಲಿ ಜಾಗ ಎಂದರೆ ಹೇಗೆ? ತಾತನ ಕಾಲದಿಂದ ಉಳುಮೆ ಮಾಡಿಕೊಂಡು ಬಂದ ಭೂಮಿಯೇ ನಮ್ಮ ಬದುಕಿನ ಆಧಾರ. ಈಗ ಇದನ್ನು ಕಿತ್ತುಕೊಂಡರೆ ವಿಷ ಕುಡಿಯುವುದೊಂದೇ ದಾರಿ ಎಂದು ನೊಂದು ನುಡಿದರು.

**ಗ್ರಾಮಸ್ಥರ ಆಗ್ರಹಗಳು:**

– ಶಾಸಕ ಪಿ. ರವಿಕುಮಾರ್ ಅವರು ಕಂದಾಯ ಹಾಗೂ ಸರ್ವೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ರೈತರ ಸಮ್ಮುಖದಲ್ಲೇ ಪರಿಶೀಲನೆ ನಡೆಸಬೇಕು.
– ಮಂಜೂರಾತಿ ದಾಖಲೆಗಳು, ಮಂಜೂರಾತಿಗೆ ಸಲ್ಲಿಸಿರುವ ಅರ್ಜಿಗಳು, ಸಾಗುವಳಿ, ಬೆಳೆಗಳು ಹಾಗೂ ಬೋರ್‌ವೆಲ್‌ಗಳ ವಿವರ ಪರಿಶೀಲಿಸಿ ವಾಸ್ತವ ವರದಿ ಸಿದ್ಧಪಡಿಸಬೇಕು.
– ಬಾಧಿತ ರೈತರ ಸಭೆ ನಡೆಸಿ ಪ್ರತಿಯೊಬ್ಬರ ಅಹವಾಲು ದಾಖಲಿಸಬೇಕು.
– ರೈತರ ದಾಖಲೆ ಹಾಗೂ ಬೇಡಿಕೆಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಭೂಮಿ ಹಸ್ತಾಂತರ ಮತ್ತು ತೆರವು ಕ್ರಮಗಳನ್ನು ಮುಂದುವರಿಸಬಾರದು.
– ಮಂಜೂರಾತಿದಾರರನ್ನು ಕೃಷಿಕರು ಹಾಗೂ ಬಾಧಿತ ಕುಟುಂಬಗಳೆಂದು ಪರಿಗಣಿಸಿ ಸೂಕ್ತ ಪರಿಹಾರ, ಜೀವನ ಭದ್ರತೆ ಮತ್ತು ಉದ್ಯೋಗದ ಬಗ್ಗೆ ಸ್ಪಷ್ಟ ಭರವಸೆ ನೀಡಿ, ರೈತರ ಒಪ್ಪಿಗೆ ಪಡೆದು ಮುಂದುವರಿಯಬೇಕು.

**ಅಭಿವೃದ್ಧಿಗೆ ವಿರೋಧವಿಲ್ಲ:** ಅಭಿವೃದ್ಧಿಯನ್ನು ಸ್ವಾಗತಿಸುತ್ತೇವೆ, ಆದರೆ ಅದರಲ್ಲಿ ರೈತರ ಬದುಕಿಗೂ ನ್ಯಾಯ ಸಿಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ನಮ್ಮ ಬದುಕಿನ ಬಗ್ಗೆ ಮಾತನಾಡಲು ಯಾರ ಪ್ರಚೋದನೆಯೂ ಬೇಕಿಲ್ಲ; ನಮ್ಮ ಜಮೀನು, ಬೆಳೆ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ನಿರ್ಧರಿಸುವ ಅರಿವು ನಮಗಿದೆ ಎಂದರು. ಯಾರೋ ಎತ್ತಿಕಟ್ಟಿದ್ದರೆ ಮಾತನಾಡುವಷ್ಟು ವಿವೇಚನೆಯಿಲ್ಲದವರಲ್ಲ. ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರ ಗಮನಕ್ಕೆ ನಮ್ಮ ಸಂಕಷ್ಟ ತರುವುದು ನಮ್ಮ ಹಕ್ಕು; ಅದಕ್ಕೆ ರಾಜಕಾರಣದ ಬಣ್ಣ ಲೇಪಿಸುವುದು, ರೈತರ ಅಹವಾಲನ್ನು ಕಡೆಗಣಿಸುವುದು ಸರಿಯಲ್ಲ ಎಂದು ನೇರವಾಗಿ ಹೇಳಿದರು.

ಕಾರ್ಖಾನೆ ಮತ್ತು ಅಭಿವೃದ್ಧಿ ಯೋಜನೆ ಬಂದರೆ ಸ್ವಾಗತಿಸುವುದಾಗಿ ಮಹಾಲಿಂಗೇಗೌಡರು ಈಗಾಗಲೇ ಹೇಳಿದ್ದಾರೆ. ರೈತರಿಗೆ ನ್ಯಾಯ ದೊರೆತರೆ ತಮ್ಮ ಕುಟುಂಬದವರು ಕೃಷಿ ಮಾಡುತ್ತಿರುವ ಜಮೀನನ್ನು ಯೋಜನೆಗೆ ಬಿಟ್ಟುಕೊಡಲೂ ಸಿದ್ಧ ಎಂದಿದ್ದಾರೆ. ಹೀಗಿರುವಾಗ ತಮ್ಮನ್ನೇ ಅಭಿವೃದ್ಧಿಗೆ ಅಡ್ಡಿಪಡಿಸುವವರೆಂದು ಬಿಂಬಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ರೈತರ ಅಹವಾಲು ಆಲಿಸಿ ಪರಿಹಾರ ಕಂಡುಕೊಳ್ಳಬೇಕಾದ ಶಾಸಕರು ಸಮಸ್ಯೆಯನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕುತ್ತಿರುವುದು ಉದ್ಧಟತನದ ಧೋರಣೆ. ಜನಪ್ರತಿನಿಧಿಗಳಾಗಿ ನಮ್ಮ ನೋವನ್ನು ಆಲಿಸಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಮಾತನಾಡಬೇಕು ಎಂದು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!