**‘ಬಿಸಿಯೂಟ’ ಹೊಣೆ ಅಡುಗೆ ಸಿಬ್ಬಂದಿಗೇ ಇರಲಿ**
**ಕ್ಲಸ್ಟರ್ ಕಿಚನ್ ರಚನೆಗೆ ಅಕ್ಷರ ದಾಸೋಹ ನೌಕರರ ವಿರೋಧ**
ಮಂಡ್ಯ: ಕ್ಲಸ್ಟರ್ ಕಿಚನ್ ರಚಿಸಬಾರದು ಮತ್ತು ಬಿಸಿಯೂಟ ಜವಾಬ್ದಾರಿಯನ್ನು ಸಂಪೂರ್ಣವಾಗಿ ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಶಾಲಾ ಶಿಕ್ಷಕರಿಗೆ ಈ ಜವಾಬ್ದಾರಿ ವಹಿಸಿರುವುದು ಖಂಡನೀಯ. ಶಿಕ್ಷಕರು ಶಾಲಾ ಪಠ್ಯಕ್ರಮಗಳಿಗೆ ಗಮನ ಕೊಡುವುದು ಮುಖ್ಯವಾಗಬೇಕು. 2012 ಜೂನ್ 4ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಸಿಯೂಟ ಯೋಜನೆಯನ್ನು ಸ್ವಯಂಸೇವಾ ಸಂಸ್ಥೆಗಳಿಗೆ ಕೊಡುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ ಎಂದು ಆರೋಪಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಹದೇವಮ್ಮ ಮಾತನಾಡಿ, 2012 ಡಿಸೆಂಬರ್ 17ರ ಶಿಕ್ಷಣ ಇಲಾಖೆಯ ನಡಾವಳಿಯಂತೆ ಅಕ್ಷರ ದಾಸೋಹ ಯೋಜನೆಯ ಜಂಟಿ ಖಾತೆಯನ್ನು ಮುಖ್ಯ ಅಡುಗೆಯವರು ಹಾಗೂ ಎಸ್ಡಿಎಂಸಿ ಪದನಿಮಿತ್ತ ಮುಖ್ಯಶಿಕ್ಷಕರು ನಿರವಹಿಸುವ ಕೆಲಸವನ್ನು ಈಗ ಮುಂದುವರಿಸಬಹುದು. ಶಾಲಾ ಮುಖ್ಯಶಿಕ್ಷಕರು ಜವಾಬ್ದಾರಿ ಬೇಡ ಎಂದರೆ ಮುಖ್ಯ ಅಡುಗೆಯವರಿಗೆ ಮತ್ತು ಎಸ್ಡಿಎಂಸಿ ಅಧ್ಯಕ್ಷರ ಜಂಟಿ ಖಾತೆ ಮಾಡಬಹುದು. ಮಕ್ಕಳಿಗೆ ಬಿಸಿಯೂಟ ಹಕ್ಕಾಗಿದೆ. ಬಿಸಿಯೂಟದ ಅಡುಗೆಯವರು ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಕೆಲವು ಕಡೆ ಪದವೀಧರರಾಗಿದ್ದಾರೆ ಹಾಗಾಗಿ ನಿರ್ವಹಿಸುವ ಅರ್ಹತೆ ಇದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ಸೆಂಟ್ರಲ್ ಕ್ಲಸ್ಟರ್ ಕಿಚನ್ ಪ್ರಾರಂಭಿಸುವ ಯೋಜನೆ ನಿಧಾನವಾಗಿ ಧಾರ್ಮಿಕ ಜಾತಿಗಳ ಮತ್ತು ಖಾಸಗಿಯವರ ಪಾಲು ಮಾಡಲು ರಹದಾರಿಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಜಾರಿ ಮಾಡದೇ ಈ ಕ್ಲಸ್ಟರ್ ಕಿಚನ್ ಪದ್ಧತಿಯನ್ನು ಕೈಬಿಡಬೇಕೆಂದು ಆಗ್ರಹಿಸಿ ಬಿಸಿಯೂಟ ನೌಕರರ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಎಚ್ಚರಿಕೆ ಎಂದು ಸರ್ಕಾರ ಭಾವಿಸಬೇಕು ಎಂದು ಆಗ್ರಹಿಸಿದರು.
ಸಂಘದ ಖಜಾಂಚಿ ಭಾಗ್ಯಮ್ಮ, ಎ.ಬಿ.ಶಶಿಕಲಾ, ಎಸ್.ಪಿ.ಶಾರದಮ್ಮ, ಕೆ.ಎಂ.ಸುನಂದಾ, ಕೆ.ವಿ.ಪದ್ಮಾ, ಸರಸ್ವತಿ, ಮಂಗಳಗೌರಿ, ಚಂದ್ರು ಭಾಗವಹಿಸಿದ್ದರು.


