*ಹೈಕೋರ್ಟ್ ನಲ್ಲಿ ಬೇಕಿದೆ ಕನ್ನಡದ ವಾಣಿ ಮತ್ತು ಜಿಲ್ಲೆಗೊಂದು ಸರ್ಕಾರಿ ಕಾನೂನು ಕಾಲೇಜು*
✍️ ಅಬಿ ಒಕ್ಕಲಿಗ
*ನಾವು Dravida ಕನ್ನಡಿಗರು ಚಳುವಳಿ*
ನ್ಯಾಯದ ದಾರಿ ಈಗ ತುಂಬ ದುಬಾರಿಯಾಗಿದೆ.
ಬಡವನಿಗೂ ನ್ಯಾಯ ಸಿಗಬೇಕು ಎನ್ನುವುದು ಪ್ರಜಾಪ್ರಭುತ್ವದ ಮೂಲ ಆಶಯ. ಆದರೆ, ಪ್ರಸ್ತುತ ನಮ್ಮ ನ್ಯಾಯಾಂಗ ಮತ್ತು ಕಾನೂನು ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದರೆ ಇದು ಸಾಮಾನ್ಯ ಜನರಿಗೆ ಎಷ್ಟು ಕೈಗೆಟುಕುತ್ತಿದೆ ಎಂಬ ಯಕ್ಷಪ್ರಶ್ನೆ ಕಾಡುತ್ತದೆ. ಲಕ್ಷಗಟ್ಟಲೆ ಫೀಸು ಕೊಟ್ಟು ನ್ಯಾಯ ಪಡೆಯುವ ಅನಿವಾರ್ಯತೆಯಿಂದಾಗಿ ಜನಸಮಾನ್ಯರು ನ್ಯಾಯಲಯದ ಅಂಗಳಕ್ಕು ತಲುಪುವುದು ದುಸ್ತರವಾಗಿ ಉಳ್ಳವರಿಗೆ ಮಾತ್ರ ನ್ಯಾಯಾಲಯದ ಬಾಗಿಲು ಸದಾ ತೆರೆದಿರುವಂತಾಗಿದೆ.
ಕರ್ನಾಟಕದ ಭವಿಷ್ಯದ ಹಿತದೃಷ್ಟಿಯಿಂದ ಇಂದು ಮೂರು ಪ್ರಮುಖ ಸುಧಾರಣೆಗಳು ತುರ್ತಾಗಿ ಆಗಬೇಕಿದೆ:ಜಿಲ್ಲೆಗೊಂದು ಸರ್ಕಾರಿ ಕಾನೂನು ಕಾಲೇಜು, ಹೈಕೋರ್ಟ್ನಲ್ಲಿ ಕನ್ನಡದ ಬಳಕೆ, ಮತ್ತು ಇಡೀ ರಾಜ್ಯಕ್ಕೆ ಒಂದೇ ಕಾನೂನು ವಿಶ್ವವಿದ್ಯಾಲಯದ ಸ್ಥಿರತೆ.
*1)ಜಿಲ್ಲೆಗೊಂದು ಸರ್ಕಾರಿ ಕಾನೂನು ಕಾಲೇಜು ಶುರು ಮಾಡಬೇಕು*
ಇಂದು ಕಾನೂನು ಶಿಕ್ಷಣವು ಅತಿಯಾಗಿ ವಾಣಿಜ್ಯೀಕರಣಗೊಳ್ಳುತ್ತಿದೆ. ಮೆಟ್ರೋ ಸಿಟಿಗಳಲ್ಲಿರುವ ಐಷಾರಾಮಿ ಕಾನೂನು ಕಾಲೇಜುಗಳ ಶುಲ್ಕ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಎಟುಕದ ಗಗನಕುಸುಮವಾಗಿದೆ. ಸರ್ಕಾರಿ ಕಾನೂನು ಕಾಲೇಜುಗಳು ಬೆರಳೆಣಿಕೆಯಷ್ಟಿವೆ. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಮಾದರಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆಯಾದರೆ, ಕೃಷಿಕರ, ಕಾರ್ಮಿಕರ ಜನಸಾಮಾನ್ಯರ ಮಕ್ಕಳು ಕಾನೂನು ಪದವಿ ಪಡೆದು ಸಾಮಾನ್ಯರ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗುತ್ತದೆ.ಎಲ್ಲರಿಗೂ ನ್ಯಾಯವನ್ನು ಖಚಿತಪಡಿಸಲು ಅಗತ್ಯ ಎರ್ಪಾಡು ಸಾಧ್ಯವಾಗುತ್ತದೆ.
