Monday, November 23, 2026
spot_img

ಕನಿಷ್ಠ ವೇತನ ಜಾರಿಗೆ ಆಗ್ರಹ: ನ.25 ರಂದು ಹೊರಗುತ್ತಿಗೆ ನೌಕರರಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯ

ಕನಿಷ್ಠ ವೇತನ ಜಾರಿಗೆ ಆಗ್ರಹ: ನ.25 ರಂದು ಹೊರಗುತ್ತಿಗೆ ನೌಕರರಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯ

ನ.30 ರಂದು ಶಾಸಕರು, ಸಚಿವರಿಗೆ ಮನವಿ; ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯ

ಮಂಡ್ಯ: ರಾಜ್ಯ ಕಾರ್ಮಿಕ ಇಲಾಖೆ ಪರಿಷ್ಕರಿಸಿ ಹೊರಡಿಸಿರುವ ಕನಿಷ್ಠ ವೇತನವನ್ನು ಜಾರಿಗೊಳಿಸುವಂತೆ ಆಗ್ರಹಿಸಿ, ರಾಜ್ಯದ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರು ನ.25 ರಂದು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ತಿಳಿಸಿದರು.

ಲಕ್ಷಾಂತರ ಹೊರಗುತ್ತಿಗೆ ನೌಕರರು ಆಯಾ ಕಚೇರಿಗಳ ಎದುರು ಕಪ್ಪುಪಟ್ಟಿ ಧರಿಸಿ ಕೆಲಸ ಮಾಡಲಿದ್ದಾರೆ. ನ.30 ರಂದು ತಮ್ಮ ಕ್ಷೇತ್ರದ ಶಾಸಕರು ಮತ್ತು ಸಚಿವರ ಮನೆ ಅಥವಾ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ. ಡಿ.2 ರಿಂದ ಬೆಳಗಾವಿಯಲ್ಲಿ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಿ, ಕನಿಷ್ಠ ವೇತನ ಜಾರಿಯಾಗಬೇಕೆಂದು ಒತ್ತಾಯಿಸಲಿದ್ದಾರೆ.

ಹೊರಗುತ್ತಿಗೆ ನೌಕರರ ಕನಿಷ್ಠ ವೇತನವನ್ನು ಪರಿಷ್ಕರಿಸಿ ಕಾರ್ಮಿಕ ಇಲಾಖೆ ಕಳೆದ ಮೇ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಉದ್ದಿಮೆಗಳು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆಗೆ ಯತ್ನಿಸಿದ್ದವು. ಈ ನಡುವೆ ಸರ್ಕಾರವೇ ಅಧಿಸೂಚನೆಯನ್ನು ತಡೆಹಿಡಿಯಲು ಸುತ್ತೋಲೆ ಹೊರಡಿಸಿ ನೌಕರರಿಗೆ ದ್ರೋಹ ಬಗೆದಿದೆ ಎಂದು ಅವರು ಆರೋಪಿಸಿದರು. ನಂತರ ವಿವಿಧ ಸಂಘಟನೆಗಳ ಹೋರಾಟ ಮತ್ತು ನ್ಯಾಯಾಲಯದ ಮಧ್ಯಪ್ರವೇಶದಿಂದ ಆ ಸುತ್ತೋಲೆಗೆ ಮಾನ್ಯತೆ ಇಲ್ಲದಂತಾಗಿದೆ. ಹೀಗಾಗಿ ಕನಿಷ್ಠ ವೇತನ ಜಾರಿಗೆ ಈಗ ಯಾವುದೇ ಅಡ್ಡಿ ಇಲ್ಲ. ಆದರೂ ಕೆಲವೇ ಇಲಾಖೆಗಳನ್ನು ಹೊರತುಪಡಿಸಿ ಬಹುತೇಕ ಇಲಾಖೆಗಳಲ್ಲಿ ಜಾರಿಯಾಗಿಲ್ಲ ಎಂದರು.

ಹಲವು ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರು ಸಂಘಟಿತರಾಗಿಲ್ಲದ ಕಾರಣ ಗುತ್ತಿಗೆ ಏಜೆನ್ಸಿಗಳು ಕನಿಷ್ಠ ವೇತನ ನೀಡುತ್ತಿಲ್ಲ. ನೀಡಿದರೂ ಅದರಲ್ಲಿ ದೊಡ್ಡ ಪಾಲನ್ನು ಮರಳಿ ಕಸಿದುಕೊಳ್ಳುತ್ತಿವೆ. ಇಎಸ್‌ಐ, ಪಿಎಫ್ ಬಗ್ಗೆ ಕೇಳುವಂತೆಯೇ ಇಲ್ಲ. ಇಲಾಖೆಗಳ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಒಳಮೈತ್ರಿಯಿಂದ ನೌಕರರ ನ್ಯಾಯಬದ್ಧ ಹಕ್ಕು ಕಸಿಯಲಾಗುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕ ಇಲಾಖೆ ಮತ್ತು ಭವಿಷ್ಯ ನಿಧಿ ಇಲಾಖೆಗಳು ಸಹ ಸಬೂಬು ಹೇಳಿ ಕಾಲಹರಣ ಮಾಡುತ್ತಿವೆ, ಪ್ರಶ್ನಿಸಿದರೆ ದೂರು ಕೊಡಿ ಎನ್ನುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಮಿಕ ಇಲಾಖೆ, ಭವಿಷ್ಯ ನಿಧಿ ಮಂಡಳಿ ಹಾಗೂ ಇಎಸ್‌ಐ ಇಲಾಖೆಗಳು ತಮ್ಮ ಶಾಸನಬದ್ಧ ಕರ್ತವ್ಯವನ್ನು ಸಮರ್ಪಕವಾಗಿ ಪಾಲಿಸಬೇಕೆಂದು ಒತ್ತಾಯಿಸಿದರು.

ಸಂಘದ ಹಕ್ಕೊತ್ತಾಯಗಳು:

1. ಕಳೆದ ಮೇ ತಿಂಗಳಲ್ಲಿ ಕಾರ್ಮಿಕ ಇಲಾಖೆ ಹೊರಡಿಸಿದ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಿ, ಹಿಂಬಾಕಿ ನೀಡಬೇಕು.

2. ಕನಿಷ್ಠ ವೇತನ, ಇಎಸ್‌ಐ, ಭವಿಷ್ಯ ನಿಧಿ ನೀಡದೆ ಕಾರ್ಮಿಕ ಕಾಯ್ದೆ ಉಲ್ಲಂಘಿಸುವ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು.

3. ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಪೌರಕಾರ್ಮಿಕರ ಮಾದರಿಯಲ್ಲಿ ನೌಕರರನ್ನು ನೇರಪಾವತಿಯಡಿಗೆ ತರಬೇಕು.

ಮಿಮ್ಸ್ ಹೊರಗುತ್ತಿಗೆ ನೌಕರರ ಸಂಘದ ವೆಂಕಟಲಕ್ಷ್ಮೀ, ಚಿನ್ನರಾಜು, ಶ್ರುತಿ, ಶಿವರಾಮ, ಕಾವೇರಿ ನೀರಾವರಿ ನಿಗಮ ಸವಡೆಗಳ ಸಂಘದ ರಾಮೇಗೌಡ, ರವಿ ಹಾಗೂ ನಗರಸಭೆ ಹೊರಗುತ್ತಿಗೆ ನೌಕರರ ಸಂಘದ ದಿನೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!