*2)ಹೈಕೋರ್ಟ್ ನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡದಲ್ಲಿ ಕೂಡ ವ್ಯವಹರಿಸಲು ಅವಕಾಶ ಕೊಡಬೇಕು*
ನಮ್ಮ ಕೆಳ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ವಾದ ಮಂಡನೆ ಮತ್ತು ತೀರ್ಪುಗಳು ಬರುತ್ತಿವೆಯಾದರೂ, ರಾಜ್ಯದ ಅತ್ಯುನ್ನತ ನ್ಯಾಯಾಲಯವಾದ ಹೈಕೋರ್ಟ್ನಲ್ಲಿ ಇಂದಿಗೂ ಇಂಗ್ಲಿಷ್ ಭಾಷೆಯದ್ದೇ ಕಾರುಬಾರು. ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರುವ ಸಾಮಾನ್ಯ ಕನ್ನಡಿಗನಿಗೆ ತನ್ನದೇ ಪ್ರಕರಣದ ಕಲಾಪದಲ್ಲಿ ವಕೀಲರು ಏನು ವಾದಿಸುತ್ತಿದ್ದಾರೆ, ನ್ಯಾಯಾಧೀಶರು ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗುವುದೇ ಇಲ್ಲ. ೨೦೧೪ರಲ್ಲೇ ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ಕನ್ನಡ ಬಳಸಲು ಸಚಿವ ಸಂಪುಟದ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿತ್ತು. ಇತ್ತೀಚಿನ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯಲ್ಲೂ ಇದಕ್ಕೆ ಒತ್ತು ನೀಡಲಾಗಿದೆ. ಆದರೆ ದೆಹಲಿ ಮಟ್ಟದಲ್ಲಿ ಇದಕ್ಕೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಸಂವಿಧಾನದ ೩೪೮(೨)ನೇ ವಿಧಿಯಡಿ ವಿಶೇಷ ರಾಜತಾಂತ್ರಿಕ ಒತ್ತಡ ತಂದು ಹೈಕೋರ್ಟ್ನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡದಲ್ಲೂ ವ್ಯವಹರಿಸಲು ತಕ್ಷಣ ಅವಕಾಶ ಕಲ್ಪಿಸಬೇಕಿದೆ.
*3)ಕರ್ನಾಟಕಕ್ಕೆ ಒಂದೇ ಕಾನೂನು ವಿಶ್ವವಿದ್ಯಾಲಯ ಇರಬೇಕು*
೨೦೦೯ರಲ್ಲಿ ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಸ್ಥಾಪನೆಯಾದಾಗ ಇಡೀ ರಾಜ್ಯದ ಕಾನೂನು ಶಿಕ್ಷಣಕ್ಕೆ ಒಂದು ಏಕರೂಪದ ಚೌಕಟ್ಟು ಸಿಕ್ಕಿತು. ಪ್ರಸ್ತುತ ೧೯೦ಕ್ಕೂ ಹೆಚ್ಚು ಕಾಲೇಜುಗಳು ಇದರ ಅಡಿಯಲ್ಲಿವೆ. ಆದರೆ, ರಾಜಕೀಯ ಲಾಭಕ್ಕಾಗಿ ಅಥವಾ ಪ್ರಾದೇಶಿಕ ಪ್ರತಿಷ್ಠೆಗಾಗಿ ಮತ್ತೊಂದು ಕಾನೂನು ವಿಶ್ವವಿದ್ಯಾಲಯ ಸ್ಥಾಪಿಸುವ ಆಲೋಚನೆಗಳು ಆಗಾಗ ಕೇಳಿಬರುತ್ತಿರುತ್ತವೆ. ಇಂತಹ ವಿಭಜನೆ ಶೈಕ್ಷಣಿಕ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸುತ್ತದೆ. ನಮಗೆ ಬೇಕಿರುವುದು ವಿಶ್ವವಿದ್ಯಾಲಯಗಳ ವಿಭಜನೆಯಲ್ಲ, ಬದಲಿಗೆ ಹುಬ್ಬಳ್ಳಿಯ KSLU ಅನ್ನು ಜಾಗತಿಕ ಮಟ್ಟಕ್ಕೆ ಬಲಪಡಿಸುವುದು.
ಕಾನೂನು ಎನ್ನುವುದು ಕೇವಲ ಕಪ್ಪು ಕೋಟು ಧರಿಸಿದವರ ಸ್ವತ್ತಾಗಬಾರದು. ಅದು ಪ್ರತಿಯೊಬ್ಬ ಪ್ರಜೆಯ ಭಾಷೆಯಲ್ಲಿ, ಅವನದೇ ಜಿಲ್ಲೆಯ ಶೈಕ್ಷಣಿಕ ಆವರಣದಲ್ಲಿ ಸಿಗುವಂತಾಗಬೇಕು. ಸರ್ಕಾರ ಕೇವಲ ಭರವಸೆಗಳನ್ನು ನೀಡದೆ, ಈ ಮೂರು ಬೇಡಿಕೆಗಳನ್ನು ಈಡೇರಿಸಲು ದೃಢವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಆಗಲೇ ‘ಕನ್ನಡ ನಾಡಿನಲ್ಲಿ ಕನ್ನಡದ್ದೇ ಸಾರ್ವಭೌಮತ್ವ’ ಎಂಬ ಘೋಷಣೆಗೆ ಪೂರ್ಣ ಅರ್ಥ ಸಿಗಲು ಸಾಧ್ಯ.
ಈ ಆಂದೋಲನಕ್ಕೆ ಕನ್ನಡಿಗರು ಬೆಂಬಲವಾಗಿ ನಿಲ್ಲಿ.


